janadhvani

Kannada Online News Paper

1990ರಲ್ಲಿ ಪ್ರಥಮ ಬಾರಿಗೆ ದೇಶದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಚುಕ್ಕಾಣಿ ಹಿಡಿದದ್ದು ಕೇವಲ ಹದಿಮೂರು ದಿನಗಳಷ್ಟೇ. ಈ ಹೃಸ್ವ ಸಮಯದಲ್ಲಿ ಅದು ಮಾಡಿದ ಘನಂದಾರಿ ಕೆಲಸವೆಂದರೆ ಪಠ್ಯ ಪುಸ್ತಕದ ಇತಿಹಾಸವನ್ನು ಸಂಪೂರ್ಣವಾಗಿ ತಿದ್ದುಪಡಿ ಮಾಡಿದ್ದು.!

✍️ಟಿ.ಎಂ ಅನ್ಸಾರ್ ಸ‌ಅದಿ ತಂಬಿನಮಕ್ಕಿ

ಟಿಪ್ಪು, ಏಸು, ಪ್ರವಾದಿ ಮುಹಮ್ಮದ್ (ಸ), ಸಮೇತ ಮಹಾನ್ ವ್ಯಕ್ತಿಗಳ ಚರಿತ್ರೆಯನ್ನು ಈಗಾಗಲೇ ರಾಜ್ಯ ಸರಕಾರ ಪಠ್ಯ ಪುಸ್ತಕದಿಂದ ಕೈ ಬಿಡುವ ನಿರ್ಧಾರಕ್ಕೆ ಬಂದಿದೆ. ಅದರಲ್ಲೂ ಟಿಪ್ಪುವಿನ ಚಾರಿತ್ರಿಕ ಘನತೆಗೆ ಮಸಿ ಬಳಿಯುವ ಪ್ರವೃತ್ತಿ ನಿರಂತರ ನಡೆಯುತ್ತಿರುವು ದರ ಬೆನ್ನಲ್ಲೇ ಟಿಪ್ಪು ಚರಿತ್ರೆಯನ್ನು ಪಠ್ಯ ಪುಸ್ತಕದಿಂದ ಲೂ ಕಿತ್ತು ಹಾಕುವ ನಿರ್ಧಾರವು ಭಾರೀ ಗೊಂದಲ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಈ ವರ್ಷ ಪಠ್ಯ ಪುಸ್ತಕದಿಂದ ಟಿಪ್ಪು ಚರಿತ್ರೆಯನ್ನು ಕೈ ಬಿಡಲಾಗುವುದಿಲ್ಲ ವೆಂದು ಶಿಕ್ಷಣ ಸಚಿವರು ಸ್ಪಷ್ಟನೆ ನೀಡಿದ್ದರೂ ಬೀಸುವ ದೊಣ್ಣೆಯಿಂದ ತಪ್ಪಿಸುವ ತಂತ್ರವಾಗಿಯಷ್ಟೇ ಇದನ್ನು ಕಾಣಬೇಕಾಗಿದೆ. ಕಾರಣ ಚರಿತ್ರೆಯಲ್ಲಿ ಟಿಪ್ಪುವಿನ ವರ್ಚಸ್ಸಿಗೆ ಸಿಕ್ಕಷ್ಟು ಏಟು ಮತ್ತೊಬ್ಬ ಸೇನಾನಿಗೂ ಸಿಕ್ಕಿಲ್ಲವೆನ್ನಬಹುದು.

