🖋️ ಕೊಡಂಗಾಯಿ ಕಾಮಿಲ್ ಸಖಾಫಿ
ಕೋವಿಡ್ 19 ವೈರಸ್ ವೇಗದಲ್ಲಿ ಹರಡುತ್ತಿದ್ದು, ಮನುಷ್ಯರ ಶಕ್ತಿ- ಸಾಮರ್ಥ್ಯವನ್ನು ಬಯಲಿಗೆಳೆದಿದೆ. ಇಡೀ ವಿಶ್ವವೇ ಅಂಗೀಕರಿಸುವ ಅದ್ಭುತ ಸಿದ್ಧಿಗಳನ್ನು ಕಂಡುಹಿಡಿದ ಮನುಷ್ಯರ ಬುದ್ಧಿಗೆ ಕೊರೋನಾ ವೈರಸ್‌ಗೆ ಚಿಕಿತ್ಸೆಯನ್ನು ಕಂಡುಹಿಡಿಯಲು ಇನ್ನೂ ಸಾಧ್ಯವಾಗಿಲ್ಲ. ಕಣ್ಣಿಗೂ ಕಾಣದ ವೈರಸೊಂದು ಭೂಮಿಯಲ್ಲಿ ಸೃಷ್ಟಿಸಿದ ಸಂಚಲನಕ್ಕೆ ಎಲ್ಲರೂ ತಲೆಬಾಗಿದ್ದಾರೆ. ಮನುಷ್ಯರ ಶಕ್ತಿಗೆ ಒಂದು ಮಿತಿಯಿದೆ ಎಂಬುದನ್ನು ಇದು ತಿಳಿಸಿಕೊಟ್ಟಿದೆ.!
ಚೀನಾದ ವುಹಾನ್ ನಿಂದ ಹೊರ ಬಂದ ಕೊರೋನಾ ಇದೀಗ ಚೀನಾದಲ್ಲಿ ಸೇಫ್ ಆಗಿದೆ. ತೀವ್ರವಾಗಿ ಹರಡುತ್ತಿದ್ದ ಹಲವು ವಿದೇಶ ರಾಷ್ಟ್ರಗಳಲ್ಲಿ ಇದು ನಿಯಂತ್ರಣಕ್ಕೆ ಬಂದಿರುವುದು ವರದಿಗಳಲ್ಲಿ ಕಾಣಲಾಗುತ್ತಿದೆ. ಭಾರತದಲ್ಲೇ ಪ್ರಖ್ಯಾತರಾದ ಲಕ್ಷಾಂತರ ಡಾಕ್ಟರ್ಗಳು ಇರುವಾಗ ಅವರಿಂದ ಸೂಕ್ತವಾದ ಔಷಧಿಯನ್ನು ಕಂಡುಹಿಡಿಯಲು ಯಾಕೆ ಸಾಧ್ಯವಾಗಿಲ್ಲ.? ಇಲ್ಲಿ ಸೋಂಕಿತರ ಮತ್ತು ಮರಣಹೊಂದುವವರ ಸಂಖ್ಯೆಯು ಗಣನೀಯವಾಗಿ ಏರಿಕೆಯಾಗಲು ಕಾರಣವೇನು.?
ಎಸ್ಎಂಎಸ್ ಕೈಬಿಡಬಾರದು
ಎಸ್ಎಂಎಸ್ ಎಂದು ಕಾಣುವಾಗಲೇ ಮನಸ್ಸಿಗೆ ಬರುವ ಮೊದಲ ಪೂರ್ಣ ರೂಪವು ಶಾರ್ಟ್ ಮೆಸೇಜ್ ಸರ್ವೀಸ್ ಆಗಿದೆ. ಇಲ್ಲಿನ ಉದ್ದೇಶವು ಅದಲ್ಲ.! ಕೊರೋನಾ ವೈರಸನ್ನು ತಡೆಗಟ್ಟಲು ಸರಕಾರವು ನಿರ್ದೇಶಿಸಿದ ಮೊದಲ ಕಾರ್ಯವಾಗಿದೆ ಸೋಪ್ ಉಪಯೋಗಿಸಿ ಕೈಗಳನ್ನು ಚೆನ್ನಾಗಿ ಕ್ಲೀನ್ ಮಾಡುವುದು. ಸ್ಯಾನಿಟೈಸರ್ ಬಳಕೆ ಸಹಃ ಅಭ್ಯಾಸ ಮಾಡಬೇಕು. ಎಸ್ಎಂಎಸ್ ನಲ್ಲಿರುವ ಮೊದಲ S ಇದಕ್ಕೆ ಬೊಟ್ಟು ಮಾಡುತ್ತದೆ.
