janadhvani

Kannada Online News Paper

🖊️ಎಂಕೆಎಂ ಕಾಮಿಲ್ ಸಖಾಫಿ ಕೊಡಂಗಾಯಿ

ಅನಾರೋಗ್ಯದಿಂದ ಹಾಸಿಗೆ ಹಿಡಿದ ತಾಯಿಯ ಶುಶ್ರೂಷೆಯಲ್ಲಿ ತೊಡಗಿರುವ ಆತ, ಮದ್ದಿನ ಚೀಟಿಯೊಂದಿಗೆ ದಾರಿ ಬದಿಗೆ ಬಂದು ತಲುಪಿದನು. ಲಾಕ್ಡೌನ್ ಕಾರಣ ಸಾರಿಗೆ ಸಂಚಾರವು ಮುಚ್ಚಲ್ಪಟ್ಟಿದ್ದುವು. ಖಾಸಗಿ ವಾಹನಗಳು ಅಗತ್ಯಕ್ಕಾಗಿ ಮಾತ್ರ ಓಡಾಡಲು ಅನುಮತಿ ಪಡೆದಿದ್ದುವು. ಒಪ್ಪೊತ್ತಿನ ಅನ್ನಕ್ಕೂ ಕಷ್ಟಪಡುವ ಆತನಲ್ಲಿ ವಾಹನವಾದರೂ ಹೇಗೆ ತಾನೇ ಇರಬಹುದು.!?

ಯಾರಾದರೂ ಸಹಾಯ ಮಾಡಿಯಾರೆಂಬ ಅತಿಯಾಸೆಯಿಂದ ದಾರಿಯ ಎರಡು ದಿಕ್ಕುಗಳನ್ನು ದಿಟ್ಟಿಸುತ್ತಾ ನಿಂತ ಆತನ ದೃಷ್ಟಿಗೆ ಒಂದು ಬೈಕ್ ಕಾಣಸಿಕ್ಕಿತು. ಆತನ ಮನಸ್ಸಿನಲ್ಲಿ ಆಕಾಂಕ್ಷೆಗಳ ಕನಸುಗಳು ಚಿಗುರೊಡೆಯಿತು. ಮೂರು ಜನರಿಂದ ತುಂಬಿ ತುಳುಕಿದ ಬೈಕಲ್ಲಿ ಇನ್ನೊಬ್ಬರಿಗೆ ಕುಳಿತು ಸಂಚರಿಸಲು ಖಂಡಿತವಾಗಿಯೂ ಸಾಧ್ಯವಿರಲಿಲ್ಲ.

ಆದರೂ ತಾಯಿಯ ಮಧ್ಯಾಹ್ನದ ಔಷಧಿಯನ್ನು ಖರೀದಿಸದೇ ಬೇರೆ ದಾರಿಯಿಲ್ಲ. ಬೇರೇನಾದರೂ ವಾಹನವು ಸಿಗಬಹುದೆಂಬ ಯಾವ ಖಾತ್ರಿಯೂ ಇಲ್ಲ. ಹಾಗಿರುವಾಗ ಕೈಗೆ ಸಿಕ್ಕಿದ್ದನ್ನು ಬಿಟ್ಟು ಬಿಡುವುದನ್ನು ಆತ ಯೋಚಿಸಲಿಲ್ಲ…
ಆತ ಅವರಲ್ಲಿ ಭಿನ್ನವಿಸಿಕೊಂಡ :
“ನನ್ನ ತಾಯಿಗೆ ತುರ್ತಾಗಿ ಔಷಧಿ ತರಬೇಕಾಗಿದೆ. ದಯವಿಟ್ಟು ಮೆಡಿಕಲ್ ಅಂಗಡಿಯತ್ತಿರ ನನ್ನನ್ನು ಡ್ರಾಪ್ ಮಾಡುವಿರಾ..?”
“ಈ ಬೈಕ್ ಲ್ಲಿ ಇನ್ನೊಬ್ಬರಿಗೆ ಕುಳಿತುಕೊಳ್ಳಲು ಆಗದು” ಎಂದು ತಿಳಿಸಿ ಅವರು ಹೊರಡಲು ರೆಡಿಯಾದರು.