ಹಾಗೆ ನೋಡಿದರೆ ಜಗತ್ತಿನಲ್ಲಿ ಫ್ಯಾಸಿಸ್ಟ್ ಶಕ್ತಿಗಳು ಅಸ್ತಿತ್ವ ಕಂಡುಕೊಂಡದ್ದೇ ಚರಿತ್ರೆಯನ್ನು ತಿದ್ದುಪಡಿ ಮಾಡುವ ಮೂಲಕವಾಗಿದೆ. ಇತಿಹಾಸದಲ್ಲಿ ಗತಿಸಿ ಹೋದ ಘಟನೆಗಳ ನೈಜ್ಯಾಂಶವನ್ನು ಮುಂದಿನ ತಲೆಮಾರು ಅರಿತರೆ ತಮ್ಮ ಅಡಿಪಾಯವೇ ಅಲ್ಲಾಡುವ ಭೀತಿ ಈ ವರ್ಗವನ್ನು ಬಹುವಾಗಿಯೇ ಕಾಡುತ್ತದೆ. ಕಾರಣ ಈ ಫ್ಯಾಸಿಸ್ಟ್ ವರ್ಗದ ಬಂಡವಾಳವೇ ಇತಿಹಾಸ ವಾಗಿದೆ. ಚರಿತ್ರೆಯನ್ನು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನಿಸುವುದು, ಜನರನ್ನು ಸೆಳೆಯಲು ಭಾವನಾತ್ಮಕವಾಗಿ ವರ್ಣಿಸುವುದು, ತಮ್ಮ ವಿರೋಧಿಗಳನ್ನು ಹಣಿಯಲು ಇತಿಹಾಸವನ್ನು ಬಳಸುವುದು ಫ್ಯಾಸಿಸಂನ ಒಂದು ನೀತಿಯಾಗಿದೆ. ಫ್ಯಾಸಿಸ್ಟರು ತಮಗೆ ಬೇಕಾದಂತೆ ಚರಿತ್ರೆಯನ್ನು ರಚಿಸುತ್ತಾರೆ. ವಾಸ್ತವಗಳನ್ನು ಮುಚ್ಚಿಡುತ್ತಾರೆ. ತಮಗೆ ಅಪಥ್ಯವಾದದ್ದನ್ನು ಅಲ್ಲಗೆಳೆಯುತ್ತಾರೆ. ತಮಗೆ ಸಹ್ಯವಾದುದನ್ನು ವರ್ಣರಂಜಿತಗೊಳಿಸುತ್ತಾರೆ. ಮೊಘಲರು, ದಿಲ್ಲಿ ಸುಲ್ತಾನರು, ಗಾಂಧೀಜಿ, ಟಿಪ್ಪು, ವಾರಿಯನ್ ಕುನ್ನತ್ ಮುಂತಾದ ಇತಿಹಾಸದ ತಾರೆಗಳನ್ನು ಖಳನಾಯಕರ ಪಟ್ಟಿಗೆ ತಳ್ಳುತ್ತಾರೆ. ಸಾವರ್ಕರ್‌ರಂಥ ಅಪಸವ್ಯಗಳನ್ನು ಇತಿಹಾಸದ ಪ್ರಮುಖರ ವರ್ಗಕ್ಕೆ ಸೇರಿಸುತ್ತಾರೆ. ಇತಿಹಾಸದಲ್ಲಿ ರಾರಾಜಿಸಬೇಕಾದವರು ನೇಪಥ್ಯಕ್ಕೆ‌ ಸರಿದರೆ ಕಸಗಡ್ಡಿಗಳು ಮುನ್ನೆಲೆಗೆ ಬರುತ್ತವೆ. ಇದೊಂಥರಾ ಪ್ರಬುದ್ದ ಸಮಾಜದೊಂದಿಗೆ ತೋರುವ ಹಿಪಾಕ್ರಸಿ.

