✍️ ಹಸೈನಾರ್ ಕಾಟಿಪಳ್ಳ
——————————————-
ಇತ್ತೀಚಿನ ದಿನಗಳಲ್ಲಿ ಬಹುತೇಕ ಟಿ.ವಿ.ಮಾಧ್ಯಮಗಳಲ್ಲಿ ನಡೆಯುವ ಚರ್ಚೆಗಳು ಸಂವಿಧಾನಕ್ಕೆ ಬದ್ದವಾಗಿಲ್ಲ . ಇಂತಹ ಅಸಂವಿಧಾನಿಕ ಚರ್ಚೆಗಳಿಗೆ ಭಾಗವಹಿಸುವುದೇ ಸೂಕ್ತವಲ್ಲ. ಯಾಕೆಂದರೆ ಇವುಗಳು ಒಂದು ನಿರ್ದಿಷ್ಟ ಗುರಿಯನ್ನು ಹೊಂದಿರುವ ಏಜೆಂಟ್ ಗಳಂತೆ ಕಾರ್ಯ ನಿರ್ವಹಿಸುತ್ತದೆ. ಯಾವುದೇ ವಿಷಯದ ಬಗ್ಗೆ ಸ್ಪಷ್ಟನೆ ಕೊಟ್ಟಾಗ ಅದನ್ನು ಬೇರೆ ಅರ್ಥದಿಂದ ವ್ಯಾಖ್ಯಾನಿಸಿ ಜನರ ಮೇಲೆ ಗೂಬೆ ಕೂರಿಸಿ, ಬೇಕಾಬಿಟ್ಟಿ ಕಿರುಚಿಕೊಳ್ಳುವ ಸಂಸ್ಕೃತಿಯನ್ನು ಹೊಂದಿರುತ್ತವೆ. ಮೊನ್ನೆ ಬೆಂಗಳೂರಿನ ಕೆ.ಜಿ.ಹಳ್ಳಿಯಲ್ಲಿ ನಡೆದ ಘಟನೆಯ ಬಗ್ಗೆ ಸುವರ್ಣ ಟಿ.ವಿ.ಯ ಮುಖಾಮುಖಿ ಚರ್ಚೆಯಲ್ಲಿಯೂ ನಡೆದದ್ದೂ ಇದೆಯಾಗಿದೆ.
ಕೆ.ಜಿ.ಹಳ್ಳಿಯಲ್ಲಿ ನಡೆದ ಘಟನೆಯ ಬಗ್ಗೆ ಮುಖಾಮುಖಿ ಚರ್ಚೆ ನಡೆಯುತ್ತಿದ್ದ ನಡುವೆ ಮುಸ್ಲಿಂ ಸಮುದಾಯದ ಮೌಲ್ವಿಯೊಬ್ಬರೊಂದಿಗೆ ಪೋನ್ ಕಾಲ್ ಲೈನ್ ಮುಖಾಂತರ ಸುವರ್ಣ ಟಿ.ವಿ. ನಿರೂಪಕ ಅಜಿತ್ ರವರು ನಡೆದ ಘಟನೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ತಿಳಿಸುತ್ತಾರೆ. ಆಗ ಮೌಲ್ವಿಯರು ಪ್ರವಾದಿ (ಸ.ಅ) ರವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದನ್ನೂ ಖಂಡಿಸುತ್ತೇವೆ , ಅದರ ಜೊತೆಗೆ ಕಿಡಿಗೇಡಿಗಳು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯುಂಟು ಮಾಡಿದನ್ನೂ ಖಂಡಿಸುತ್ತೇವೆ ಎಂದು ಬಹಳ ಸ್ಪಷ್ಟವಾಗಿ ವಿವರಿಸುತ್ತಾರೆ. ಈ ಮಾತಿನ ನಿಲುವು ಏನೆಂಬುದು ಒಬ್ಬ ಸಾಮಾನ್ಯ ಮನುಷ್ಯನಿಗೂ ಅರ್ಥವಾಗುತ್ತದೆ. ಆದರೆ ಕೋಮು ಸೌಹಾರ್ದತೆಯನ್ನು ಕೆಡಿಸಲೆಂದೆ ಹುಟ್ಟಿರುವ ಲಜ್ಜೆಗೆಟ್ಟ ಮಾಧ್ಯಮಗಳಿಗೆ ಮೌಲ್ವಿಯವರ ಮಾತಿನ ನಿಲುವು ಅರ್ಥವಾಗಿಲ್ಲ. ಪ್ರತ್ಯಕ್ಷವಲ್ಲದಿದ್ದರೂ ಪರೋಕ್ಷವಾಗಿ ಘಟನೆಯನ್ನು ಮೌಲ್ವಿಯವರು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಮೌಲ್ವಿಯವರ ಮಾತನ್ನು ದುರ್ವಾಖ್ಯಾನಿಸುತ್ತಾರೆ.
