ಬೆಂಗಳೂರು: ಅನ್’ಲಾಕ್ 3.0 ಆ.5 ರಿಂದ ಜಾರಿಗೆ ಬಂದಿದ್ದು, ಯೋಗ, ಜಿಮ್ ಸಂಸ್ಥೆಗಳನ್ನು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಇಷ್ಟು ದಿನ ಸಂಕಷ್ಟಕ್ಕೆ ಸಿಲುಕಿದ್ದ ಯೋಗ ಹಾಗೂ ಜಿಮ್ ಸಂಸ್ಥೆಗಳ ಮಾಲೀಕರಿಗೆ ನಿರಾಳ ಸಿಕ್ಕಂತಾಗಿದೆ.
ಕಂಟೈನ್ಮೆಂಟ್ ಝೋನ್ ಹೊರತುಪಡಿ ಉಳಿದೆಲ್ಲಾ ಪ್ರದೇಶಗಳಲ್ಲಿ ಅನ್’ಲಾಕ್ 3.0 ಜಾರಿಗೆ ಬರಲಿದೆ. ಕಂಟೈನ್ಮೆಂಟ್ ಜೋನ್ ಗಳಲ್ಲಿ ಮಾತ್ರ ಲಾಕ್ಡೌನ್’ನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಪುನರಾರಂಭಗೊಳ್ಳುವ ಜಿಮ್ ಹಾಗೂ ಯೋಗ ಸಂಸ್ಥೆಗಳಲ್ಲಿ ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಸ್ ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ.
ಕೇಂದ್ರ ಸರ್ಕಾರ ಸೋಮವಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ, 65 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರು, ಗರ್ಭಿಣಿ ಮಹಿಳೆ ಹಾಗೂ 10 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳು ಯಾವುದೇ ಕಾರಣಕ್ಕೂ ಮುಚ್ಚಿದ ಜಾಗದಲ್ಲಿರುವ ಜಿಮ್ನೇಶಿಯಂ ಅಥವಾ ಯೋಗ ತರಗತಿಯಲ್ಲಿ ಪಾಲ್ಗೊಳ್ಳಬಾರದು ಎಂದು ನಿರ್ದೇಶನ ನೀಡಿದೆ.
ಫಿಟ್ನೆಸ್ ಕೇಂದ್ರಕ್ಕೆ ಬರುವವರು ಮತ್ತು ಹೋಗುವವರನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ವಿವಿಧ ಬ್ಯಾಚಸ್ ಮಾಡಬೇಕೆಂದು ಕೇಂದ್ರ ತಿಳಿಸಿದೆ. ಪ್ರತಿಯೊಂದು ಬ್ಯಾಚ್ ನಡುವೆ 15ರಿಂದ 30 ನಿಮಿಷಗಳ ಅಂತರ ಇರಲಿ. ಈ ಸಮಯದಲ್ಲಿ ಸ್ವಚ್ಛಗೊಳಿಸುವುದು ಹಾಗೂ ಸ್ಯಾನಿಟೈಸ್ ಮಾಡಲು ಬಳಸಿಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.
ಯಾವ ವ್ಯಕ್ತಿಗೆ ಉಸಿರಾಟ ಸ್ಯಾಚುರೇಶನ್ ಪ್ರಮಾಣ ಶೇ.95ಕ್ಕಿಂತ ಕೆಳಮಟ್ಟದಲ್ಲಿದ್ದರೆ ಅವರಿಗೆ ಜಿಮ್ ಮಾಡಲು ಅವಕಾಶ ನೀಡಬೇಡಿ ಎಂದು ವರದಿ ತಿಳಿಸಿದೆ.