ಆತ ಇನ್ನಷ್ಟು ವಿನಮ್ರತೆಯಿಂದ ಬೇಡಿದ : “ನೀವಾದರೂ ಈ ಚೀಟಿಯಲ್ಲಿರುವ ಔಷಧಿಯನ್ನು ಖರೀದಿಸಿ ನನ್ನ ಕೈಗೆ ತಂದೊಪ್ಪಿಸಿ”
ಅದಕ್ಕವರು “ಹುಂ” ಗುಟ್ಟಿದ್ದರು.
ಹುಡುಕುತ್ತಿದ್ದಾಗ ಅದೆಷ್ಟೋ ಬಾರಿ ಸಿಗಲಿಲ್ಲ. ಇನ್ನು ಸಿಕ್ಕಾಗ ಬೇಡ ಎಂದು ಹೇಳುವುದು ಸರಿಯಾ.? ಎಂದು ಅವರ ಹೃದಯವು ಸಂಭ್ರಮಿಸಿತು.
ಆತ ತನ್ನ ಜೇಬಿನಲ್ಲಿದ್ದ ಹಣವನ್ನು ಅವರ ಕೈಗೆ ನೀಡಿದಾಗ ಒಂದೂ ಸೆಕೆಂಡ್ ತಡಮಾಡದೇ ಅವರು ಹೊರಟರು. ಆತ ನೀಡಿದ ಔಷಧಿಯ ಚೀಟಿಯನ್ನು ಅವರು ಪಡೆದುಕೊಂಡಿರಲಿಲ್ಲ. ಕಾರಣ, ಆತನಿಗೆ ಸಹಾಯ ಮಾಡುವ ಉದ್ದೇಶದಿಂದ ಅವರು ಆತನ ಕೈಯಿಂದ ಹಣ ಪಡೆದು ಹೊರಟದ್ದಲ್ಲ. ಬದಲು ಅವನನ್ನು ವಂಚಿಸಿ ಹಣ ಪಡೆದು ಪರಾರಿಯಾಗಿದ್ದರು.
ಆತ ಬೈಕ್ ನ ಹಿಂದೆ ಚೀಟಿಯನ್ನು ಹಿಡಿದು ಬಹಳಷ್ಟು ಸಮಯ ಓಡಿದನು. ಮತ್ತೆ ಮತ್ತೆ ಓಡುತ್ತಾ ಓಟಕ್ಕೆ ವೇಗವನ್ನು ಅಳವಡಿಸಿದ್ದರೂ ಅಷ್ಟರಲ್ಲೇ ಅವರು ಕಣ್ಮರೆಯಾಗಿದ್ದರು..
ಅಸಹಾಯಕನಾದ ಆತನಿಗೆ ಇನ್ನೇನು ಮಾಡಲಾದೀತು.!?
ದಾರಿ ಬಳಿ ಮರವೊಂದಕ್ಕೆ ಒರಗಿ ಬಹಳ ಹೊತ್ತು ನಿಂತಿರಬೇಕು. ಅಷ್ಟರಲ್ಲಿ ಮುಖಕ್ಕೆ ಮಾಸ್ಕ್ ಹಾಕಿದ ಇಬ್ಬರು ಸ್ವಯಂಸೇವಕರು ಆ ಕಡೆ ನಡೆದು ಬರುತ್ತಿದ್ದರು. ಸಿಡಿಲೆರಗಿದಂತೆ ನಿಂತಿದ್ದ ಆತನನ್ನು ಕಂಡಾಗ ಅವರು ಮಾತಿಗೆಳೆದರು. ನಡೆದ ಘಟನೆಯನ್ನು ಕಣ್ಣೀರು ಸುರಿಸುತ್ತಾ ಆತ ವಿವರಿಸಿದನು. ಅವರಲ್ಲೊಬ್ಬರು ಮತ್ತೊಬ್ಬರಲ್ಲಿ ಔಷಧೀಯ ಚೀಟಿಯನ್ನು