ಮಾನ್ಯ ಅಜಿತ್’ರವರೆ, ಕೆ.ಜಿ.ಹಳ್ಳಿಯಲ್ಲಿ ನಡೆದ ಘಟನೆಯ ಬಗ್ಗೆ ಮುಸ್ಲಿಂ ಸಮುದಾಯದ ನಿಲುವು ಏನು ಎಂಬೂದನ್ನು ನಮ್ಮ ನಾಯಕರಾದ ಮೌಲಾನ ಶಾಫೀ ಸ’ಅದಿಯವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಪ್ರವಾದಿಯವರನ್ನು ಅವಹೇಳನ ಮಾಡಿದ್ದನ್ನೂ ಖಂಡಿಸುತ್ತೇವೆ, ವಾಹನಗಳಿಗೆ ಬೆಂಕಿ ಹಚ್ಚಿದ್ದನ್ನೂ ಖಂಡಿಸುತ್ತೇವೆ. ಸಮಾಜದ ಶಾಂತಿ ಕದಡುವ , ಕೋಮು ಸೌಹಾರ್ದತೆಗೆ ಧಕ್ಕೆ ತರುವ ಯಾವ ಘಟನೆಯನ್ನೂ ನಾವು ಸಮರ್ಥಿಸಲ್ಲ. ಘಟನೆ ನಡೆದ ಅದೇ ದಿನ ರಾತ್ರಿ ಕೆ.ಜಿ.ಹಳ್ಳಿಯ ಒಂದು ದೇವಸ್ಥಾನಕ್ಕೆ ಕಿಡಿಗೇಡಿಗಳು ಹಾನಿ ಮಾಡುವುದನ್ನು ತಡೆಯಲು ದೇವಸ್ಥಾನದ ಸುತ್ತಲೂ ಮುಸ್ಲಿಮರು ಕಾವಲು ನಿಂತಿದ್ದರು.
ಇಲ್ಲಿ ಮತ್ತೊಂದು ವಿಷಯವನ್ನು ಅಜಿತ್’ರವರು ಪ್ರಸ್ಥಾಪಿಸುತ್ತಾರೆ. ಪ್ರವಾದಿಯವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ ಕಾರಣಕ್ಕೆ ಈ ರೀತಿ ಘಟನೆ ನಡೆದರೆ, ಇನ್ನು ಹಿಂದೂ ಸಹೋದರರು ಪೂಜಿಸುವ ಗೋವನ್ನೂ ಸಾಗಿಸುವವರ ಮೇಲೂ ಇದೇ ರೀತಿಯ ಆಕ್ರಮಣಗಳು ನಡೆಯಬಹುದೆಂದು. ಸ್ವಾಮಿ ಅಜಿತ್’ರವರೆ ಗೋವು ಸಾಗಿಸುವವರ ಮೇಲೆ ಆಕ್ರಮಣಗಳು ಎಲ್ಲಾ ಕಡೆ ಈಗಗಲೇ ನಡೆಯುತ್ತಿದೆ. ಅದು ಕಾನೂನಾತ್ಮಕವಾಗಿ ಸಾಗಿಸುವವರ ಮೇಲೂ ನಡೆಯುತ್ತಿದೆ. ಸುಮ್ಮನೆ ಕಣ್ಣುಮುಚ್ಚಿ ಹಾಲು ಕುಡಿಯುವ ಬೆಕ್ಕಿನ ತರ ವರ್ತಿಸಬೇಡಿ. ನಿಮ್ಮ ಈ ಹೇಳಿಕೆ , ಗೋವು ಸಾಗಿಸುವವರ ಮೇಲೆ ಆಕ್ರಮಣ ನಡೆಸಿ ಎಂದು ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿದೆ.
ಅಜಿತ್’ರವರೆ ಒಂದಂತು ಮನದಲ್ಲಿಟ್ಟುಕೊಳ್ಳಿ ಕಿಡಿಗೇಡಿಗಳಿಗೆ ಧರ್ಮ ಜಾತಿ ಇಲ್ಲ. ಅವರು ಎಲ್ಲಾ ಧರ್ಮದಲ್ಲಿಯೂ ಇರುತ್ತಾರೆ. ಅದೇ ರೀತಿ ಪ್ರತಿಯೊಂದು ಧರ್ಮದಲ್ಲಿಯೂ ಸೌಹಾರ್ದತೆಯ , ಶಾಂತಿಯ ಜೀವನ ನಡೆಸಲು ಬಯಸುವ, ಒಳ್ಳೆಯ ಮನಸ್ಸಿನ ಜನರು ಕೂಡಾ ಇರುತ್ತಾರೆ. ಅವರ ಸ್ವಾಸ್ಥ್ಯ ಕೆಡಿಸುವ, ಅವರಿಗೆ ನೋವುಂಟು ಮಾಡುವ ರೀತಿಯ ವರ್ತನೆಯನ್ನು ನಿಲ್ಲಿಸಿ. ಸೌಹಾರ್ದತೆಯ, ಸುಂದರ ಭಾರತ ನಿರ್ಮಾಣವಾಗಲು ಸಹಕರಿಸಿ…..
ಜೈ ಹಿಂದ್, ಜೈ ಕರ್ನಾಟಕ.