ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ನಡೆದಿರುವ ಅನಿಷ್ಟ ಪ್ರಕರಣವು ಖಂಡನೀಯ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ ಕೆ ಎಂ ಅಬೂಬಕರ್ ಸಿದ್ದೀಖ್ ಮೊಂಟುಗೋಳಿ ಹೇಳಿದರು. ಮುಸ್ಲಿಮರು ಅತ್ಯಂತ ಗೌರವಿಸುವ ಪ್ರವಾದಿಗಳನ್ನು ನಿಂದಿಸಿ ಜಾಲತಾಣಗಳಲ್ಲಿ ವಿಕೃತಿ ಮೆರೆದವರನ್ನು ಬಂಧಿಸುವಂತೆ ಪ್ರಜಾಸತ್ತಾತ್ಮಕ ಹೋರಾಟ ನಡೆಸುವುದು ಬಿಟ್ಟು ಹಿಂಸಾತ್ಮಕ ಪ್ರತಿಭಟನೆಗಳಿಗೆ ಇಳಿದಿರುವುದನ್ನು ಸಮುದಾಯ ಎಂದೂ ಕ್ಷಮಿಸುವುದಿಲ್ಲ. ಪ್ರವಾದಿ ನಿಂದನೆಯು ಪ್ರವಾದಿಯವರ ಕಾಲದಿಂದಲೂ ನಡೆಯುತ್ತ ಬಂದಿದೆ. ಆದರೆ ಪ್ರವಾದಿ ಸಂದೇಶ ಎಲ್ಲ ನಿಂದನೆಗಳನ್ನು ಮೀರಿ ಜಗದಗಲ ಹರಡಿದೆ. ಸೈದ್ಧಾಂತಿಕವಾಗಿ ಅವರ ಸಿದ್ಧಾಂತಗಳನ್ನು ಎದುರಿಸಲಾಗದವರು ಮಾತ್ರ ನಿಂದನೆಗಿಳಿಯುತ್ತಾರೆ.
ಮುಸ್ಲಿಮರನ್ನು ಪ್ರಚೋದಿಸಿ ಅವರನ್ನು ಸಂಘರ್ಷಕ್ಕೆ ಹಚ್ಚುವ ಷಡ್ಯಂತ್ರ ನಡೆಯುತ್ತಲೇ ಇದೆ. ಇದನ್ನರಿತು ಸಮುದಾಯ ಸಂಯಮದಿಂದ ವರ್ತಿಸಬೇಕು ಎಂದು ಅವರು ಕರೆ ನೀಡಿದರು.
ಪ್ರವಾದಿ ನಿಂದನೆಯ ಪೋಸ್ಟುಗಳ ಬಗ್ಗೆ ದೂರು ಬಂದಾಗಲೇ ಪೊಲೀಸರು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಂಡಿದ್ದರೆ ಅನಾಹುತವನ್ನು ತಪ್ಪಿಸಬಹುದಿತ್ತು. ಮೊದಲೇ ರಾಜ್ಯ ಸಂಕಷ್ಟ ಸ್ಥಿತಿಯಲ್ಲಿರುವಾಗ ಅನಾಹುತಗಳಾಗದಂತೆ ಎಚ್ಚರವಹಿಸ ಬೇಕಾದವರು ನಿಷ್ಕ್ರಿಯರಾದರೆ ಸಮಸ್ಯೆ ಬಿಗಡಾಯಿಸುತ್ತದೆ. ಇದೀಗ ಕೆಲವು ಮಾಧ್ಯಮಗಳು ಕೂಡ ಹಸಿದ ನಾಯಿಗೆ ಎಲುಬು ಸಿಕ್ಕಂತೆ ಸಂಭ್ರಮಿಸಿ ಪ್ರಕರಣವನ್ನು ದೀರ್ಘಕಾಲ ಜೀವಂತವಿಡಲು ಪ್ರಯತ್ನಿಸುತ್ತಿರುವುದು ವಿಷಾದನೀಯ ಎಂದು ಹೇಳಿದರು.