1990ರಲ್ಲಿ ಪ್ರಥಮ ಬಾರಿಗೆ ದೇಶದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಚುಕ್ಕಾಣಿ ಹಿಡಿದದ್ದು ಕೇವಲ ಹದಿಮೂರು ದಿನಗಳಷ್ಟೇ. ಈ ಹೃಸ್ವ ಸಮಯದಲ್ಲಿ ಅದು ಮಾಡಿದ ಘನಂದಾರಿ ಕೆಲಸವೆಂದರೆ ಪಠ್ಯ ಪುಸ್ತಕದ ಇತಿಹಾಸವನ್ನು ಸಂಪೂರ್ಣವಾಗಿ ತಿದ್ದುಪಡಿ ಮಾಡಿದ್ದು.! ಚೀನಾದಲ್ಲಿ ಮಾವೋಝೆದೋಂಗ್‌ನ ಸಾರಥ್ಯದಲ್ಲಿ ಅಧಿಕಾರಕ್ಕೆ ಬಂದ ಕಮ್ಯುನಿಸ್ಟರು ಅಲ್ಲಿನ ಪಾರಂಪರಿಕ ಚರಿತ್ರೆಯನ್ನು ಕಿತ್ತೆಸೆದು ತಮ್ಮ ಸೈದ್ದಾಂತಿಕ ಹಿತಾಸಕ್ತಿಗನುಗುಣವಾಗಿ ಚರಿತ್ರೆಯನ್ನು ರಚಿಸಿದರು. 1917ರಲ್ಲಿ ವ್ಲಾಡಿಮಿರ್‌ ಲೆನಿನ್‌ನ ನೇತೃತ್ವದಲ್ಲಿ ರಷ್ಯಾದಲ್ಲಿ ಬೋಲ್‌ಸೇವಿಕನ್ನರು ಆಡಳಿತ ಸ್ಥಾಪಿಸಿದಾಗ ಆ ತನಕ ಚಾಲ್ತಿಯಲ್ಲಿದ್ದ ರಷ್ಯನ್ ಚರಿತ್ರೆಯನ್ನು ಬದಲಾಯಿಸಿ ತಮಗೆ ಬೇಕಾದಂತೆ ಚರಿತ್ರೆ ಬರೆದರು. ಸೌದಿಯಲ್ಲಿ ಆಡಳಿತಕ್ಕೆ ಬಂದ ವಹ್ಹಾಬಿಗಳು ಅರಬ್ ನಾಡಿನ ಚರಿತ್ರೆಯನ್ನು ಬದಲಾಯಿಸಿದರು. ಸರ್ವಾಧಿಕಾರ ಧೋರಣೆಯಿರುವ ಎಲ್ಲಾ‌ ವರ್ಗವೂ ತಮ್ಮ ಹಿತಸಾಧನೆಗೆ, ಅಸ್ತಿತ್ವ ಕಾಪಾಡಲು ಚಾಲ್ತಿಯಲ್ಲಿದ್ದ ಚರಿತ್ರೆಯನ್ನು ತಿದ್ದುಪಡಿ ಮಾಡಿದೆ. ವರ್ತಮಾನದೊಂದಿಗೆ ವಿಸ್ತರಿಸಿಕೊಂಡ ಇತಿಹಾಸದ ಬಾಂಧವ್ಯಕ್ಕೆ ಕತ್ತರಿ ಹಾಕಿ, ಭವಿಷ್ಯದ ತಲೆಮಾರನ್ನು ಬೌದ್ದಿಕ ಅಜ್ಞಾನಕ್ಕೆ ತಳ್ಳುವ ಕೆಲಸವಾಗಿದೆ ಇದು.

ಇತ್ತೀಚಿಗೆ ವಾರಣಾಶಿಯ ಬನಾರಸ್ ಹಿಂದೂ ವಿಶ್ವ ವಿದ್ಯಾಲಯದಲ್ಲಿ ನಡೆದ ಅಂತಾರಾಷ್ಟ್ರೀಯ ಸೆಮಿನಾರ್ ಉಧ್ಘಾಟಿಸಿ ಮಾತನಾಡಿದ ಕೇಂದ್ರ ಸಚಿವ ಅಮಿತ್ ಶಾ; ‘ಭಾರತದ ಚರಿತ್ರೆ ತಿದ್ದುಪಡಿಯಾಗಬೇಕಾದ ಅಗತ್ಯವಿದೆ’ಯೆಂದು ಹೇಳಿದ್ದರು. ಅಲ್ಲದೆ ಅದೇ ಕಾರ್ಯಕ್ರಮದಲ್ಲಿ ಸಾವರ್ಕರ್‌ರನ್ನು ಒಬ್ಬ ಅಪ್ಪಟ ಸ್ವಾತಂತ್ರ್ಯ ಸೇನಾನಿಯೆಂದು ಹಾಡಿಹೊಗಳಿದ್ದರು. ಒಟ್ಟಾರೆ ಮೋದಿ ಯುಗ ಯಾವಾಗ ಆರಂಭವಾಯಿತೋ ಆಗಲೇ ಇತಿಹಾಸದ ತಿದ್ದಪಡಿಗೆ ಗುದ್ದಲಿ ಬಿದ್ದಿದೆಯೆಂದೇ ಭಾವಿಸಬೇಕು. ಕೆಲವು ಸ್ವಯಂ ಘೋಷಿತ ಇತಿಹಾಸಕಾರರೆನಿಸಿಕೊಂಡ ಮಂದಿ, ಸರಕಾರದ ಗುಮಾಸ್ತರಾಗಿ ಈ ತಿದ್ದುಪಡಿಯ ಕಾಂಟ್ರಾಕ್ಟ್ ವಹಿಸಿಕೊಂಡಿದ್ದಾರೆ. ಪತ್ರಿಕೆಯ ಅಂಕಣಗಾರರು, ಬರಹಗಾರರೆನಿಸಿಕೊಂಡ ಮಂದಿಯೂ ಈ ಕೆಲಸಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ.