ಮಾಸ್ಕ್ ಮೂಲಕ ಬಾಯಿ ಮತ್ತು ಮೂಗನ್ನು ಮುಚ್ಚಬೇಕೆಂಬುದು ಆರೋಗ್ಯ ಇಲಾಖೆಯ ಇನ್ನೊಂದು ಕಂಡೀಷನ್ ಆಗಿರುತ್ತದೆ. ಅನಗತ್ಯವಾಗಿ ಮನೆಯಿಂದ ಹೊರಗೆ ಹೋಗಬಾರದು. ಅತ್ಯಗತ್ಯಕ್ಕಾಗಿ ಹೋಗುವುದಾದರೆ ಮುಖವನ್ನು ಮುಚ್ಚಲೇಬೇಕು. ಮಾಸ್ಕ್ ಧರಿಸಬೇಕು. M ಮೂಲಕ ಇದನ್ನು ಸೂಚಿಸಲಾಗಿದೆ. ಕೊನೆಯಲ್ಲಿರುವ S ಮೂಲಕ stay home stay safe ಮನೆಯಲ್ಲೇ ಇರಿ ಸುರಕ್ಷಿತವಾಗಿರಿ ಎಂಬ ಸಂದೇಶವನ್ನು ತಿಳಿಸಲಾಗುತ್ತದೆ.
Social distance ಸಾಮಾಜಿಕ ಅಂತರ ಕಾಪಾಡುವುದು ಕೂಡ ಆಗುತ್ತದೆ. ಅಂದರೆ ಈ ತನಕ ಮದ್ದನ್ನು ಕಂಡುಹಿಡಿಯಲು ಸಾಧ್ಯವಾಗದ ಕಾರಣ, ಮನೆಯಲ್ಲೇ ಇರಲು ಸರಕಾರ ಆಜ್ಞೆಯನ್ನು ಹೊರಡಿಸಿದೆ. ಇನ್ನು ಅಗತ್ಯವಿರುವ ಕಾರ್ಯಗಳಿಗೆ ತೆರಳುವುದಾದರೂ ಸಾಮಾಜಿಕ ಅಂತರವನ್ನು ಕಾಪಾಡಬೇಕು ಎಂಬುವುದು ಪದೇಪದೇ ವಿನಂತಿಸಿದೆ. ಈ ಸಂದೇಶವನ್ನು ಎಲ್ಲರಿಗೂ ತಲುಪಿಸುವ ಯೋಜನೆಗಳನ್ನು ಕೂಡ ಕೈಗೊಂಡಿದೆ. ಜನರು ಒಂದೆಡೆ ಸೇರುವುದರಿಂದ ಉಂಟಾಗುವ ಅನಾಹುತವನ್ನು ತಪ್ಪಿಸಲು ದೊಡ್ಡ ದೊಡ್ಡ ಕಾರ್ಯಕ್ರಮಗಳಿಗೆ ಬ್ರೇಕ್ ಕೂಡ ಹಾಕಿದೆ.
