ಅಬುಧಾಬಿ: ಕನ್ನಡಿಗ ಕೆ.ಸಿ.ಎಫ್ ಕಾರ್ಯಕರ್ತರಾದ ಅಬ್ಬಾಸ್ ಉಚ್ಚಿಲರವರು ಕಳೆದ ಎರಡು ವಾರಗಳಿಂದ ಅಬುಧಾಬಿ ಮಫ್ರಕ್ ಶೈಖ್ ಸಕ್ಬುತ್ ಅಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಅಲ್ಲಾಹನ ಅನುಲ್ಲಂಘನೀಯ ಕರೆಗೆ ಓಗೊಟ್ಟು ಇಹಲೋಕ ತ್ಯಜಿಸಿದ್ದಾರೆ.
ಕೆ.ಸಿ.ಎಫ್ ಅಬುಧಾಬಿ ಝೋನ್ ಅಧ್ಯಕ್ಷರಾದ ಬಹು!ಅಮಾನಿ ಉಸ್ತಾದರ ನೇತೃತ್ವದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಮಯ್ಯತ್ ನಮಾಝ್ ನಿರ್ವಹಿಸಿ, ಅಬುಧಾಬಿ ಬನಿಯಾಸ್ ಖಬರ್ ಸ್ಥಾನದಲ್ಲಿ ಅಬ್ಬಾಸ್ ಉಚ್ಚಿಲರ ಜನಾಝ ದಫನ ಕಾರ್ಯವನ್ನು ಕೆ.ಸಿ.ಎಫ್ ಅಬುಧಾಬಿ ನೆರೆವಿನಲ್ಲಿ ನಿರ್ವಹಿಸಲಾಯಿತು. ಸಂಬಂಧಿತ ದಾಖಲೆ ಪತ್ರಗಳ ನಿರ್ವಹಣೆಯನ್ನು ಕೆ.ಸಿ.ಎಫ್ ಅಬುಧಾಬಿ ಸಾಂತ್ವನ ವಿಭಾಗವು ನಿರ್ವಹಿಸಿತ್ತು.
ಕೆ.ಸಿ.ಎಫ್ ಕಾರ್ಯಕರ್ತ ಅಬ್ಬಾಸ್ ಉಚ್ಚಿಲರ ಅಗಲಿಕೆಗೆ ಎಸ್.ವೈ.ಎಸ್ ರಾಜ್ಯಾಧ್ಯಕ್ಷರಾದ ಉಸ್ಮಾನ್ ಸಅದಿ ಪಟ್ಟೋರಿ, ಪ್ರ.ಕಾರ್ಯದರ್ಶಿ ಝೈನಿ ಕಾಮಿಲ್ ಸಖಾಫಿ, ಖ್ಯಾತ ವಾಗ್ಮಿ ನೌಫಲ್ ಸಖಾಫಿ ಕಳಸ,ಯು.ಎ.ಇ ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿಯ ಕೋಶಾಧಿಕಾರಿ ಬಹು|ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಲ,ರಾಷ್ಟ್ರೀಯ ಅಧ್ಯಕ್ಷರಾದ ಬಹು!ಅಬ್ದುಲ್ ಜಲೀಲ್ ನಿಝಾಮಿ,ಅಬುಧಾಬಿ ಝೋನ್ ಅಧ್ಯಕ್ಷರಾದ ಬಹು!ಹಸೈನಾರ್ ಅಮಾನಿ ಉಸ್ತಾದ್ ಮುಂತಾದ ಸುನ್ನೀ ನಾಯಕರು ತೀವ್ರ ಸಂತಾಪವನ್ನು ಸೂಚಿಸಿದ್ದಾರೆ.
ಅಗಲಿದ ಅಬ್ಬಾಸ್ ರವರು ಎರಡು ಮಕ್ಕಳು,ಪತ್ನಿ ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ಹೆಸರಲ್ಲಿ ತಹ್ಲೀಲ್ ಖುರ್ ಆನ್ ಪಾರಾಯಣ ಹಾಗೂ ಜನಾಝ ನಮಾಝ್ ನಿರ್ವಹಿಸಿ, ಪ್ರತ್ಯೇಕ ದುಆ ನಡೆಸಬೇಕೆಂದು ವಿನಂತಿಸಲಾಗಿದೆ.
ವರದಿ: ಇರ್ಫಾಝ್ ತುಂಬೆ
(ಮೀಡಿಯಾ ಕನ್ವಿನರ್ ಕೆ.ಸಿ.ಎಫ್ ಅಬುಧಾಬಿ)