ಅದರ ಜತೆಗೆ ಶಾಲಾ ಪಠ್ಯಪುಸ್ತಕಗಳಲ್ಲೂ ನಿಜವಾದ ಇತಿಹಾಸವನ್ನು ಮರೆಮಾಚುವ ಕೆಲಸ ನಿರಂತರವಾಗಿ ನಡೆಯುತ್ತಿದೆ. 2017ರಲ್ಲಿ ರಾಜಸ್ಥಾನದಲ್ಲಿ ಹತ್ತನೇ ತರಗತಿಯ ಪಾಠ ಪುಸ್ತಕದಲ್ಲಿ ಅಕ್ಬರ್ ಗೆಲುವು ಸಾಧಿಸಿದ ಹಲ್‌ದಿಗಟ್ಟಿ ಯುದ್ಧದ ಬಗ್ಗೆ ವಕ್ರವಾಗಿ ಚಿತ್ರೀಕರಿಸಲಾಗಿತ್ತು. ಪ್ರಸ್ತುತ ಯುದ್ದದಲ್ಲಿ ಅಕ್ಬರ್ ಗೆಲುವು ಸಾಧಿಸಿದ್ದನ್ನು ಸ್ಪಷ್ಟಪಡಿಸುವ ಪುರಾವೆಗಳು ಅಲಭ್ಯವೆಂದೂ, ದಾಖಲೆಗಳ ಪ್ರಕಾರ ರಜಪೂತ ರಾಜ ಮಹಾರಾಣಾ ಪ್ರತಾಪ್‌ ಯುದ್ದದಲ್ಲಿ ಅಕ್ಬರ್‌ನನ್ನು ಮಣಿಸಿದ್ದೆಂದೂ ಇತಿಹಾಸವನ್ನು ತಿರುಚಿ ಬರೆಯಲಾಗಿತ್ತು.
“ಮಹಾರಣಾ ಪ್ರತಾಪ್‌ರನ್ನು ಮೊಘಲ್ ಆಸ್ಥಾನಕ್ಕೆ ಬಂಧಿಸಿ ತಂದು ಕೊಲ್ಲುವುದು, ಆ ಮೂಲಕ ರಜಪೂತ ಸಾಮ್ರಾಜ್ಯವನ್ನು ಮೊಘಲ್ ಸಾಮ್ರಾಜ್ಯದೊಂದಿಗೆ ವಿಲೀನಗೊಳಿಸುವುದು ಅಕ್ಬರ್‌ನ ಉದ್ದೇಶವಾಗಿತ್ತು. ಹಲ್‌ದಿಗಟ್ಟಿ ಯುದ್ದದಲ್ಲಿ ಮೊಘಲರು ಗೆಲುವು ಸಾಧಿಸಿದರೆನ್ನುವುದು ಸರಿಯಲ್ಲ, ಮೀವಾರನ್ನು ವಶಪಡಿಸಿ ರಜಪೂತ ಸಾಮ್ರಾಜ್ಯವನ್ನು ಮೊಘಲರ ಅಧೀನಕ್ಕೆ ತೆಗೆದುಕೊಳ್ಳುವ ಪ್ರಯತ್ನದಲ್ಲಿ ಅಕ್ಬರ್ ಸೋತ ಎನ್ನುವುದು ಸೂಕ್ತ. ಆದ್ದರಿಂದ ಯುದ್ದದಲ್ಲಿ ಗೆಲುವು ಸಾಧಿಸಿದ್ದು ರಾಣಾ ಪ್ರತಾಪ್‌ ಆಗಿದ್ದಾರೆ”
ಇದು ಪಠ್ಯ ಪುಸ್ತಕದಲ್ಲಿ ತಿದ್ದುಪಡಿ ತಂದ ಬಲಪಂಥೀಯ ಇತಿಹಾಸಕಾರ ಚಂದ್ರಶೇಖರ್ ಶರ್ಮಾನ ಉವಾಚ.

