janadhvani

Kannada Online News Paper

‘ಡ್ರೋನ್ ಪ್ರತಾಪ’ ನ ಸುಳ್ಳಿನ ಕಂತೆ- ಮೆಡಲ್, ಸರ್ಟಿಫಿಕೇಟ್ ಎಲ್ಲವೂ ಫೇಕ್

ಬೆಂಗಳೂರು: ಅವಾರ್ಡ್‌ ಫೇಕ್‌, ಮೆಡಲ್‌ ಫೇಕ್‌, ಕೊಟ್ಟಿರುವ ಮಾಹಿತಿ ಫೇಕ್‌… ಎಲ್ಲವೂ ಸುಳ್ಳೇ ಸುಳ್ಳು ಎಂಬ ಬಗ್ಗೆ ಪ್ರತಾಪ್‌ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್‌ ಆಗುತ್ತಿದ್ದಾನೆ. ಎಷ್ಟೋ ಪಾಲಕರು ಈತನನ್ನು ನೋಡಿ ತಮ್ಮ ಮಕ್ಕಳಿಗೆ ಬಯ್ದದ್ದೂ ಇದೆ. ಈ ಕುರಿತು ಸ್ವತಃ ನಟ ಜಗ್ಗೇಶ್‌ ಕೂಡ ಬೇಸರ ವ್ಯಕ್ತಪಡಿಸಿದ್ದು ಇದೆ. ಪ್ರತಾಪ್‌ನ ಸಾಧನೆ ನೋಡಿ ನನ್ನ ಮಕ್ಕಳಿಗೆ ಬಯ್ದಿದ್ದೆ ಎಂದು ಅವರು ಬೇಸರ ಪಟ್ಟುಕೊಂಡಿದ್ದಾರೆ.

ಅದೇನೆ ಇರಲಿ. ಸದ್ಯ ಮಾಧ್ಯಮಗಳಲ್ಲಿ ಡ್ರೋನ್‌ ಪ್ರತಾ‍ಪ್‌ ಇದೀಗ ‘ಹೀರೊ’. ತಾನು ಭಾಷಣ ಮಾಡುವಾಗ ಮಾತಿನ ಭರದಲ್ಲಿ ಕೆಲವೊಂದು ತಪ್ಪು ಮಾಹಿತಿ ಕೊಟ್ಟಿರುವುದು ಬಿಟ್ಟರೆ ನಾನು ಜಪಾನ್, ಜರ್ಮನಿಗಳಲ್ಲಿ ಗೋಲ್ಡ್‌ ಮೆಡಲ್‌ ಪಡೆದಿರುವುದು ಮಾತ್ರ ನೂರಕ್ಕೆ ನೂರು ಸತ್ಯ ಎಂದು ಪ್ರಶ್ನಿಸಿದವರನ್ನೇ ಬೆರಗುಗೊಳಿಸುವಷ್ಟು ಮಾತಿನ ಮೋಡಿಗೆ ಸಿಲುಕಿದ್ದ.

ಆದರೆ ನೆಟ್ಟಿಗರು ಸುಮ್ಮನೇ ಬಿಟ್ಟಾರೆಯೇ? ಡ್ರೋನ್‌ನ ಹಿನ್ನೆಲೆ, ಮುನ್ನೆಲೆ, ಆತ ಹೋದದ್ದು, ಬಂದದ್ದು ಎಲ್ಲದರ ಜಾಡು ಹಿಡಿದು ಹೋಗಿದ್ದಾರೆ.

ಸಾನಿಯಾ ಮಿಶ್ರಾ ಎಂಬುವವರು ಮಾತ್ರ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಡ್ರೋನ್‌ ಪ್ರತಾಪ್‌ನ ಗೋಲ್ಡ್‌ ಮೆಡಲ್‌ ಮೂಲಕ್ಕೇ ಕೈಹಾಕುವ ಸಾಹಸ ಮಾಡಿದ್ದಾರೆ! ಹೌದು. 2018ರಲ್ಲಿ ಜರ್ಮನಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಸಂಶೋಧನಾ ಪದಕ (ಸಿಇಬಿಐಟಿ–ಅವಾರ್ಡ್‌) , ಆಲ್ಬರ್ಟ್ ಐನ್ಸ್ಟೀನ್ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಗೋಲ್ಡ್ ಮೆಡಲ್, ಐರೆಕ್ಸ್‌ನಿಂದ ಮೆಡಲ್‌ ಬಂದಿದೆ ಎಂದೇನು ಪ್ರತಾಪ್‌ ಹೇಳುತ್ತಿದ್ದಾನೆಯೋ ನೇರಾನೇರ ಆ ಸಂಸ್ಥೆಗಳಿಗೆ ಇ-ಮೇಲ್‌ ಮೂಲಕ ಮಾಹಿತಿ ಕೋರಿದ್ದಾರೆ.

ಅದರಲ್ಲಿ ಭಾರತದ ಕರ್ನಾಟಕ ಮೂಲದ ಯುವಕನೊಬ್ಬ ಈ ರೀತಿ ಅವಾರ್ಡ್‌ ಗಳಿಸಿದ್ದಾನೆ ಎಂದು ಹೇಳುತ್ತಿದ್ದು, ಅದರ ಬಗ್ಗೆ ಚರ್ಚೆಯಾಗುತ್ತಿದೆ. ಇದರ ಮಾಹಿತಿ ನೀಡಿ ಎಂದು ಕೇಳಿದ್ದಾರೆ. ಜತೆಗೆ ಆತ ಪ್ರದರ್ಶಿಸಿದ್ದ ಸರ್ಟಿಫಿಕೇಟ್‌, ಗೋಲ್ಡ್‌ ಮೆಡಲ್‌ಗಳ‌ ಫೋಟೋ ಎಲ್ಲವನ್ನೂ ಸಾನಿಯಾ ಕಳುಹಿಸಿದ್ದಾರೆ.

