janadhvani

Kannada Online News Paper

ಇಮಾಮ್, ತಹ್ಫೀಲುಲ್ ಖುರ್ಆನ್ ಹುದ್ದೆಗಳಲ್ಲಿ ವಿದೇಶೀಯರಿಗೆ ನಿರ್ಬಂಧ

ಮಕ್ಕತುಲ್ ಮುಕರ್ರಮಃ : ಮಕ್ಕಾ ನಗರದಲ್ಲಿರುವ ಮಸೀದಿಗಳಲ್ಲಿ ವಿದೇಶೀಯರು ಇಮಾಮ್ ಕೆಲಸ ನಿರ್ವಹಿಸುವುದಕ್ಕೆ ನಿಷೇಧ. ನಿಯಮಗಳನ್ನು ಉಲ್ಲಂಘಿಸಿ ಕೆಲಸ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಮಕ್ಕಾ ಮಸೀದಿ ವ್ಯವಹಾರಗಳ ಇಲಾಖೆ ಮಾಹಿತಿ ನೀಡಿದೆ.

ಮಸೀದಿ ವ್ಯವಹಾರಗಳ ಇಲಾಖೆಯಿಂದ ಅನುಮೋದನೆ ಪಡೆಯದ ದೇಶೀಯರನ್ನು ಸಹ ಮಸೀದಿಗಳಲ್ಲಿ ಇಮಾಮ್‌ ಅಥವಾ ತಹ್ಫೀಲುಲ್ ಕುರ್ಆನ್ ಶಿಕ್ಷಕರಾಗಿ ನೇಮಿಸಬಾರದು ಎಂದು ಈ ಹಿಂದೆ ಮಸೀದಿ ವ್ಯವಹಾರಗಳ ಸಚಿವಾಲಯ ನಿರ್ದೇಶಿಸಿತ್ತು. ಅದೇ ಉದ್ಯೋಗದಲ್ಲಿ ತಾತ್ಕಾಲಿಕವಾಗಿ ವಿದೇಶಿಯರನ್ನು ನೇಮಕ ಮಾಡುವುದಕ್ಕೂ ನಿಷೇಧ ಇದೆ.

ಇದರ ಬೆನ್ನಲ್ಲೇ, ಈಗ ಮಕ್ಕಾದ ಜುಮಾ ಮಸೀದಿಗಳಲ್ಲಿ ವಿದೇಶಿಯರು ಇಮಾಮ್ ಹುದ್ದೆಯನ್ನು ಅಲಂಕರಿಸುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದು ಮಕ್ಕಾ ಮಸೀದಿ ವ್ಯವಹಾರಗಳ ಇಲಾಖೆ ಪ್ರಕಟಿಸಿದೆ.

ಅಲ್ಲದೆ, ಮಸೀದಿಗಳಲ್ಲಿ ನಡೆಯುವ ತಹ್ಫೀಲುಲ್ ಕುರ್ಆನ್ ಹುದ್ದೆಗಳಲ್ಲಿ ವಿದೇಶಿಯರನ್ನು ಶಿಕ್ಷಕರಾಗಿ ನೇಮಿಸಬಾರದು. ಮಕ್ಕಾದ ಎಲ್ಲಾ ಮಸೀದಿಗಳು ಅಂತಹ ಕೆಲಸ ಮಾಡುವ ವಿದೇಶಿಯರು ಇಲ್ಲದಂತೆ ಖಾತ್ರಿಪಡಿಸಿಕೊಳ್ಳಬೇಕೆಂದು ಮಸೀದಿ ವ್ಯವಹಾರಗಳ ಇಲಾಖೆ ಶಿಫಾರಸು ಮಾಡಿದೆ.

ಯಾವುದೇ ವಿದೇಶಿಯರು ಅಕ್ರಮವಾಗಿ ಇಂತಹ ಕೆಲಸ ಮಾಡುತ್ತಿರುವುದು ಕಂಡುಬಂದರೆ, ತಕ್ಷಣ ಅದನ್ನು ವರದಿ ಮಾಡಿ ಅವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮಸೀದಿ ವ್ಯವಹಾರ ಇಲಾಖೆ ತಿಳಿಸಿದೆ.

error: Content is protected !! Not allowed copy content from janadhvani.com