ಪ್ರಧಾನಎಮ್ಮೆಸ್ಸೆಂ ಝೈನೀ ಕಾಮಿಲ್
(ಪ್ರಧಾನ ಕಾರ್ಯದರ್ಶಿ SYS)
ಇವತ್ತು (ಆಗಸ್ಟ್ 22) ಮಂಗಳೂರು ದೇರಳಕಟ್ಟೆ ಯೇನೆಪೋಯಾ ಆಸ್ಪತ್ರೆಯಲ್ಲಿ ನಿಧನರಾದ ಅಬೂಬಕರ್ ಕಡಂಗ ದಣಿವರಿಯದ ಜನ ಸೇವಕರಾಗಿದ್ದರು.
ಕೊಡಗು ಜಿಲ್ಲೆಯ ವಿರಾಜಪೇಟೆ ಸಮೀಪದ ಕಡಂಗ ನಿವಾಸಿಯಾದ ಅವರು ಚಿಕ್ಕಂದಿನಿಂದಲೇ ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಬಿಡುವಿಲ್ಲದೆ ತನ್ನನ್ನು ತೊಡಗಿಸಿಕೊಂಡು ಸಕ್ರಿಯರಾಗಿದ್ದರು.
ವಯಸ್ಸು ಐವತ್ತೆಂಟು ದಾಟಿದರೂ ಒಬ್ಬ ತನ್ನ ಉತ್ಸಾಹ, ಹುಮ್ಮಸ್ಸು ಅಲ್ಪವೂ ಕಡಿಮೆಯಾಗಿರಲಿಲ್ಲ.
ಊರಿನ ಸರ್ವರ ಪಾಲಿಗೆ ಆಪತ್ಬಾಂಧಾವನಾಗಿದ್ದ ಅಬೂಬಕರ್ ಜನ ಸೇವೆಯನ್ನು ಉಸಿರಾಗಿಸಿ ಸದಾ ಸಮಯ ಆಸ್ಪತ್ರೆ, ಪೋಲಿಸ್ ಸ್ಟೇಷನ್, ಸರಕಾರಿ ಕಚೇರಿಗಳಿಗೆ ಅಡ್ಡಾಡುತ್ತಾ ಜನರಿಗೆ ಅಗತ್ಯವಾದ ಸೇವೆಗಳನ್ನು ನಿಸ್ವಾರ್ಥವಾಗಿ ಮಾಡಿ ಕೊಡುತ್ತಿದ್ದರು.
ಅಬುಧಾಬಿಯಲ್ಲಿ ದೀರ್ಘಕಾಲ ಉದ್ಯೋಗದಲ್ಲಿದ್ದ ಅವರು ಊರಿನಲ್ಲಿ ಸುನ್ನತ್ ಜಮಾಅತಿನ ಸೇವೆಗೆ ತನ್ನ ಉಪಸ್ಥಿತಿ ಅಗತ್ಯವಾದ ಸಂದರ್ಭದಲ್ಲಿ ಊರಿನಲ್ಲಿ ನೆಲೆಸಿ ಇಡೀ ಸಮಯ ಸುನ್ನೀ ಕಾರ್ಯಕರ್ತ,ಸಮಾಜ ಸೇವಕನಾಗಿ ಗುರುತಿಸಲ್ಪಟ್ಟಿದ್ದರು. ಊರಿನ ಮಸ್ಜಿದ್ ಮದ್ರಸಾಗಳ ಆಡಳಿತದಲ್ಲೂ ಅವರ ಸಜೀವ ನೇತೃತ್ವ ಇತ್ತು.
SYS ಸಕ್ರಿಯ ಸಾರಥಿಯಾಗಿದ್ದ ಅವರು ಕಳೆದ ಕೆಲವು ವರ್ಷಗಳಿಂದ ರಾಜ್ಯ ಸಮಿತಿಯ ಸದಸ್ಯರಾಗಿದ್ದರು. ಸಂಘಟನೆಯ ಸಾಂತ್ವನ ಸಂಘವಾದ “ಇಸಾಬಾ”ದ ಕೊಡಗು ಜಿಲ್ಲಾ ಕಾರ್ಯದರ್ಶಿಯಾಗಿದ್ದು ಅವರು ಮಾಡಿದ ಕಾರ್ಯಾಚರಣೆಗಳು ಗಮನಾರ್ಹ.
