janadhvani

Kannada Online News Paper

ಈದ್ ಆಚರಣೆ ಸರಳ ಮತ್ತು ಸುರಕ್ಷಿತವಾಗಿರಲಿ

ಪವಿತ್ರ ರಮಳಾನ್ ತಿಂಗಳು ಇನ್ನೇನು ನಮ್ಮಿಂದ ವಿದಾಯ ಹೇಳಲಿದೆ. ಮುಸ್ಲಿಮ್ ಜಗತ್ತು ಈದ್ (ಹಬ್ಬ)ವನ್ನು ಸರಳವಾಗಿ ಮತ್ತು ಸುರಕ್ಷಿತವಾಗಿ ಆಚರಿಸಲು ಮುಂದಾಗಿದ್ದಾರೆ. ಸಮುದಾಯದ ವಿದ್ವಾಂಸರು ಲಾಕ್ ಡೌನ್ ಆರಂಭದಿಂದಲೇ ಸಮುದಾಯದ ಹಿತರಕ್ಷಣೆಯ ನಿಟ್ಟಿನಲ್ಲಿ ಮಸೀದಿಯಲ್ಲಿ ನಡೆಯುವ ಶುಕ್ರವಾರದ ಜುಮುಅ ಸೇರಿದಂತೆ ಎಲ್ಲಾ ಸಾಮೂಹಿಕ ಪ್ರಾರ್ಥನೆಗಳಿಂದ ದೂರವಾಗಲು ಹೇಳುವ ಮೂಲಕ ಧಾರ್ಮಿಕ ಆಚರಣೆಗಳು ಸಮಾಜದ ಸ್ವಾಸ್ತ್ಯಕ್ಕೆ ಅಡ್ಡಿಯಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದ್ದಾರೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸರಕಾರ ಬಟ್ಟೆ ಅಂಗಡಿಗಳನ್ನು ತೆರೆಯಲು ಅವಕಾಶ ಕೊಟ್ಟಿದ್ದರೂ, ಹಬ್ಬ ಆಚರಣೆ ನೆಪದಲ್ಲಿ ಸಾಮಾಜಿಕ ಅಂತರ ಕಾಪಾಡಲು ಅಸಾಧ್ಯವಾದ ಬಟ್ಟೆ ಅಂಗಡಿಗಳಲ್ಲಿ ಈದ್ ಶಾಪಿಂಗ್ ಗಾಗಿ ಹೊರಹೋಗದಂತೆ ಸಮಾಜವನ್ಬು ಎಚ್ಚರಿಸಿ ಕರೆ ನೀಡಿದ್ದರು. ಮುಸ್ಲಿಮ್ ಸಮಾಜವನ್ನು ಕೋವಿಡ್ -19ರ ಹೆಸರಿನಲ್ಲಿ ಕೋಮುವಾದಿ ಮಾಧ್ಯಮಗಳೆಲ್ಲಾ ‘ಮುಸ್ಲಿಂ ವೈರಸ್’ ಹಣೆ ಪಟ್ಟಿ ಕಟ್ಟಲು ಹವಣಿಸುತ್ತಿದ್ದಾಗ ಈ ಕರೆಗೆ ಸಮಾಜ ಅತ್ಯಂತ ಮುತುವರ್ಜಿಯಿಂದ ಓಗೊಟ್ಟು ಸಹಕಾರ ನೀಡಿದ್ದು ಮಾತ್ರವಲ್ಲದೇ, ಹಲವು ಮುಸ್ಲಿಮ್ ಜವಳಿ ವರ್ತಕರು ಕೂಡ ತಮ್ಮ ಅಂಗಡಿಗಳನ್ನು ಬಂದ್ ಮಾಡುವ ಮೂಲಕ ಸಾಮಾಜಿಕ ಸ್ವಾಸ್ಥ್ಯಕ್ಕೆ ಪ್ರಾಶಸ್ತ್ಯ ನೀಡಿದ್ದಾರೆ.

NoEidShopping ಮತ್ತು #SimpleEidThisRamadan ಎಂಬೆರಡೂ ಟ್ಟಿಟರ್ ಹ್ಯಾಶ್ ಟ್ಯಾಗ್ ಟ್ರೆಂಡಿಗ್ ಆಗಿತ್ತು. ಸಮುದಾಯದ ಉಲಮಾ ನೇತೃತ್ವದಲ್ಲಿ ಮಾತ್ರ ಸಮಾಜ ಮುನ್ನಡೆಯಲು ಸಾಧ್ಯ ಎಂಬ ಒಕ್ಕೊರಲಿನ ಶಬ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಕೇಳಿ ಬಂತು.