ನೀಡಿ ಕಾಲ್ ಮಾಡಿ ವ್ಯವಸ್ಥೆ ಮಾಡುವಂತೆ ಆಜ್ಞಾಪಿಸಿದರು. ಆತನ ಮನೆಯಲ್ಲಿ ಬೆಂಕಿ ಉರಿಸದೇ ದಿನಗಳಾದ ಮಾಹಿತಿಯು ಆತನ ಮಾತಿನಿಂದ ಮನದಟ್ಟಾದಾಗ ಅದಕ್ಕೂ ಏರ್ಪಾಡು ಮಾಡಲು ಸೂಚಿಸಿದರು.
……………………
ಔಷಧಿಗಾಗಿ ತಂದಿದ್ದ ಹಣವನ್ನು ಆತನಿಂದ ಕಿತ್ತು ಪರಾರಿಯಾಗಿದ್ದ ಆ ಮೂವರು ಗೆಳೆಯರ ಸಂತೋಷಕ್ಕೆ ಅಧಿಕ ಆಯುಷ್ಯ ಉಂಟಾಗಲಿಲ್ಲ. ಅವರು ನೇರವಾಗಿ ಪೊಲೀಸರ ಬಲೆಗೆ ಬಿದ್ದರು. ಅನಗತ್ಯವಾಗಿ ತಿರುಗಾಡುತ್ತಿರುವವರನ್ನು ಕಟ್ಟಿಹಾಕಲು ರಾತ್ರಿ-ಹಗಲೆನ್ನದೆ ನೀರು ಮತ್ತು ನಿದ್ರೆ ಬಿಟ್ಟು ಹೋರಾಟದಲ್ಲಿರುವ ಪೊಲೀಸರು ಈ ಮೂವರನ್ನು ಕೂಡ ತಡೆದು ನಿಲ್ಲಿಸಿದರು.
“ನಿಮ್ಮ ಹೆಸರೇನು”
“ಜಾನ್ ಡಿಸೋಜ”
“ಅಕ್ರಂ”
“ನಾಗೇಶ”
ಒಬ್ಬೊಬ್ಬೊರು ಅವರವರ ಹೆಸರನ್ನು ತಿಳಿಸಿದರು.
“ಎಲ್ಲಿಗೆ ಹೋಗುತ್ತಿರುವುದು?” ಪೋಲೀಸರು ವಿಚಾರಣೆ ಆರಂಭಿಸಿದರು.
” ಹೀಗೆ ಸುಮ್ಮನೆ ಹೊರಟಿದ್ದೇವೆ” ಎಂದು ಅಕ್ರಂ ನುಡಿದನು.
“ಒಂದು ಬೈಕಲ್ಲಿ ಮೂವರು ಒಮ್ಮೆಲೆ ಸಂಚರಿಸುವುದು ತಪ್ಪಲ್ಲವೇ.?”
“ಬೈಕ್ ನನ್ನಲ್ಲಿ ಮಾತ್ರವೇ ಇರುವುದು” ನಾಗೇಶ್ ಉತ್ತರಿಸಿದನು.
“ಕೋರೋನ ವೈರಸ್ ತಡೆಗಟ್ಟಲು ಮುಖಕ್ಕೆ ಮಾಸ್ಕ್ ಹಾಕಲು ಸರಕಾರ ತಿಳಿಸಿದೆ ತಾನೇ.!?”
“ಕೋರೋನ ವೈರಸ್ ನಮ್ಮಂತಹವರಿಗೆ ಬಾಧಿಸದು” ಜಾನ್ ಡಿಸೋಜ ಜಾಣನಾಗಿ ನುಡಿಯುತ್ತಾ ಮಾತು ಮುಗಿಸಿದನು.
