janadhvani

Kannada Online News Paper

ಕೋವಿಡ್ ಪೀಡಿತರು ವ್ರತಾಚರಿಸಬೇಕಿಲ್ಲ -ಯುಎಇ ಫತ್ವಾ ಕೌನ್ಸಿಲ್

ದುಬೈ: ಕೋವಿಡ್ ಪೀಡಿತರು ಮತ್ತು ಆರೋಗ್ಯ ಕಾರ್ಯಕರ್ತರು ಉಪವಾಸ ಹಿಡಿಯಬೇಕಾಗಿಲ್ಲ ಎಂದು ಯುಎಇ ಫತ್ವಾ ಕೌನ್ಸಿಲ್ ಧಾರ್ಮಿಕ ಕಾನೂನು ಹೊರಡಿಸಿದೆ. ಪ್ರಸಕ್ತ ಪರಿಸ್ಥಿತಿ ಬದಲಾಗದಿದ್ದರೆ ಮಸೀದಿಗಳಲ್ಲಿನ ಈದ್ ನಮಾಝನ್ನೂ ನಿಲ್ಲಿಸಬಹುದು ಎಂದು ಫತ್ವಾದಲ್ಲಿ ನಿರ್ದೇಶನ ನೀಡಲಾಗಿದೆ. ಈ ಬಗ್ಗೆ ಐದು ಪ್ರಸ್ತಾಪಗಳನ್ನು ಫತ್ವಾ ಮೂಲಕ ಹೊರಡಿಸಲಾಗಿವೆ.

ಫತ್ವಾ ಸಲಹೆಗಳು:

  • ಕೋವಿಡ್ ಬಾಧಿತರು ಮತ್ತು ಕೋವಿಡ್ ಪೀಡಿತರನ್ನು ನೋಡಿಕೊಳ್ಳುವ ಆರೋಗ್ಯ ಕಾರ್ಯಕರ್ತರು ಉಪವಾಸ ಹಿಡಿಯುವ ಅಗತ್ಯವಿಲ್ಲ. ಕೋವಿಡ್ ಲಕ್ಷಣಗಳು ಇರುವವರ ಸ್ಥಿತಿ ಹದಗೆಡಬಹುದು ಎಂದು ವೈದ್ಯರು ಸಲಹೆ ನೀಡಿದರೆ ಅಂತಹವರು ಕೂಡ ಉಪವಾಸ ಹಿಡಿಯಬಾರದು.
  • ರಮಝಾನ್ ರಾತ್ರಿಗಳ ತರಾವೀಹ್ ನಮಾಝನ್ನು ಮಸೀದಿಗಳಲ್ಲಿ ಮಾಡಬೇಡಿ. ಮನೆಗಳಲ್ಲಿ ನಮಾಝನ್ನು ನಿರ್ವಹಿಸಬಹುದು.
  • ಪ್ರಸಕ್ತ ಪರಿಸ್ಥಿತಿ ಬದಲಾಗದ ಹೊರತು ಈದ್-ಉಲ್-ಫಿತರ್ ನಮಾಝ್ ಇರುವುದಿಲ್ಲ. ಮನೆಗಳಲ್ಲಿ ಸುಬಹಿ ನಮಾಝಿನ ನಂತರ, ಈದ್ ನಮಾಝ್ ನಿರ್ವಹಿಸಬಹುದು. ಒಂದೇ ಮನೆಯಲ್ಲಿ ವಾಸಿಸುವವರು ಒಟ್ಟಾಗಿ ನಿರ್ವಹಿಸಬಹುದು. ಆದಾಗ್ಯೂ, ಒಟ್ಟಾಗಿ ನಿರ್ವಹಿಸುವ ನಮಾಝ್ ಜೀವಕ್ಕೆ ಅಪಾಯಕಾರಿ ಯಾಗಬಾರದು. ಇಸ್ಲಾಂ ಧರ್ಮ ಇಂತಹ ಕೃತ್ಯಗಳನ್ನು ನಿಷೇಧಿಸಿದೆ.
  • ಶುಕ್ರವಾರ ಜುಮುಆ ನಮಾಝನ್ನು ಅನುಮತಿಸಲಾಗುವುದಿಲ್ಲ. ಈ ಕಾಲದಲ್ಲಿ ಮನೆಗಳಲ್ಲಿ ಲುಹರ್ ನಮಾಝ್ ನಿರ್ವಹಿಸಬೇಕು.
  • ಝಕಾತ್ ಅನ್ನು ಆದಷ್ಟು ಬೇಗ ನೀಡಬೇಕು. ಝಕಾತ್‌ಗೆ ಇದು ಅಗತ್ಯವಾದ ಪರಿಸ್ಥಿತಿ. ಝಕಾತ್ ನೀಡಲು ನಿರ್ದಿಷ್ಟ ಸಮಯವನ್ನು ಕಾಯಬೇಕಾಕಾಗಿಲ್ಲ. ಜನರು ಕಷ್ಟ ಅನುಭವಿಸುತ್ತಿರುವ ಸಂದರ್ಭಕ್ಕೆ ಅನುಗುಣವಾಗಿ ಝಕಾತ್ ನೀಡಲು ಪ್ರವಾದಿ ಸ.ಅ ಜಾಗೃತಿ ನೀಡಿದ್ದಾರೆ. ದೇಶದೊಳಗಿನವರಿಗೆ ಸಾಧ್ಯವಾದಷ್ಟು ಝಕಾತ್ ನೀಡಬೇಕು. ಎಮಿರೇಟ್ಸ್ ರೆಡ್ ಕ್ರೆಸೆಂಟ್ ಮತ್ತು ಎನ್‌ಜಿಒಗಳಂತಹ ಸರಕಾರಿ ಸಂಸ್ಥೆಗಳೊಂದಿಗೆ ಸಮಾಲೋಚಿಸುವುದು ಸೂಕ್ತ ಎಂದು ಫತ್ವಾದಲ್ಲಿ ಸೂಚಿಸಲಾಗಿದೆ.

ಕೋವಿಡ್ ತಪಾಸಣೆಯಿಂದ ವ್ರತಕ್ಕೆ ಭಂಗವಿಲ್ಲವೆಂದೂ ಫತ್ವಾ ಕೌನ್ಸಿಲ್ ತಿಳಿಸಿದೆ.

ವೈರಸ್ ಹರಡಿದ ಹಿನ್ನೆಲೆಯಲ್ಲಿ ಆನ್‌ಲೈನ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಮಝಾನ್ ತಿಂಗಳ ಪರಿಶುದ್ಧತೆಗೆ ಅಗತ್ಯವಿರುವವರಿಗೆ ಸಹಾಯ ಮಾಡುವಂತೆ ಸದಸ್ಯರು ತಿಳಿಸಿದ್ದಾರೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಯುಎಇ ಕ್ರಮಗಳು ಯಶಸ್ಸನ್ನು ಸಾಧಿಸಲಿ ಎಂದು ಪ್ರಾರ್ಥಿಸುತ್ತಿದ್ದೇವೆ ಮತ್ತು ಅಲ್ಲಾಹನು ಈ ಪಿಡುಗುಗಳಿಂದ ಜಗತ್ತನ್ನು ರಕ್ಷಿಸಲಿ ಎಂದು ಹಾರೈಸಿದರು.

error: Content is protected !! Not allowed copy content from janadhvani.com