ಈ ಇ-ಮೇಲ್‌ಗೆ ಐರೆಕ್ಸ್‌ ಮತ್ತು ಬಿಇಬಿಐಟಿಗಳಿಂದ ರಿಪ್ಲೈ ಕೂಡ ಬಂದಿದೆ. ಅಲ್ಲೇ ಇರುವುದು ಟ್ವಿಸ್ಟ್‌.

ಈ ರಿಪ್ಲೈನಲ್ಲಿ ಎರಡೂ ಸಂಸ್ಥೆಗಳು ತಾವು ಪ್ರತಾಪ್‌ ಎಂಬ ಯುವಕನಿಗೆ ಯಾವುದೇ ಅವಾರ್ಡ್‌ ಕೊಟ್ಟಿಲ್ಲ. ಈ ಚಿತ್ರದಲ್ಲಿ ಇರುವುದು ಫೇಕ್‌ ಸರ್ಟಿಫಿಕೇಟ್‌. ನಮ್ಮ ಲೋಗೋ ಈ ರೀತಿ ಇಲ್ಲ, ಐರೆಕ್ಸ್‌ ಸಂಸ್ಥೆ ಹೆಸರಿನಲ್ಲಿ ಈ ಯುವಕನ ಕುತ್ತಿಗೆಯಲ್ಲಿ ಇರುವ ನೆಕ್‌ಬೆಲ್ಟ್‌ನಲ್ಲಿ ತೋರಿಸಿರುವ ಲೋಗೋ ನಮ್ಮದಲ್ಲ ಎಂದಿದ್ದಾರೆ!

ಅಷ್ಟೇ ಅಲ್ಲ, 2018ರಲ್ಲಿ ನಾವು ಸಿಇಬಿಐಟಿನಲ್ಲಿ ಅವಾರ್ಡ್‌ ಆಯೋಜಿಸಿಯೇ ಇಲ್ಲ. ಅಷ್ಟೇ ಅಲ್ಲದೇ, ಈ ಸರ್ಟಿಫಿಕೇಟ್‌ನಲ್ಲಿ ಕೆಳಗಡೆ ಸಹಿ ಇರುವ ಸಂಸ್ಥೆಯ ಮುಖ್ಯಸ್ಥರಾಗಿದ್ದ ಡಾ.ವಲ್‌ಫ್ರ್ಯಾಮ್‌ ವನ್‌ ಅವರ ಅವಧಿ 2017ರಲ್ಲಿಯೇ ಮುಗಿದಿದೆ. ಹೀಗಿರುವಾಗ 2018ರಲ್ಲಿ ಅವರ ಸಹಿ ಹೇಗೆ ಬರಲು ಸಾಧ್ಯ? ಇದು ಫೇಕ್‌ ಸರ್ಟಿಫಿಕೇಟ್‌ ಎಂದು ನಮೂದಿಸಿದ್ದಾರೆ.

ಈ ಸರ್ಟಿಫಿಕೇಟ್‌ನ ಪಿಡಿಎಫ್‌ ಟೆಂಪ್ಲೇಟ್‌ಗಳು ಇಂಟರ್‌ನೆಟ‌ನಲ್ಲಿ ಸುಲಭದಲ್ಲಿ ದೊರಕುತ್ತದೆ. ಅದನ್ನು ಯಾರು ಬೇಕಾದರೂ ಪ್ರಿಂಟ್‌ ಮಾಡಿಕೊಂಡು ತಮಗೆ ಬೇಕಾದಂತೆ ತಿರುಚಿಕೊಳ್ಳಬಹುದು ಎಂಬ ಬಗ್ಗೆ ಈಗಾಗಲೇ ಸಾಕಷ್ಟು ಟ್ರೋಲ್‌ ಆಗಿರುವುದು ಇಲ್ಲಿ ಉಲ್ಲೇಖಾರ್ಹ.

ಮಾಧ್ಯಮಗಳಲ್ಲಿ ಸಂದರ್ಶನ ಮಾಡುವ ಸಮಯದಲ್ಲಿ ತನಗೆ ಉತ್ತರ ಹೇಳಲು ತೋಚದಾಗ ‘ಇವೆಲ್ಲಾ ತುಂಬಾ ಸೀಕ್ರೇಟ್‌. ನನ್ನ ಮೇಲ್‌ಗೆ ಎಲ್ಲ ಸಂಸ್ಥೆಗಳು ಸಂದೇಶ ಕಳುಹಿಸಿದ್ದು, ಅದನ್ನು ತಾನು ಬಹಿರಂಗವಾಗಿ ಹೇಳುವಂತಿಲ್ಲ, ಇವು ತುಂಬಾ ಕಾನ್ಫಿಡೆನ್ಷಿಯಲ್‌, ನಾನು ಕಂಪನಿ ಜತೆ ಒಪ್ಪಂದ ಮಾಡಿಕೊಂಡಿರುವ ಕಾರಣ, ಹೀಗೆಲ್ಲಾ ಹೇಳುವಂತಿಲ್ಲ’ ಎಂದು ನುಣುಚಿಕೊಳ್ಳುವ ಪ್ರತಾಪ್‌ ಈ ಸಂಸ್ಥೆಗಳ ಇ-ಮೇಲ್‌ ನೋಡಿದರೆ ಇನ್ನೇನು ಹೇಳುತ್ತಾನೋ ಕಾದು ನೋಡಬೇಕು.

error: Content is protected !! Not allowed copy content from janadhvani.com