ಇವರಲ್ಲಿ ಇನ್ನೇನು ಕೇಳಿಯೂ ಪ್ರಯೋಜನವಿಲ್ಲವೆಂದು ಮನವರಿಕೆಯಾದ ಪೊಲೀಸ್ ಅಧಿಕಾರಿಯವರು ತಮ್ಮ ವಾಹನದಲ್ಲಿ ಅವರನ್ನು ಕುಳ್ಳಿರಿಸಿ ಆರಕ್ಷಕ ಠಾಣೆಗೆ ಕರೆದುಕೊಂಡು ಹೋದರು.
………………….
ಅದರೆಡೆಯಲ್ಲಿ ಔಷಧಿಯ ಚೀಟಿ ಮತ್ತು ಮನೆಗೆ ಬೇಕಾದ ಅಗತ್ಯ ಸಾಮಾನುಗಳ ಲಿಸ್ಟ್ ಸಂದೇಶವು ವಾಟ್ಸಪ್ ಮುಖಾಂತರ ಅವರ ಮೊಬೈಲಿಗೆ ಬಂದಿತ್ತು. ಅವುಗಳ ಕಿಟ್ ನೊಂದಿಗೆ ಆ ಪೊಲೀಸ್ ಅಧಿಕಾರಿಯು ತನ್ನ ಮಿತ್ರರೊಬ್ಬರ ಜೊತೆ ಜೀಪಿನಲ್ಲಿ ಆತನ ಮನೆಯ ವಿಳಾಸ ಕೇಳಿ ತಿಳಿದು ಬಂದು ತಲುಪಿದರು.
ಹಾಸಿಗೆಯಲ್ಲಿ ಮಲಗಿದ್ದ ತಾಯಿಯ ಅನಾರೋಗ್ಯವನ್ನು ಕೇಳಿ ತಿಳಿದು ಔಷಧಿಗಳ ಕಟ್ಟನ್ನು ನೀಡಿ ಶುಭ ಹಾರೈಸಿದರು.
ಮನೆಗೆ ಬೇಕಾದ ಸಾಮಾನುಗಳನ್ನು ಆತನಿಗೆ ಹಸ್ತಾಂತರಿಸಿದರು.
ಯಾತ್ರೆ ಹೇಳಿ ಮರಳುವಾಗ ಹೊರಗಡೆ ಸ್ವಯಂ ಸೇವಕರಾದ ಇಬ್ಬರು ಸಹೋದರರು ನಿಂತಿದ್ದರು. ಪೊಲೀಸ್ ಅಧಿಕಾರಿಯವರು ಅವರಿಗೂ ನಮಸ್ಕರಿಸಿ ಎದುರುಗಡೆ ನಿಂತಿರುವ ವಾಹನದತ್ತ ತೆರಳುತ್ತಿರುವಾಗ ಹಿಂದಿನಿಂದ “ಸರ್” ಎಂಬ ಶಬ್ದ ಕೇಳಿ ಮುಖವನ್ನು ತಿರುಗಿಸಿದರು.
“ನಿಮ್ಮ ಮುಖವನ್ನೊಮ್ಮೆ ತೋರಿಸಬಹುದಾ.?” ಎಂಬ ಆತನ ಬೇಡಿಕೆಯಲ್ಲಿ ದೈನ್ಯತೆ ಇತ್ತು.
ಅವರು ತಮ್ಮ ಮುಖಕ್ಕೆ ಹಾಕಿದ ಮಾಸ್ಕ್ ಕೆಳಗೆ ಮಾಡಿ ತಮ್ಮ ನೈಜ ಮುಖವನ್ನು ತೋರಿಸಿದಾಗ ಹರಿಯುತ್ತಿರುವ ಕಣ್ಣೀರಿನೊಂದಿಗೆ ಆತ ಕೃತಜ್ಞತೆಯ ಸೆಲ್ಯೂಟ್ ಹೊಡೆದನು.

error: Content is protected !! Not allowed copy content from janadhvani.com