ಮಾಹಿತಿಗಾಗಿ ನಾವು ಪ್ರಾಥಮಿಕ ಮಟ್ಟದಲ್ಲಿ ಆಶ್ರಯಿಸುವ ತಾಣವೇ ವಿಕಿಪೀಡಿಯ. ಆದರೆ ಕಳೆದ ಕೆಲವು ವರ್ಷಗಳಿಂದ ವಿಕಿಪೀಡಿಯಾದಲ್ಲೂ ಮಾಹಿತಿಗಳ, ಚರಿತ್ರೆಯ ತಿದ್ದುಪಡಿ ನಮಗರಿಯದಂತೆ ನಡೆಯುತ್ತಿದೆ. ಕಳೆದ ಲೋಕ ಸಭಾ ಚುನಾವಣಾ ಸಂಧರ್ಭದಲ್ಲಿ ಐಎಸ್‌ಆರ್‌ಓ (isro) ಸ್ಥಾಪಿಸಿದ್ದು ನೆಹರು ಎಂಬುದನ್ನು ಸ್ಪಷ್ಟಪಡಿಸುವ ಓನ್‌ಲೈನ್ ದಾಖಲೆಗಳನ್ನೂ, ಇಸ್ರೋದ ವಿಕಿಪೀಡಿಯಾ ಪೇಜ್‌ನ ಪುರಾವೆಗಳನ್ನೂ ಕಸಿದು ಮಾಹಿತಿಗಳನ್ನು ತಿದ್ದುಪಡಿ ಮಾಡಲಾಗಿತ್ತು. ಎರಡು ದಿನಗಳಲ್ಲಿ ಬರೋಬ್ಬರಿ ಎಂಬತ್ತು ಕಡೆಗಳಲ್ಲಿ ತಿದ್ದುಪಡಿ ನಡೆದಿತ್ತು. ಕಳೆದ ತಿಂಗಳು ವಾರಿಯನ್ ಕುನ್ನತ್‌ರ ಬಗ್ಗೆ ವಿವಾದ ಎದ್ದಾಗ‌ ಅವರ ವಿಕಿಪೀಡಿಯ ಪೇಜ್‌ನಲ್ಲೂ ಮಾಹಿತಿಗಳನ್ನು ತಿದ್ದುಪಡಿ ಮಾಡಲಾಗಿತ್ತು. ಗಾಂಧೀಜಿ ಸಮೇತ ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಪರಿಚಯಿಸುವ ವಿಕಿಪೀಡಿಯ ಪೇಜ್ ಕೂಡಾ ತಿದ್ದಪಡಿಗೆ ವಿದೇಯಗೊಂಡಿದೆ. ಚರಿತ್ರೆಯನ್ನು ತಿದ್ದುಪಡಿ ಮಾಡಿ ಸತ್ಯವನ್ನು ಮಾರೆಮಾಚುವ ಪ್ರಯತ್ನ ನಿಜಕ್ಕೂ ಮುಂದಿನ ತಲೆಮಾರಿಗೆ ಎಸೆಯುವ ದ್ರೋಹವಾಗಿದೆ. ಈ ಕ್ರೌರ್ಯವನ್ನು ಖಂಡಿಸಬೇಕಾದ ಹೊಣೆಯು ಪ್ರಜ್ಞಾವಂತ ವರ್ಗದ್ದಾಗಿದೆ.

error: Content is protected !! Not allowed copy content from janadhvani.com