janadhvani

Kannada Online News Paper

ಕಾಂಗ್ರೆಸ್ ಕುರಿತ ಧರ್ಮಗುರುಗಳ ಹೇಳಿಕೆ: ಸಲಹೆಯಾಗಿ ಸ್ವೀಕರಿಸಲಾಗುವುದು- ಎನ್.ಎಸ್ ಕರೀಂ

ಕಾಂಗ್ರೆಸ್ ಪಕ್ಷದ ಜಾತ್ಯತೀತತೆಗೆ ಸಂಬಂಧಿಸಿದಂತೆ ಪ್ರಮುಖ ಮುಸ್ಲಿಂ ಧರ್ಮಗುರುವೊಬ್ಬರು ನೀಡಿರುವ ಹೇಳಿಕೆಯನ್ನು ಪಕ್ಷವು ಟೀಕೆಯಾಗಿ ಕಾಣುವ ಬದಲು ಪ್ರಾಮಾಣಿಕ ಅನಿಸಿಕೆಯಾಗಿ ಪರಿಗಣಿಸಿ ಸೂಕ್ತ ಚರ್ಚೆ ನಡೆಸಲಿದೆ ಎಂದು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಹಾಜಿ ಎನ್ ಎಸ್ ಕರೀಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

ಕಾಂಗ್ರೆಸ್ ಪಕ್ಷವು ಯಾವತ್ತೂ ಜಾತ್ಯತೀತ ಸಿದ್ಧಾಂತಗಳಿಗೆ ಬದ್ಧವಾಗಿದೆ.ಅದಾಗ್ಯೂ ಕೆಲವು ನಾಯಕರ ವರ್ತನೆಗೆ ಸಂಬಂಧಿಸಿದಂತೆ ಧಾರ್ಮಿಕ ಮುಖಂಡರಲ್ಲಿ ಸಂದೇಹ ಉಂಟಾಗಿದ್ದರೆ ಅದನ್ನು ನಿವಾರಿಸುವುದು ಪಕ್ಷದ ಕರ್ತವ್ಯ. ಯಾವುದೇ ಧರ್ಮದ ನಾಯಕರಾಗಿರಲಿ, ಅವರ ಹೇಳಿಕೆಗಳಿಗೆ ಅದರದೇ ಘನತೆ, ಗೌರವಗಳಿರುತ್ತವೆ.ಅವರ ವಿರೋಧ ಅಭಿಪ್ರಾಯಗಳನ್ನು ಕೂಡ ಗಣನೆಗೆ ತೆಗೆದುಕೊಂಡು ಧನಾತ್ಮಕವಾಗಿ ಸ್ವೀಕರಿಸಲು ಪಕ್ಷ ಬಯಸುತ್ತದೆ.

ಈ ನಡುವೆ ಕಾಂಗ್ರೆಸ್ ನಾಯಕರೊಬ್ಬರು ಧರ್ಮಗುರುಗಳಿಗೆ ಸವಾಲೆಸೆಯುವ ರೀತಿಯಲ್ಲಿ ಪ್ರತಿಕ್ರಿಯೆ ನೀಡಿರುವುದನ್ನು ಪಕ್ಷವು ಅಂಗೀಕರಿಸುವುದಿಲ್ಲ. ಅದನ್ನು ಅವರ ವೈಯಕ್ತಿಕ ಹೇಳಿಕೆಯಾಗಿ ಪರಿಗಣಿಸಬೇಕೇ ಹೊರತು ಪಕ್ಷದ ನಿಲುವು ಎಂಬುದಾಗಿ ತಿಳಿದುಕೊಳ್ಳಬಾರದು ಎಂದವರು ತಿಳಿಸಿದರು.

ಧರ್ಮಗುರುಗಳು ಯಾವುದೇ ಪಕ್ಷದ ಪರವಾಗಿಯೂ ಮಾತನಾಡುವುದಿಲ್ಲ. ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾದಾಗ ವಸ್ತುನಿಷ್ಠವಾಗಿ ಪ್ರತಿಕ್ರಿಯಿಸುತ್ತಾರೆ. ಆ ಪ್ರತಿಕ್ರಿಯೆಗಳನ್ನು ಆತ್ಮಾವಲೋಕನಕ್ಕೆ ಒಳಪಡಿಸಿ ಮುನ್ನಡೆಯಲು ಮತ್ತು ಎಲ್ಲ ಧರ್ಮಗುರುಗಳ ಅನಿಸಿಕೆಗಳನ್ನು ಗೌರವಿಸಲು ಪಕ್ಷ ಸಿದ್ಧವಿದೆ ಎಂದು ಅವರು ತಿಳಿಸಿದರು.