janadhvani

Kannada Online News Paper

ಅತಿದೊಡ್ಡ ಆರ್ಥಿಕ ಬಿಕ್ಕಟ್ಟಿನತ್ತ ಸೌದಿ- ಭಾರೀ ಉದ್ಯೋಗ ನಷ್ಟ ಸಾಧ್ಯತೆ

ರಿಯಾದ್: ಕೋವಿಡ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅತ್ಯಂತ ನೋವುಂಟುಮಾಡುವ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿ ಬರಬಹುದೆಂದು ಸೌದಿ ಹಣಕಾಸು ಸಚಿವ ಮುಹಮ್ಮದ್ ಅಲ್-ಜದ್‌ಆನ್ ಹೇಳಿಕೆ ನೀಡಿದ್ದಾರೆ.

70 ವರ್ಷಗಳಲ್ಲಿ ಅತಿದೊಡ್ಡ ಆರ್ಥಿಕ ಬಿಕ್ಕಟ್ಟಿನತ್ತ ದೇಶ ಸಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ದೇಶವು ತನ್ನ ಯೋಜನೆಗಳನ್ನು ಸಿದ್ಧಪಡಿಸುತ್ತಿದೆ. ಸ್ಥಳೀಯರ ಉದ್ಯೋಗಗಳನ್ನು ರಕ್ಷಿಸುವ ದೃಢ ನಿರ್ಧಾರಗಳೊಂದಿಗೆ ತೀರ್ಮಾನ ಕೂಗೊಳ್ಳಬೇಕಾಗುತ್ತದೆ.

ಪ್ರಸಕ್ತ ನಡೆಯುತ್ತಿರುವ ಪ್ರಮುಖ ಯೋಜನೆಗಳ ಕಾಮಗಾರಿಗಳನ್ನು ವಿಳಂಬಗೊಳಿಸಲಾಗುತ್ತವೆ. ಪ್ರಯಾಣ ವೆಚ್ಚ ಮತ್ತು ಹೊಸ ಯೋಜನೆಗಳನ್ನು ತಾತ್ಕಾಲಿಕವಾಗಿ ಕಡಿತಗೊಳಿಸಲಾಗುತ್ತದೆ. ಪ್ರಸ್ತುತ ವಿವಿಧ ಇಲಾಖೆಗಳಿಗೆ ಮೀಸಲಿಟ್ಟಿರುವ ಹೆಚ್ಚಿನ ಹಣವನ್ನು ಆರೋಗ್ಯ ಕ್ಷೇತ್ರಕ್ಕೆ ಉಪಯೋಗಿಸಬೇಕಾದ ಪರಿಸ್ಥಿತಿ ಇದೆ ಎಂದು ಹಣಕಾಸು ಸಚಿವರು ಹೇಳಿದರು.

ಈ ಬಗ್ಗೆ ಹಣಕಾಸು ಸಚಿವಾಲಯ ಚರ್ಚಿಸಿದ ಬಳಿಕ ನಿರ್ಧರಿಸಲಿದೆ. ಯೋಜನೆಗಳನ್ನು ವಿಳಂಬಗೊಳಿಸುವುದರಿಂದ ಅನೇಕರಿಗೆ ಉದ್ಯೋಗ ನಷ್ಟವಾಗಬಹುದು ಎಂದು ಹಣಕಾಸು ಮಾಧ್ಯಮಗಳು ಸೂಚಿಸುತ್ತವೆ. ಸ್ಥಳೀಯರ ಉದ್ಯೋಗಗಳನ್ನು ರಕ್ಷಿಸಲಾಗುವುದು ಎಂದು ಸಚಿವರು ಪದೇ ಪದೇ ಪ್ರತಿಪಾದಿಸಿದ್ದಾರೆ.

ಪ್ರಸಕ್ತ ಪರಿಸ್ಥಿತಿಯನ್ನು ನಿವಾರಿಸಲು ಮೀಸಲು ಹಣವನ್ನು ಬಳಸಲಾಗುತ್ತದೆ. ಸಮಸ್ಯೆಗಳು ನಿವಾರಣೆಯಾಗಲಿದೆ ಎಂದು ಆಶಿಸುತ್ತೇವೆ ಎಂದು ಜದ್‌ಆನ್ ಹೇಳಿದರು. ಹಣಕಾಸಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ, ಇತರಕಡೆ ಇರುವಂತಹಾ ಅತಿದೊಡ್ಡ ಆರ್ಥಿಕ ಹಿಂಜರಿತ ಸೌದಿ ಅರೇಬಿಯಾದಲ್ಲೂ ಇತ್ತು. ಮುಂದಿನ ಆರು ತಿಂಗಳಲ್ಲಿ ಬಿಕ್ಕಟ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಸರಕಾರ ಅಂದಾಜಿಸಿದೆ. ಈ ಕ್ರಮವು ಪ್ರಯೋಜನಕಾರಿ ಎಂದು ಹಣಕಾಸು ಸಚಿವಾಲಯ ಅಂದಾಜಿಸಿದೆ. ಈಗಾಗಲೇ, ದೇಶದ ವಿವಿಧ ಯೋಜನೆಗಳು ಸ್ಥಗಿತಗೊಂಡಿವೆ.

error: Content is protected !! Not allowed copy content from janadhvani.com