janadhvani

Kannada Online News Paper

ವಖ್ಫ್ ಸುತ್ತೋಲೆ: ಮುಸ್ಲಿಮರನ್ನು ಸರಕಾರದ ವಿರುದ್ಧ ಎತ್ತಿಕಟ್ಟುವ ಕುತಂತ್ರವೇ?- ಲೇಖನ

ಕೊರೋನಕ್ಕೆ ವಿಶ್ವವೇ ಬೆಚ್ಚಿಬಿದ್ದಿದೆ. ಅದರ ನಿರ್ಮೂಲನೆಯ ಪ್ರಯತ್ನದಲ್ಲಿ ಮಾನವ ಸಮೂಹವು ಒಂದೇ ಮನಸ್ಸಾಗಿದೆ.

ನಮ್ಮ ದೇಶದಲ್ಲಿ ಸರಕಾರದ ಕ್ರಮಗಳೊಂದಿಗೆ ಜಾತಿ, ಮತ,ಪಂಥ,ಪಕ್ಷ,ರಾಜಕೀಯ ವ್ಯತ್ಯಾಸಗಳಿಲ್ಲದೆ ಕೈ ಜೋಡಿಸಿ ಹೋರಾಟ ನಡೆಸಲಾಗುತ್ತಿದೆ. ಅದರಲ್ಲೂ ನಮ್ಮ ರಾಜ್ಯದಲ್ಲಿ ಈ ವಿಷಯದಲ್ಲಿರು ಒಗ್ಗಟ್ಟು ಮೆಚ್ಚಲೇ ಬೇಕಾದದ್ದಾಗಿದೆ.

ಎಲ್ಲಾ ಜಾತಿ ಧರ್ಮದವರು ಸಂಪೂರ್ಣವಾಗಿ ಸರಕಾರದೊಂದಿಗೆ ಸಹಕರಿಸುತ್ತಿವೆ.ಅದರಲ್ಲೂ ಮುಸ್ಲಿಮರ ಸಹಕಾರ ಎತ್ತಿಹೇಳಲೇ ಬೇಕಾದದ್ದಾಗಿದೆ.

ಸರಕಾರದ ಆದೇಶ ತೀರ್ಮಾನಗಳು ಬರುವ ಮೊದಲೇ ಮುಸ್ಲಿಮ್ ವಿದ್ವಾಂಸರು, ಖಾಝಿಗಳು, ಮೌಲ್ವಿಗಳು ಜನರಲ್ಲಿ ಜಾಗೃತಿ ಮೂಡಿಸಿ ಮಸ್ಜಿದ್ ಗಳಲ್ಲಿ ನಡೆಯುವ ಸಾಮೂಹಿಕ ನಮಾಝ್, ಶುಕಾರವಾರದ ಪವಿತ್ರವಾದ ಸಾಮೂಹಿಕ ನಮಾಜ್ ಗಳೆಲ್ಲವನ್ನೂ ಹಾಗೂ ಜನಸೇರುವ ಇತರ ಎಲ್ಲಾ ಧಾರ್ಮಿಕ ಸಭೆ ಸಮಾರಂಭಗಳನ್ನು ಸಂಪೂರ್ಣವಾಗಿ ನಿಲ್ಲಿಸಿ ಆದೇಶ ಮಾಡಿರುತ್ತಾರೆ. ಸರಕಾರದ ಮುಂದಿನ ಲಾಕ್ ಡೌನ್ ಆದೇಶ ಹೇಗಿರುತ್ತದೋ ಅದೇ ರೀತಿ ರಂಝಾನಿನಲ್ಲೂ ಮುಂದುವರಿಯುತ್ತದೆ. ಅದರಲ್ಲಿ ಯಾವುದೇ ಅಪಸ್ವರಗಳಿಲ್ಲ.

ಹೀಗಿರುವಾಗ ಇದರ ಮದ್ಯೆ ವಕ್ಫ್ ಬೋರ್ಡಿನ ಹೆಸರಿನಲ್ಲಿ ಒಂದು ಅನಗತ್ಯ ಸತ್ತೋಲೆಯ ಅಗತ್ಯವಾದರೂ ಏನಿತ್ತು?. ಅಲ್ಲದೆ ಪ್ರಸ್ತುತ ಸುತ್ತೋಲೆಯಲ್ಲಿರುವ ಅನೇಕ ವಿಷಯಗಳು ಕೋವಿಡ್ ನಿಯಂತ್ರಣಕ್ಕೆ ಯಾವುದೇ ಸಂಬಂಧವಿಲ್ಲದ್ದಾಗಿರುತ್ತದೆ.ಇದೊಂದು ಅಧಿಕಪ್ರಸಂಗದ ಸುತ್ತೋಲೆಯಂತೆ ಕಂಡು ಬರುತ್ತಿದೆ. ಅಲ್ಲದೆ ಬಿಜೆಪಿ ಸರ್ಕಾರದ ವಿರುದ್ಧ ಮುಸ್ಲಿಮರನ್ನು ಎತ್ತಿ ಕಟ್ಟುವ ಕುತಂತ್ರವೋ ಎಂಬ ಅನುಮಾನವೂ ಬರುತ್ತಿದೆ.

