janadhvani

Kannada Online News Paper

ಅನ್ನ ನೀಡುವ ದೇಶವನ್ನೇ ಅಪಹಾಸ್ಯ ಮಾಡಲಾಗುತ್ತಿದೆ- ದ್ವೇಷ ಟ್ವೀಟ್ ವಿರುದ್ಧ ಯುಎಇ ಬರಹಗಾರ್ತಿ ಗರಂ

ದುಬೈ: ಯುಎಇಯ ಪ್ರಮುಖ ಬರಹಗಾರ್ತಿ, ಸಾಮಾಜಿಕ ಕಾರ್ಯಕರ್ತೆ ಮತ್ತು ರಾಜಮನೆತನದ ಸದಸ್ಯೆ ಶೈಖ ಹಿಂದ್ ಬಿಂತ್ ಫೈಝಲ್ ಅಲ್-ಖಾಸಿಮಿಯವರು ಕೋಮು ದ್ವೇಷ ಹರಡುವ ಟ್ವೀಟ್ ಗಳ ವಿರುದ್ದ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಸೌರಭ್ ಉಪಾಧ್ಯಾಯ ಎನ್ನುವವರು ತಬ್ಲೀಗ್ ಸಮ್ಮೇಳನದ ಹೆಸರಿನಲ್ಲಿ ದ್ವೇಷದ ಸಂದೇಶವನ್ನು ಟ್ವೀಟ್ ಮಾಡಿದ್ದರು. ಯುಎಇಯ ಪ್ರಮುಖರು ಪ್ರತಿಕ್ರಿಯೆ ವ್ಯಕ್ತಡಿಸತೊಡಗಿದಾಗ ಆತನ ಟ್ವಿಟ್ಟರ್ ಖಾತೆಯು ಕಣ್ಮರೆಯಾಗಿದೆ.

ಜನಾಂಗೀಯ ದ್ವೇಷ ಮತ್ತು ತಾರತಮ್ಯವನ್ನು ವ್ಯಕ್ತಪಡಿಸುವವರು ಯುಎಇಯನ್ನು ತೊರೆಯಬೇಕಾಗುತ್ತದೆ ಎಂಬುದು ಶೈಖ ಹಿಂದ್ ಅಲ್-ಖಾಸಿಮಿಯ ಪ್ರತಿಕ್ರಿಯೆಯಾಗಿತ್ತು. ಉದಾಹರಣೆಯಾಗಿ, ಅವರು ಸೌರಭ್ ಉಪಾಧ್ಯಾಯ ಹೆಸರಿನಲ್ಲಿ ಮೂರು ಟ್ವೀಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಟ್ವೀಟ್ ಮಾಡಿದ್ದಾರೆ.


“ರಾಜಮನೆತನವು ಭಾರತೀಯರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ. ಆದರೆ ರಾಜಮನೆತನದ ಸದಸ್ಯೆಯಾಗಿದ್ದುಕೊಂಡು ಇಂತಹ ಅಸಭ್ಯ ವರ್ತನೆ ಸ್ವೀಕರಿಸುವುದು ಸಾಧ್ಯವಲ್ಲ”ಎಂದು ಮತ್ತೊಂದು ಟ್ವೀಟ್ ನಲ್ಲಿ, ಶೈಖ ಹಿಂದ್ ವ್ಯಕ್ತಪಡಿಸಿದ್ದಾರೆ.

“ಇಲ್ಲಿ ಕೆಲಸ ಮಾಡುವ ಎಲ್ಲರಿಗೂ ಸಂಬಳ ಸಿಗುತ್ತಿದೆ, ಯಾರೂ ಉಚಿತವಾಗಿ ಕೆಲಸ ಮಾಡುವುದಿಲ್ಲ, ನಿಮಗೆ ಆಹಾರವನ್ನು ನೀಡುವ ಈ ದೇಶವನ್ನು ನೀವು ಅಪಹಾಸ್ಯ ಮಾಡುತ್ತಿದ್ದೀರಿ, ನಿಂದನೆಯನ್ನು ನಿರ್ಲಕ್ಷಿಸಲಾಗುವುದಿಲ್ಲ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಕೋವಿಡ್ ಸನ್ನಿವೇಶದಲ್ಲಿ, ಧಾರ್ಮಿಕ ದ್ವೇಷವನ್ನು ಉತ್ತೇಜಿಸುವ ರೀತಿಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಕೆಲವರು ಯುಎಇಯಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಭಾರತೀಯರು ಸೇರಿದಂತೆ ವಲಸಿಗರನ್ನು ಅಪಹಾಸ್ಯ ಮಾಡಿದ ಸ್ಥಳೀಯ ಪತ್ರಕರ್ತನನ್ನು ಯುಎಇ ಅಧಿಕಾರಿಗಳು ಕೆಲವು ದಿನಗಳ ಹಿಂದೆ ಬಂಧಿಸಿದ್ದರು.

error: Content is protected !! Not allowed copy content from janadhvani.com