janadhvani

Kannada Online News Paper

ಸೌದಿ: ಮೇ.22 ರ ವರೆಗೆ ಕರ್ಫ್ಯೂ ಸಡಿಲಿಕೆ- ಮೇ.23 ರಿಂದ ಪೂರ್ಣ ಕರ್ಫ್ಯೂ ಜಾರಿ

ರಿಯಾದ್: ಸೌದಿ ಅರೇಬಿಯಾದಲ್ಲಿ ಪ್ರಸಕ್ತ ಜಾರಿಯಲ್ಲಿರುವ ಕರ್ಫ್ಯೂ ಸಡಿಲಿಕೆ, ರಮಝಾನ್ ಅಂತ್ಯದವರೆಗೂ ಮುಂದುವರಿಯಲಿದೆ. ಕಳೆದ ತಿಂಗಳು 17 ದಿನಗಳ ಕಾಲ ಘೋಷಿಸಲಾಗಿದ್ದ ಕರ್ಫ್ಯೂ ಸಡಿಲಿಕೆಯನ್ನು ಮೇ 22 ರವರೆಗೆ ಅಂದರೆ ರಮಝಾನ್ ಮುಗಿಯುವ ವರೆಗೆ ವಿಸ್ತರಿಸಲಾಗಿದೆ.

ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಲಭ್ಯವಿರುವ ವಿನಾಯ್ತಿಯನ್ನು ಮೇ 22 ರವರೆಗೆ ಮುಂದುವರಿಸಲಾಗುವುದು ಎಂದು ಗೃಹ ಸಚಿವಾಲಯ ಪ್ರಕಟಿಸಿದೆ. ಮಕ್ಕಾ ಮತ್ತು ಪ್ರಸಕ್ತ ಐಸೊಲೇಷನ್‌ ಜಾರಿಯಲ್ಲಿರುವ ಪ್ರದೇಶಗಳಲ್ಲಿ 24 ಗಂಟೆಗಳ ಕರ್ಫ್ಯೂನಲ್ಲಿ ಯಾವುದೇ ಬದಲಾವಣೆಗಳಿಲ್ಲ.

ಮೇ 23 ರಿಂದ ಮೇ 27 ರವರೆಗೆ ಪೂರ್ಣ ಸಮಯದ ಕರ್ಫ್ಯೂ ಮುಂದುವರಿಯಲಿದೆ. ಈ 24 ಗಂಟೆಗಳ ಕರ್ಫ್ಯೂ ಅನ್ನು ಮೇ.27ರ ಬಳಿಕ ವಿಸ್ತರಿಸಬೇಕೆ ಎಂಬುದರ ಬಗ್ಗೆ ಗೃಹ ಸಚಿವಾಲಯ ನಂತರ ನಿರ್ಧರಿಸಲಿದೆ.

ಇಂದು, ಜಿಝಾನ್ನ ಬೈಶ್ ಪ್ರದೇಶದಲ್ಲಿ ಅನಿರ್ದಿಷ್ಟಾವಧಿಗೆ 24 ಗಂಟೆಗಳ ಕಾಲ ಸಂಪೂರ್ಣವಾಗಿ ಐಸೊಲೇಷನ್ ಏರ್ಪಡಿಸಲಾಗಿದೆ. ಪಾಸ್ಗಳೊಂದಿಗೆ ವಿನಾಯಿತಿ ಇರುವವರನ್ನು ಹೊರತುಪಡಿಸಿ ಈ ಪ್ರದೇಶಕ್ಕೆ ಯಾವುದೇ ಪ್ರವೇಶವಿರುವುದಿಲ್ಲ. ಹತ್ತಿರದ ಅಂಗಡಿಗಳಿಂದ ಸರಕುಗಳನ್ನು ಖರೀದಿಸಲು ಜನರು ಬೆಳಗ್ಗೆ 9 ರಿಂದ ಸಂಜೆ 5 ರ ಮಧ್ಯೆ ಹೊರಡಬಹುದು. ವಾಹನದಲ್ಲಿ ಒಬ್ಬ ವ್ಯಕ್ತಿ ಮಾತ್ರ ಯಾತ್ರೆ ಕೈಗೊಳ್ಳಬಹುದು. ಜಿಲ್ಲೆಯನ್ನು ತೊರೆದರೆ ದಂಡ ವಿಧಿಸಲಾಗುತ್ತದೆ. ಅಗತ್ಯ ಸೇವೆಗಳನ್ನು ಒದಗಿಸುವ ಅಂಗಡಿಗಳು ತೆರೆದು ಕಾರ್ಯಾಚರಿಸಬಹುದು.

ಸೌದಿಯಲ್ಲಿ ಕೋವಿಡ್‌ನಿಂದ ಇಂದು 9 ಮಂದಿ ಮೃತಪಟ್ಟಿದ್ದು,ಹೊಸತಾಗಿ 1911ಮಂದಿಗೆ ಕೋವಿಡ್ ದೃಢಪ್ಪಟ್ಟಿದೆ. ಇದರೊಂದಿಗೆ ಮರಣ ಸಂಖ್ಯೆ 264ಕ್ಕೆ ಏರಿದೆ. ದೃಢಪಡಿಸಿದ ಒಟ್ಟು ಪ್ರಕರಣಗಳ ಸಂಖ್ಯೆ 42,925 ಆಗಿದೆ. ಇಂದು ರೋಗಮುಕ್ತಿ ಪಡೆದವರ ಸಂಖ್ಯೆಯಲ್ಲಿ ದಾಖಲೆ ರಚಿಸಲ್ಪಟ್ಟಿದ್ದು, ಇಂದು ಒಂದೇ ದಿನ 2,520 ಜನರು ರೋಗ ಮುಕ್ತರಾಗಿದ್ದಾರೆ. ಇದರೊಂದಿಗೆ ಒಟ್ಟು ರೋಗಮುಕ್ತರ ಸಂಖ್ಯೆ 15,257 ಕ್ಕೆ ಏರಿದೆ. ರೋಗಮುಕ್ತಿ ಪಡೆದವರ ಸಂಖ್ಯೆ ಹೆಚ್ಚಾದಂತೆ, ಇದೀಗ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 27,404 ಕ್ಕೆ ಇಳಿದಿದೆ.