ಯಾಕೆಂದರೆ ಲಾಕ್ ಡೌನ್ ನ ಈ ಸಮಯದಲ್ಲಿ ಕಷ್ಪ ಅನುಭವಿಸುತ್ತಿರುವ ರಾಜ್ಯದ ಜನತೆಗೆ ಮಾಡಬೇಕಾದ ಹಲವು ಕೆಲಸಗಳು ಇರುವಾಗ ಅದೆಲ್ಲವನ್ನೂ ಬಿಟ್ಟು ಇಂತಹ ಒಂದು ಅನಗತ್ಯ ಕಾರ್ಯಕ್ಕೆ ಇಳಿದಿರುವುದು ಸಂದೇಹಾಸ್ಪದವಾಗಿರುತ್ತದೆ. ಆದ್ದರಿಂದ ಇದನ್ನು ರಾಜ್ಯ ಸರಕಾರ ಅದರಲ್ಲೂ ಸನ್ಮಾನ್ಯ ಮುಖ್ಯಮಂತ್ರಿ ಗಳು ಬಹಳ ಗಂಭೀರವಾಗಿ ಪರಿಗಣಿಸಬೇಕಾಗಿದೆ.

ನಿಜಕ್ಕೂ ಇದು ಸರಕಾರ ನಿರ್ದೇಶಿತ ತೀರ್ಮಾನವೇ?.ವಕ್ಫ್ ಬೋರ್ಡ್ ಒಮ್ಮತದ ತೀರ್ಮಾನವೇ?. ಅಲ್ಲ, ಅಧ್ಯಕ್ಷರ ಸ್ವಯಂ ತೀರ್ಮಾನವೇ?. ಹಾಗೆ ಅಧ್ಯಕ್ಷರಿಗೆ ಇಂತಹ ತೀರ್ಮಾನ ಕೈಗೊಳ್ಳುವ ಅಧಿಕಾರವಿದೆಯೇ? ಎಂಬಿತ್ಯಾದಿ ಗೊಂದಲಗಳನ್ನು ನಿವಾರಿಸಬೇಕು.

ಏಕೆಂದರೆ ಅಧ್ಯಕ್ಷರು ಮಾಧ್ಯಮಗಳಿಗೆ ನೀಡಿರುವ ಇತ್ತೀಚಿನ ಕೆಲವು ಹೇಳಿಕೆಗಳಲ್ಲಿ ತಬ್ಲೀಗಿ ಜಮಾತನ್ನು ವೈಭವೀಕರಿಸುವ ಪ್ರಯತ್ನ ಕಂಡು ಬಂದಿದೆ. ಅದು ಮುಸ್ಲಿಂ ಸಮುದಾಯದ ಪ್ರಾತಿನಿಧಿಕ ಸಂಸ್ಥೆ ಎಂಬಂತೆ ಬಿಂಬಿಸಲು ಪ್ರಯತ್ನಿಸಿದ್ದಾರೆ. ವಾಸ್ತವದಲ್ಲಿ ತಬ್ಲೀಗಿ ಜಮಾತ್ ಮುಸ್ಲಿಂ ಸಮುದಾಯದ ಬಹುಸಂಖ್ಯಾತ ಜನರ ವಿರೋಧ ಹೊಂದಿರುವ ನೂತನ ಪಂಥವಾಗಿದೆ.

ಸೂಫಿ ಪರಂಪರೆ ಸೇರಿದಂತೆ ಇಸ್ಲಾಮಿನ ಪರಂಪರಾಗತ ಆಚಾರ ವಿಚಾರಗಳೊಂದಿಗೆ ಭಿನ್ನಮತ ಹೊಂದಿರುವ ಈ ಪಂಥದ ಕಾರ್ಯ ಚಟುವಟಿಕೆಗಳಿಗೆ ಬಹುತೇಕ ಮಸೀದಿಗಳಲ್ಲಿ ಇಂದಿಗೂ ನಿಷೇಧವಿದೆ. ಅವರೊಂದಿಗಿನ ಸಂಬಂಧಪಟ್ಟವರ ನ್ಯಾಯಯುತವಲ್ಲದ ವರ್ತನೆಯನ್ನು ಖಂಡಿಸುವಾಗಲೂ, ತಬ್ಲೀಗಿ ವಿಚಾರಧಾರೆಯೊಂದಿಗೆ ಸಮುದಾಯ ಹೊಂದಿರುವ ವಿರೋಧವು ಮುಂದುವರಿದೇ ಇದೆ. ಹೀಗಿರುವಾಗ ಸರ್ಕಾರಕ್ಕೆ ಸಂಬಂಧಿಸಿದ ಕುರ್ಚಿಯಲ್ಲಿ ಕುಳಿತು ತನ್ನ ತಬ್ಲೀಗ್ ಪ್ರೇಮವನ್ನು ಪ್ರದರ್ಶಿಸಲು ವಕ್ಫ್ ಅಧ್ಯಕ್ಷರು ಮುಂದಾಗಿರುವುದು ಖಂಡನೀಯ.

✍ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ

error: Content is protected !! Not allowed copy content from janadhvani.com