ನವದೆಹಲಿ: ನಿಮ್ಮ ಬ್ಯಾಂಕ್ ಖಾತೆಯಲ್ಲಿ ಕಳೆದ ವರ್ಷ ಲೆಕ್ಕ ಕೊಡದೆ ದೊಡ್ಡ ಮೊತ್ತದ ಹಣವನ್ನೇನಾದರೂ ಠೇವಣಿ ಇಟ್ಟಿದ್ದೀರಾ? ಹಾಗಾದ್ರೆ ಭಾರಿ ಮೊತ್ತದ ತೆರಿಗೆ ಕಟ್ಟೋಕೆ ರೆಡಿಯಾಗಿ. ಭಾರಿ ಮೊತ್ತದ ತೆರಿಗೆ ಅಂದರೆ ಶೇಕಡ 83ರ ತನಕವೂ ತೆರಿಗೆ ಕಟ್ಟಬೇಕಾದೀತು..
ಕಳೆದ ವರ್ಷ ನೀವು ಲೆಕ್ಕ ಕೊಡದೇ ಚಿನ್ನ, ಆಭರಣ, ಹಣ ಅಥವಾ ಇತರೆ ಮೌಲ್ಯಯುತ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದೀರಾ? ಹಾಗಾದ್ರೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 69 ಎ ಪ್ರಕಾರ, ನೀವು ಅದಕ್ಕೆ ಹೂಡಿಕೆ ಮಾಡಿದ ಹಣದ ಮೂಲದ ವಿವರಣೆ ನೀಡಬೇಕು. ತೆರಿಗೆ ಮೌಲ್ಯಮಾಪನ ಅಧಿಕಾರಿಯ ಪ್ರಶ್ನೆಗಳಿಗೆ ನೀವು ಕೊಡೋ ಉತ್ತರ ಸಮಾಧಾನ ನೀಡಿಲ್ಲ ಎಂದಾದ್ರೆ ಅವರು ವಿಧಿಸುವ ತೆರಿಗೆಯನ್ನು ನೀವು ಕಟ್ಟಬೇಕಾಗುತ್ತದೆ.
ಅವರು ವಿಧಿಸುವ ತೆರಿಗೆ ಅಂದ್ರೆ ಅದು ಹೈ ಇನ್ಕಂ ಟ್ಯಾಕ್ಸ್. ಶೇಕಡ 60 ತೆರಿಗೆ ಮತ್ತು ಶೇಕಡ 25 ಸರ್ಚಾರ್ಜ್ ಮತ್ತು ಶೇಕಡ 6 ದಂಡ ಸೇರಿ ಶೇಕಡ 83.25 ತೆರಿಗೆಯನ್ನು ಕಟ್ಟಬೇಕು. ಆದಾಗ್ಯೂ, ಒಂದೊಮ್ಮೆ ಬ್ಯಾಂಕ್ ಠೇವಣಿಗೆ ನೀವು ಕಳೆದ ವರ್ಷವೇ ತೆರಿಗೆ ಕಟ್ಟಿದ್ದೇ ಆದರೆ ಪುನಃ ಅದಕ್ಕೆ ತೆರಿಗೆ ಕಟ್ಟಬೇಕಾಗಿಲ್ಲ. ಇದಕ್ಕೆ ಹೊರತಾಗಿ, ಚಿನ್ನ ಮತ್ತು ಇತರೆ ಮೌಲ್ಯಯುತ ವಸ್ತುಗಳನ್ನು ಖರೀದಿಸಿದ್ದರೆ ಅವುಗಳನ್ನು ಅನ್ ಎಕ್ಸ್ಪ್ಲೈನ್ಡ್ ಕ್ಯಾಶ್ ಕ್ರೆಡಿಟ್ ವಿಭಾಗಕ್ಕೆ ಸೇರಿಸಿ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 68ರ ಪ್ರಕಾರ ಪರಿಗಣಿಸಿ ದಂಡ ತೆರಿಗೆ ವಿಧಿಸಲಾಗುತ್ತದೆ. 2017ರಲ್ಲಿ ಸರ್ಕಾರ ನೋಟು ನಿಷೇಧಿಸಿದ ಬಳಿಕ ಜಾರಿಗೆ ಬಂದ ಅಘೋಷಿತ ಆದಾಯದ ಕಾನೂನು ಪ್ರಕಾರ ಇವೆಲ್ಲವೂ ನಡೆಯುತ್ತದೆ.