ಸರಕಾರ ಲಾಕ್ ಡೌನ್ ಅನ್ನು ಎರಡನೇ ಬಾರಿ ಸಡಿಲಿಕೆ ಮಾಡಿ ಸಾರ್ವಜನಿಕ ಸಾರಿಗೆಗೆ ಅವಕಾಶ ನೀಡಿತ್ತು. ಆ ಮೂಲಕ ಕೊರೋನಾ ವಿರುದ್ಧ ಸಮರವನ್ನು ಮತ್ತು ಸಾಮಾಜಿಕ ಸ್ವಾಸ್ತ್ಯ ಕಾಪಾಡುವುದು ಪ್ರಜೆಗಳ ವೈಯುಕ್ತಿಕ ಜವಾಬ್ದಾರಿಯನ್ನಾಗಿಸಿದೆ.

ಈ ಸಡಿಲಿಕೆಯಿಂದ ಕೊರೋನಾ ಸೋಂಕು ತಗಲುವ ಸಾಧ್ಯತೆ ಈ ಮೊದಲಿಗಿಂತ ಹೆಚ್ಚಾಗಿದೆ. ರಂಝಾನ್ ಹಬ್ಬ ಇನ್ನೇನು ಬೆರಳೆಣಿಕೆಯ ದಿನ ಮಾತ್ರ ಬಾಕಿ ಇದೆ. ಮುಸ್ಲಿಂ ಸಮಾಜ ಈದ್ ಶಾಪಿಂಗ್ ಮಾಡಲು ಈ ಸಡಿಲಿಕೆಯನ್ಬು ಬಳಸಿದರೆ ಅಪಾಯ ಎದುರಾಗುತ್ತಿತ್ತು.

ಈ ಬಗ್ಗೆ ಟ್ವಿಟರ್ ಅಭಿಯಾನ ನಡೆದು ಸಾಮಾಜಿಕ ಕಳಕಳಿಯ ಟ್ವೀಟ್ ಮೂಲಕ ಕೋಮು ಸೌಹಾರ್ದತೆಗೆ ಧಕ್ಕೆಯಾಗದಂತೆ ಈದ್ ಹಬ್ಬ ಆಚರಿಸಲು ಮುಸಲ್ಮಾನ ಸಮುದಾಯ ತೀರ್ಮಾನಕ್ಕೆ ಬಂದಿದೆ.

ಈದ್ ದಿನವೂ ಕೂಡಾ ಹೊರಹೋಗದಂತೆ ಕುಟುಂಬದೊಳಗೆ ಹಬ್ಬ ಆಚರಿಸುವಂತೆ ಭಾರದತದ ಗ್ರಾಂಡ್ ಮುಫ್ತಿ ಶೈಖ್ ಅಬೂಬಕರ್ ಅಹ್ಮದ್ ಕಾಂತಪುರಂ ಎ.ಪಿ. ಉಸ್ತಾದ್ ಟ್ವೀಟ್ ಮೂಲಕ ಕರೆ ನೀಡಿದ್ದಾರೆ.

ಈ ಅಭಿಯಾನ ಯಶಸ್ವಿಯಾದಂತೆ ಈದ್ ಬಳಿಕವೂ ಭಾರತದ ಮುಸಲ್ಮಾನರ ಸಮಸ್ಯೆಗಳನ್ನು ಪರಿಹರಿಸಲು ವಿದ್ವಾಂಸರ ನೇತೃತ್ವದಲ್ಲಿ ಮುಸ್ಲಿಂ ಸಮುದಾಯ ಕೈಜೋಡಿಸಿದರೆ ಯಶಸ್ಸು ಕಾಣಲಿದೆ.

ನಾಡಿನ ಸರ್ವ ಜನತೆಗೂ ಈದುಲ್ ಫಿತ್ವ್‌ರ್ ಹಬ್ಬ ಶಾಂತಿಯನ್ನು ಸಂರಕ್ಷಣೆಯನ್ನು ನೀಡಲಿ ಎಂದು ಆಶಿಸೋಣ

error: Content is protected !! Not allowed copy content from janadhvani.com