ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ದೇಶದ ಹೆಸರನ್ನು ಇಂಡಿಯಾ ಬದಲು ಭಾರತ ಎಂದು ಅಧಿಕೃತವಾಗಿ ಘೋಷಣೆ ಮಾಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯೊಂದನ್ನು ಸುಪ್ರೀಕೋರ್ಟ್ ಇಂದು ವಜಾಗೊಳಿಸಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ ಎಸ್.ಎ.ಬೋಬ್ಡೆ ಪೀಠವು ಸಂವಿಧಾನದಲ್ಲಿಯೇ ಇಂಡಿಯಾ ಮತ್ತು ಭಾರತ ಎಂಬ ಪದಗಳನ್ನು ಬಳಸಲು ಭಾರತೀಯ ಸಂವಿಧಾನದಲ್ಲಿ ಸ್ಪಷ್ಟ ಉಲ್ಲೇಕವಿದೆ. ಹೀಗಿದ್ದರೂ ಈ ವಿಷಯವನ್ನು ಸರ್ವೋಚ್ಚ ನ್ಯಾಯಾಲಯದವರೆಗೆ ತರುವ ಅಗತ್ಯವೇನಿತ್ತು ಎಂಬುದನ್ನು ಕೋರ್ಟ್ ಪ್ರಶ್ನಿಸಿ,ಅರ್ಜಿಯನ್ನು ವಜಾಗೊಳಿಸಿತು.
ಈ ಅರ್ಜಿ ವಜಾಗೊಳಿಸಲು ಯೋಗ್ಯವಾಗಿದೆ. ದೇಶದ ಅಧಿಕೃತ ಹೆಸರನ್ನು ಬದಲಿಸುವುದು ಸುಪ್ರೀಂಕೋರ್ಟ್ ಕಾರ್ಯವಲ್ಲ ಎಂದು ಹೇಳಿರುವ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೋಬ್ಡೆ, ಇದರ ಕುರಿತು ಕೇಂದ್ರ ಸರ್ಕಾರವೇ ನಿರ್ಧರಿಸಲಿ ಎಂದು ಹೇಳಿದರು. ಅರ್ಜಿದಾರ ತನ್ನ ಅರ್ಜಿಯ ಪ್ರತಿಯನ್ನು ಸಂಬಂಧಪಟ್ಟ ಸಚಿವಾಲಯಕ್ಕೆ ಕಳುಹಿಸಿ ಮುಂದೆ ಹೆಜ್ಜೆ ಇಡಬಹುದು ಎಂದು ಬೋಬ್ಡೆ ಸಲಹೆ ನೀಡಿದ್ದಾರೆ.
ದೇಶದ ಹೆಸರನ್ನು ಇಂಡಿಯಾ ಬದಲು ಭಾರತ ಅಥವಾ ಹಿಂದೂಸ್ಥಾನ ಎಂದು ಮರುನಾಮಕರಣ ಮಾಡಬೇಕು ಎಂದು ಕೋರಿ ದೆಹಲಿ ಮೂಲದ ಉದ್ಯಮಿ ನಮಹಾ ಎಂಬುವವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
INDIA ಎಂಬ ಪದ ದೇಶೀಯವಲ್ಲ ಬದಲಿಗೆ ಗ್ರೀಕ್ ಭಾಷೆಯ INDICA ಪದದಿಂದ ಬಂದಿದೆ ಎಂದು ನಮಹಾ ತಮ್ಮ ಅರ್ಜಿಯಲ್ಲಿ ವಾದಿಸಿದ್ದರು. ನಾವು ದೇಶವನ್ನು ಸ್ಮರಿಸುವಾಗ ಭಾರತ್ ಮಾತಾ ಕೀ ಜೈ ಎನ್ನುತ್ತೇವೆ. ಹೀಗಾಗಿ ದೇಶದ ಹೆಸರನ್ನು ಭಾರತ ಅಥವಾ ಹಿಂದೂಸ್ಥಾನ ಎಂದು ಅಧಿಕೃತವಾಗಿ ಘೋಷಿಸಬೇಕು ಎಂದು ನಮಹಾ ಆಗ್ರಹಿಸಿದ್ದರು.