janadhvani

Kannada Online News Paper

ಮಂಗಳೂರು ಸೆಂಟ್ರಲ್ ಮಾರ್ಕೆಟ್ ಇಂದಿನಿಂದ ಪುನರಾರಂಭ

ಮಂಗಳೂರು: ಲಾಕ್‌ಡೌನ್‌ ಸಂದರ್ಭದಲ್ಲಿ ಸೆಂಟ್ರಲ್‌ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ನಿಷೇಧ ಹೇರಿದ್ದ ಮಂಗಳೂರು ಮಹಾನಗರ ಪಾಲಿಕೆ ಇದೀಗ ಆದೇಶವನ್ನು ಹಿಂಪಡೆದಿದ್ದು ಸೆಂಟ್ರಲ್‌ ಮಾರುಕಟ್ಟೆಯಲ್ಲಿ ಗುರುವಾರ ವ್ಯಾಪಾರ ಮತ್ತೆ ಆರಂಭವಾಗಿದೆ.

ಬೆಳಿಗ್ಗೆ ಕೆಲ‌ ವ್ಯಾಪಾರಿಗಳು ಅಂಗಡಿ ತೆರೆಯಲು ಯತ್ನಿಸಿದಾಗ ಪಾಲಿಕೆ ಅಧಿಕಾರಿಗಳು ತಡೆಯಲು ಯತ್ನಿಸಿದರು. ವ್ಯಾಪಾರಿಗಳು ತಮ್ಮ ವಕೀಲರ ಮೂಲಕ ಹೈಕೋರ್ಟ್ ಆದೇಶದ ಪ್ರತಿ ತೋರಿಸಿದರು. ಕೊನೆಗೆ ಪಾಲಿಕೆ ಅಧಿಕಾರಿಗಳು ಸ್ಥಳದಿಂದ ತೆರಳಿದರು.

ಸದ್ಯ ಮಾರುಕಟ್ಟೆ ಭಾಗಶಃ ಕಾರ್ಯಾರಂಭಗೊಂಡಿದೆ. ಈ ನಡುವೆ ಬೈಕಂಪಾಡಿಯ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಗೊಂಡಿರುವ ಕೆಲವು ವ್ಯಾಪಾರಿಗಳು ಇನ್ನೂ ಅಲ್ಲೇ ಉಳಿದುಕೊಂಡಿದ್ದಾರೆ.

ಏಪ್ರಿಲ್ 7 ರಂದು ಮಂಗಳೂರು ಮಹಾನಗರ ಪಾಲಿಕೆಯು, ತರಕಾರಿ ಹಾಗೂ ಮೀನು ಮಾರಾಟ ಮಾಡುವ ಸೆಂಟ್ರಲ್‌ ಮಾರುಕಟ್ಟೆಯ ಕಟ್ಟಡಗಳು ಹಳೆಯ ಕಟ್ಟಡಗಳಾ‌ಗಿವೆ. ಈ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು ಇದರ ದುರಸ್ತಿ ಸಾಧ್ಯವಿಲ್ಲ. ಆದ್ದರಿಂದ ಈ ಕಟ್ಟಡವನ್ನು ನೆಲಸಮ ಮಾಡಿ ಹೊಸ ಕಟ್ಟಡವನ್ನು ನಿರ್ಮಿಸಲು ಪಾಲಿಕೆ ಕ್ರಮ ಕೈಗೊಂಡಿದೆ ಎಂದು ಪ್ರಕಟನೆಯಲ್ಲಿ ತಿಳಿಸಿತ್ತು.

ಹಾಗೆಯೇ ಈ ಮಾರುಕಟ್ಟೆಯಲ್ಲಿ ಜನರು ಒಟ್ಟುಗೂಡುವುದರಿಂದ ಕೊರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಜನರ ಹಿತದೃಷ್ಟಿಯಿಂದ ಈ ಮಾರುಕಟ್ಟೆಯಲ್ಲಿ ವ್ಯಾಪಾರ ಸ್ಥಗಿತಗೊಳಿಸುವುದು ಅತ್ಯಗತ್ಯ. ಈ ಕಟ್ಟಡದಲ್ಲಿ ಯಾವುದೇ ವ್ಯಾಪಾರ ವ್ಯವಹಾರ ನಡೆಸಲು ಅವಕಾಶವಿಲ್ಲ ಎಂದು ತಿಳಿಸಿತ್ತು.

ಈ ಆದೇಶದ ವಿರುದ್ಧ 37 ಮಂದಿ ವ್ಯಾಪಾರಸ್ಥರು ಕಾನೂನಿನ ಮೊರೆ ಹೋಗಿದ್ದರು. ವ್ಯಾಪಾರಸ್ಥರು ಪಾಲಿಕೆಯ ಆದೇಶಕ್ಕೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಅಂಗಡಿ ತೆರವುಗೊಳಿಸಲು ಪಾಲಿಕೆ ಸಲ್ಲಿಸಿದ್ದ ಅರ್ಜಿಗಳಿಗೂ ಕೂಡಾ ನ್ಯಾಯಾಲಯ ಒಪ್ಪಿಗೆ ನೀಡಿರಲಿಲ್ಲ. ನ್ಯಾಯಾಲಯವು ಕಾನೂನು ಪಾಲನೆ ಮಾಡುವಂತೆ ಪಾಲಿಕೆಗೆ ಆದೇಶಿಸಿತ್ತು.

ಇದೀಗ ಮಹಾನಗರ ಪಾಲಿಕೆ ಆದೇಶವನ್ನು ವಾಪಸ್‌ ಪಡೆದಿದ್ದು, ಸೆಂಟ್ರಲ್‌ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿದೆ.

error: Content is protected !! Not allowed copy content from janadhvani.com