ಎಡವಟ್ಟು ತಂದ ವಿಪತ್ತು
ಸರ್ಕಾರ ಘೋಷಿಸಿದ ಮೊದಲ ಹಂತದ ದೀರ್ಘವಾದ ಲಾಕ್ ಡೌನ್ ಬಹಳಷ್ಟು ಸಕ್ಸಸ್ ಆಗಿತ್ತು. ಉದ್ಯೋಗವಿಲ್ಲದೇ ಹಲವಾರು ಜನರು ತೊಂದರೆ ಅನುಭವಿಸಿದ್ದು ನಿಜ. ಅಗತ್ಯವಾದ ಸಾಮಾನುಗಳಿಗೂ ಕೆಲವೊಮ್ಮೆ ಪರದಾಟ ನಡೆಸಿದ್ದುಂಟು. ಆಚೀಚೆ ಹೋಗಲಾಗದೆ ಒಂದೆಡೆ ಸಿಲುಕಿದವರು ಕೂಡ ಇದ್ದರು. ಆದರೂ ಕೋವಿಡನ್ನು ನಿಯಂತ್ರಿಸುವಲ್ಲಿ ಸಫಲವಾಗಿತ್ತು. ಅದರ ಬಳಿಕ ಬಂದ ಲಾಕ್ ಡೌನ್‌ಗಳೆಲ್ಲವೂ ಊಟಕ್ಕಿಲ್ಲದ ಉಪ್ಪಿನಕಾಯಿ ಅಂತಾಗಿತ್ತು ಎಂದು ಜನರೇ ಹೇಳುತ್ತಿದ್ದಾರೆ.
ಇಲ್ಲಿ ಕೇವಲ ಸರ್ಕಾರವನ್ನು ದೂರಿ ಫಲವಿಲ್ಲ ಜನರ ತಾಳ್ಮೆಯ ಕೊರತೆಯು ಇದಕ್ಕೆ ಪ್ರಮುಖ ಕಾರಣವಾಗಿತ್ತು. ಯುವಕರ ಬೈಕ್ ರೈಡುಗಳು ಲಾಕ್ಡೌನ್ ಕಾಲದಲ್ಲೂ ಚಾಲನೆಯಲ್ಲಿತ್ತು. ಸರ್ಕಾರದ ಅನುಮತಿಯನ್ನು ದುರುಪಯೋಗಪಡಿಸಿಕೊಂಡು ಸಮಾರಂಭಗಳಲ್ಲಿ ನೂರಾರು ಜನರು ಸಾಮಾಜಿಕ ಅಂತರವನ್ನು ಕಾಪಾಡದೇ ಒಟ್ಟುಗೂಡುತ್ತಿದ್ದರು. ಮಂತ್ರಿ-ಮಾಗಧರು, ಅಧಿಕಾರಿಗಳು, ಶೈಕ್ಷಣಿಕ ಚಿಂತಕರಲ್ಲಿಯೂ ಹಲವರು ಸರ್ಕಾರದ ಆದೇಶಗಳು ನಮಗೆ ಅನ್ವಯವಲ್ಲ ಎಂಬಂತಹ ರೀತಿಯಲ್ಲಿ ಮೈಮೆರೆಯುತ್ತಿರುವುದನ್ನು ಕಾಣಬಹುದಾಗಿತ್ತು. ತಮ್ಮ ಮಕ್ಕಳು/ಇನ್ನಿತರರ ಮದುವೆ ಸಮಾರಂಭ, ರಾಜಕೀಯ ಸಭೆಗಳಲ್ಲಿಯೂ ಮಾಸ್ಕ್ ಧರಿಸದೆ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡದೆ ಬೆರೆಯುತ್ತಿರುವುದರ ಫೋಟೋಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದುವು.
ವಿಫಲವಾದ ಸರ್ಕಾರ
ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆಗಳು ದೈನಂದಿನ ವೃದ್ಧಿಯಾಗುತ್ತಲೇ ಇದೆ. ಶಿಕ್ಷಣದಲ್ಲಿ ಪದವಿ ಮುಗಿಸಿದವರೂ ಉದ್ಯೋಗಕ್ಕಾಗಿ ಪರದಾಡುತ್ತಿದ್ದಾರೆ. ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಕಲಿತವರೂ ಕೆಲಸ ಸಿಗದೆ ಕಂಗಾಲಾಗಿದ್ದಾರೆ. ಅದರೊಂದಿಗೆ ಕೊರೋನಾದ ರಂಗಪ್ರವೇಶವು ಮತ್ತಷ್ಟು ಸಮಸ್ಯೆಗಳನ್ನು ಸೃಷ್ಟಿಸಿದೆ.