ಕಳೆದ ಕೊಡಗು ನೆರೆಯ ಸಮಯದಲ್ಲಿ ಶುಚೀಕರಣ ಕಾರ್ಯದಲ್ಲಿ ಸ್ವಯಂ ಮರೆತು, ತನ್ನ ಪ್ರಾಯವನ್ನೂ ಲೆಕ್ಕಿಸದೆ ಹರೆಯದ ಯುವಕರನ್ನೂ ನಾಚಿಸುವ ರೀತಿಯಲ್ಲಿ ತೊಡಗಿಸಿ ಕೊಂಡಿದ್ದರು.
ಕೆಲವು ದಿನಗಳಿಂದ ಹೊಟ್ಟೆ ನೋವು ಮತ್ತು ನಿಮೋನಿಯಾ ಜ್ವರದಿಂದ ಬಳಲುತ್ತಿದ್ದು,ಮಡಿಕೇರಿ ಆಸ್ಪತ್ರೆಯಲ್ಲಿ ಮತ್ತು ಕೊನೆಗೆ ಕಳೆದ ಹತ್ತು ದಿನಗಳಿಂದ ದೇರಳಕಟ್ಟೆ ಯೇನೆಪೋಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದರು.
ಸದಾ ಹಸನ್ಮುಖಿಯಾಗಿ ಒಂದಲ್ಲೊಂದು ಕಾರ್ಯದಲ್ಲಿ ಬ್ಯುಸಿ ಆಗಿರುತ್ತಿದ್ದ ಅವರು ಇವತ್ತು ಅಪರಾಹ್ನ ಒಂದು ಗಂಟೆಯ ವೇಳೆಗೆ ಶಾಶ್ವತವಾಗಿ ನಮ್ಮಿಂದ ಕಣ್ಮರೆಯಾಗಿದ್ದಾರೆ
ಪತ್ನಿ ಫಾತಿಮಾ, ಮಕ್ಕಳಾದ ರಝಿಯಾ,ರಝೀನಾ,
ರಾಝಿಖ್,ರಂಶೀನಾ, ಪೂನೂರು ಮದೀನತು ನ್ನೂರ್ ಸಂಸ್ಥೆಯ ವಿದ್ಯಾರ್ಥಿಗಳಾದ ರಾಫಿ, ರಾಝಿನ್ ಮತ್ತು ಅಪಾರ ಬಂಧು ಬಳಗ, ಸಹಕಾರ್ಯಕರ್ತರು,ಸ್ನೇಹ ಜನರನ್ನು ಅಗಲಿದ್ದಾರೆ. ಅವರ ಪರಲೋಕ ಜೀವನ ಅಲ್ಲಾಹು ಸಂತೋಷ ಗೊಳಿಸಲಿ.
ಎಸ್.ವೈ.ಎಸ್ ರಾಜ್ಯಾಧ್ಯಕ್ಷ ಉಸ್ಮಾನ್ ಸ’ಅದಿ ಪಟ್ಟೋರಿ,ಕಾರ್ಯದರ್ಶಿ ಝೈನೀ ಕಾಮಿಲ್, ಸಾಂತ್ವನ ಸಮಿತಿ ಅಧ್ಯಕ್ಷ ಜಿ.ಎಂ.ಕಾಮಿಲ್ ಸಖಾಫಿ, ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಕೆ.ಎಚ್.ಇಸ್ಮಾಯಿಲ್ ಸ’ಅದಿ, ಇಸಾಬಾ ದ.ಕ.ವೆಸ್ಟ್ ಜಿಲ್ಲಾ ಕಾರ್ಯದರ್ಶಿ ಇಸ್ಮಾಯಿಲ್ ಕಿನ್ಯ,ರಾಜ್ಯ ಸಮಿತಿ ಸದಸ್ಯ ಹನೀಫ್ ಹಾಜಿ ಉಳ್ಳಾಲ್, ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಸಿರಾಜುದ್ದೀನ್ ಸಖಾಫಿ ಕನ್ಯಾನ ಮುಂತಾದವರು ಆಸ್ಪತ್ರೆಗೆ ತಲುಪಿ ಮುಂದಿನ ಕಾರ್ಯಗಳಿಗೆ ನೇತೃತ್ವ ನೀಡಿದರು.






