janadhvani

Kannada Online News Paper

ಸಿಎಎ ಹೋರಾಟಗಾರ ಕಫೀಲ್ ಖಾನ್ ಬಿಡುಗಡೆ- ಪ್ರಕರಣ ಕೈಬಿಡುವಂತೆ ಕೋರ್ಟ್ ಆದೇಶ

ನವದೆಹಲಿ,ಸೆ.01: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಉದ್ರೇಕಕಾರಿ ಭಾಷಣ ಮಾಡಿದ ಆರೋಪದ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್​ಎಸ್​ಎ) ಅಡಿ ಬಂಧಿತರಾಗಿದ್ದ ಡಾ. ಕಫೀಲ್ ಖಾನ್ ಅವರಿಗೆ ಆರೇಳು ತಿಂಗಳ ನಂತರ ಬಿಡುಗಡೆಯ ಭಾಗ್ಯ ಸಿಕ್ಕಿದೆ. ಅವರ ವಿರುದ್ಧ ದಾಖಲಾಗಿದ್ದ ಎನ್​ಎಸ್​ಎ ಪ್ರಕರಣವನ್ನು ಕೈಬಿಡುವಂತೆ ಅಲಹಾಬಾದ್ ಹೈಕೋರ್ಟ್ ನಿರ್ದೇಶನ ನೀಡಿದೆ.

ಹಾಗೆಯೇ, ಅವರ ಕಸ್ಟಡಿಯಲ್ಲಿ ಇಟ್ಟಿರುವುದು ಅಕ್ರಮ ಎಂದೂ ಕೋರ್ಟ್ ಅಭಿಪ್ರಾಯಪಟ್ಟಿದೆ. ಇದರೊಂದಿಗೆ ವೈದ್ಯರೂ ಆಗಿರುವ ಡಾ. ಕಫೀಲ್ ಖಾನ್ ಅವರು ಜೈಲಿನಿಂದ ಬಿಡುಗಡೆ ಆಗಲಿದ್ದಾರೆ.ಸಿಎಎ ವಿರೋಧಿ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ಡಾ. ಕಫೀಲ್ ಖಾನ್ 2019, ಡಿಸೆಂಬರ್ 10ರಂದು ಆಲಿಗಡ್ ಮುಸ್ಲಿಮ್ ಯೂನಿವರ್ಸಿಟಿಯಲ್ಲಿ ಭಾಷಣ ಮಾಡಿದ್ದರು. ಜನವರಿಯಲ್ಲಿ ಅವರನ್ನ ಬಂಧಿಸಲಾಯಿತು.

ಧಾರ್ಮಿಕ ದ್ವೇಷ ಬಿತ್ತಲು ಕಾರಣವಾಗಿದ್ದಾರೆಂದು ಐಪಿಸಿ ಸೆಕ್ಷನ್ 153ಎ ಅಡಿಯಲ್ಲಿ ಖಾನ್ ವಿರುದ್ಧ ಪ್ರಕರಣ ದಾಖಲಾಯಿತು. ಫೆ. 13ರಂದು ಆಲಿಗಡ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶದಂತೆ ಡಾಕ್ಟರ್ ಸಾಹೇಬರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಜಾರಿಗೊಳಿಸಲಾಯಿತು. ನಂತರ ರಾಷ್ಟ್ರೀಯ ಸಮಗ್ರತೆ ಧಕ್ಕೆ ತರುವ ಮತ್ತು ಸೌಹಾರ್ದತೆಯನ್ನು ಕದಡುವ ಅಪರಾಧಗಳಿಗೆ ಇರುವ 153ಬಿ ಮತ್ತು 505(2) ಸೆಕ್ಷನ್​ಗಳ ಅಡಿ ಅವರ ವಿರುದ್ಧ ಎಫ್ಐಆರ್ ದಾಖಲಾದವು.

ಆಗಸ್ಟ್ 16ರಂದು ಅವರ ಬಂಧನದ ಅವಧಿಯನ್ನು 3 ತಿಂಗಳ ಕಾಲ ವಿಸ್ತರಣೆ ಮಾಡಲಾಗಿತ್ತು. ಎನ್​ಎಸ್​ಎ ಕಾಯ್ದೆ ಅಡಿ ವ್ಯಕ್ತಿಗಳನ್ನು 12 ತಿಂಗಳ ಕಾಲ ಸೆರೆಯಲ್ಲಿಟ್ಟುಕೊಳ್ಳುವ ಅವಕಾಶ ಇದೆ. ಆದರೆ, ಈಗ ಅಲಹಾಬಾದ್ ಹೈಕೋರ್ಟ್ ಎನ್​ಎಸ್​ಎ ಚಾರ್ಜ್​ಗಳಿಂದ ಡಾ. ಕಫೀಲ್ ಖಾನ್ ಅವರನ್ನು ಮುಕ್ತಗೊಳಿಸಿದೆ. ಮಥುರಾ ಜೈಲಿನಲ್ಲಿರುವ ಅವರು ಶೀಘ್ರದಲ್ಲೇ ಬಿಡುಗಡೆ ಆಗಲಿದ್ದಾರೆನ್ನಲಾಗಿದೆ.

error: Content is protected !! Not allowed copy content from janadhvani.com