ಮನೆಯಿಂದ ಹೊರಗೆ ಹೋಗುವಂತಿಲ್ಲ. ಮನೆಯ ಖರ್ಚಿಗೆ ಆದಾಯದ ಮಾರ್ಗವೂ ಇಲ್ಲದಾಗಿದೆ. ಹೀಗಿರುವಾಗ ಜನರು ಲಾಕ್ಡೌನ್ ನಲ್ಲಿ ಸಿಕ್ಕಿದ ಅನುಕೂಲವನ್ನು ಉಪಯೋಗಿಸಿ ಉದ್ಯೋಗಕ್ಕಾಗಿ ತೆರಳಿದ್ದರು. ಕಾಲಕ್ರಮೇಣ ಮುಖದ ಮಾಸ್ಕ್ ರಗಳೆಯಾಗ ತೊಡಗಿತು. ಹೆಚ್ಚಿನ ಕಡೆಗಳಲ್ಲಿ ಒಂದಕ್ಕಿಂತ ಅಧಿಕ ಜನರು ಒಟ್ಟಾಗಿ ಕೆಲಸ ನಿರ್ವಹಿಸುತ್ತಿದ್ದರು. ನಿಯಮಗಳೆಲ್ಲವೂ ಕ್ರಮೇಣ ಪಾಲನೆಯಿಂದ ದೂರವಾಯಿತು. ದೂರದ ನಾಡಿನಲ್ಲಿ ಸುತ್ತಾಡುತ್ತಿದ್ದ ಕೊರೋನಾ ತನ್ನ ದಾಳಿಗೆ ವೇಗವನ್ನು ಅಳವಡಿಸಿತು.
ತಿಂಗಳ ಹಿಂದೆ ನಮ್ಮ ದೇಶದಲ್ಲಿ ದಿನನಿತ್ಯ ಒಂದೆರಡು ಸಾವಿರ ಜನರು ಈ ಸೋಂಕಿಗೆ ಸೇರ್ಪಡೆಯಾಗುತ್ತಿದ್ದರೆ, ಇದೀಗ ಪ್ರತಿದಿನ 50 ಸಾವಿರದಷ್ಟು ಮನುಷ್ಯರು ಕೋವಿಡ್ ಬಾಧಿತರಾಗುತ್ತಿದ್ದಾರೆ. ಸಾವಿರಾರು ಜನರ ಪ್ರಾಣಗಳು ಹಾರಿ ಹೋಗುತ್ತಿವೆ. ಸರಕಾರವು ಸೂಕ್ತ ವ್ಯವಸ್ಥೆಯೊಂದಿಗೆ ಬದುಕಿಗೆ ಅಗತ್ಯವಾದ ಉದ್ಯೋಗವನ್ನು ಖಾತರಿ ಪಡಿಸಿದ್ದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ರೋಗ ಹರಡುತ್ತಿರಲಿಲ್ಲವೇನೋ.!
ಶಾಸಕರ ಖರೀದಿಯಂತಹ ಅನಗತ್ಯ ಕಾರ್ಯಗಳಿಗೆ ಕೋಟ್ಯಾಂತರ ರೂಪಾಯಿಗಳನ್ನು ವ್ಯಯಿಸಿದ ಸರಕಾರವು ಜನರಿಗೆ ನೀಡಿದ ಆಶ್ವಾಸನೆ ಕಾಗದದಲ್ಲೇ ಉಳಿದಿದೆ. ಹಲವಾರು ಯೋಜನೆಗಳಿಗೆ ಕತ್ತರಿ ಹಾಕಿದ ರಾಜ್ಯ ಸರಕಾರದಿಂದ ಸರ್ವ ಜನರಿಗೂ ಒಳಿತಾಗುವ ಯೋಜನೆಗಳನ್ನು ನಿರೀಕ್ಷಿಸುವುದು ಸರಿಯಲ್ಲ.
ಮೆಚ್ಚುಗೆ ಪಡೆದ ಮುಸ್ಲಿಮರು
ಲಾಕ್ಡೌನ್ ಕಾಲದಲ್ಲಿ ಎಲ್ಲಾ ಧರ್ಮದವರ ಆರಾಧನಾಲಯಗಳು ಬಂದ್ ಆಗಿದ್ದುವು. ಮುಸ್ಲಿಮರು ಪವಿತ್ರ ಜುಮುಅಃ, ರಂಜಾನ್ ತಿಂಗಳ ತರಾವೀಹ್, ಇಅತಿಕಾಫ್, ಆಧ್ಯಾತ್ಮಿಕ ತರಗತಿ ಮತ್ತು ಪೆರ್ನಾಳ್ ನಮಾಝ್ ಗಳಂತಹ ಹಲವಾರು ಒಳಿತುಗಳನ್ನು ಮಸೀದಿಗಳಿಂದ ಮಿಸ್ ಮಾಡಿ ಬಹಳಷ್ಟು ಪುಣ್ಯಗಳನ್ನು ಕಳಕೊಂಡಿದ್ದರು. ದೇಶದ ಹಿತಕ್ಕಾಗಿ, ಜನರ ನೆಮ್ಮದಿಯಾಗಿ ಎಲ್ಲವನ್ನು ತ್ಯಾಗ ಮಾಡಿದ್ದರು.
ಆದರೆ ಸರಕಾರದ ಜವಾಬ್ದಾರಿಯುತ ಹುದ್ದೆಯಲ್ಲಿರುವ ಮಂತ್ರಿಯೊಬ್ಬರು ಇಲ್ಲಿನ ಹಿಂದುಗಳಿಗೆ ದೇವಸ್ಥಾನವನ್ನು ಓಪನ್ ಮಾಡಲು ಅವಕಾಶ ನೀಡುವ ಭರವಸೆಯನ್ನು ನೀಡಿದಾಗ ಇತರ ಧರ್ಮಗಳ ಅನುಯಾಯಿಗಳು ತಮ್ಮ ಆರಾಧನಾಲಯಗಳನ್ನು ತೆರೆಯಲು ಬೇಡಿಕೆ ಇಟ್ಟಿತ್ತು. ಅದರನ್ವಯ ಕೆಲವಡೆ ಮಸೀದಿಗಳು ಓಪನ್ ಆಗಿದ್ದರೂ ನಗರ ಪ್ರದೇಶಗಳಲ್ಲಿ ಇಂದಿಗೂ ಮಸೀದಿಗಳ ಬಾಗಿಲು ತೆರೆಯಲೇ ಇಲ್ಲ. ಅಷ್ಟರ ಮಟ್ಟಿಗೆ ಜನರ ಆರೋಗ್ಯದ ಕುರಿತು ಇಲ್ಲಿನ ಮುಸ್ಲಿಮರು ಚಿಂತಿಸುವುದನ್ನು ಜನರು ಮೆಚ್ಚುಗೆಯಿಂದ ಹೇಳುತ್ತಿದ್ದಾರೆ.
ಆರೋಗ್ಯ ಉಳಿಸಲು..!
ಯಾರು ಏನೇ ಹೇಳಲಿ. ನಮ್ಮ ಆರೋಗ್ಯವು ನಮ್ಮ ಕೈಯಲ್ಲೇ ಇದೆ. ವೈರಸನ್ನು ತಡೆಗಟ್ಟಲು ಪಾಲಿಸಬೇಕಾದ ಮುಂಜಾಗ್ರತಾ ಕ್ರಮಗಳನ್ನು ಚಾಚೂ ತಪ್ಪದೆ ಕಾಪಾಡಿಕೊಂಡು ಬರ ಬೇಕಾದುದು ನಮ್ಮ ಕರ್ತವ್ಯವಾಗಿದೆ. ಬದುಕಿನಲ್ಲಿ ಆರೋಗ್ಯಕ್ಕೆ ಮುಖ್ಯ ಪಾತ್ರವಿದೆ. ಅನಾರೋಗ್ಯವು ಎಲ್ಲವನ್ನೂ ತಡೆಹಿಡಿಯುತ್ತದೆ. ಇನ್ನೊಬ್ಬರ ಮಾತು, ಕೃತಿಗಳಿಗೆ ಗಮನಿಸದೆ ಎಸ್ಎಂಎಸ್ ಅನ್ನು ಗಟ್ಟಿಯಾಗಿ ಹಿಡಿಯೋಣ..!!