ಸುಳ್ಯ: ಕೊರೋನಾ ಭೀತಿಯಿಂದ ಲಾಕ್ ಡೌನಿನ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ನಡೆದುಕೊಂಡೇ ಬಂದು ಗೂನಡ್ಕ ತಲುಪಿದ್ದ ಅನಾರೋಗ್ಯಪೀಡಿತ ವ್ಯಕ್ತಿಯೋರ್ವರನ್ನು ಎಸ್.ಎಸ್.ಎಫ್ ಹಾಗೂ ಎಸ್.ವೈ.ಎಸ್ ಸುಳ್ಯ ಡಿವಿಷನ್ ತುರ್ತುಸೇವಾ ಸದಸ್ಯರು ಮನೆಗೆ ತಲುಪಿಸಿದ್ದಾರೆ.
ಗೂನಡ್ಕ ಬಸ್ ನಿಲ್ದಾಣದಲ್ಲಿ ಅಸಹಾಯಕನಾಗಿ ವ್ಯಕ್ತಿಯೋರ್ವರು ಕುಳಿತಿರುವುದನ್ನು ಗಮನಿಸಿದ ಕರ್ನಾಟಕ ಮುಸ್ಲಿಂ ಜಮಾಅತ್ ಸುಳ್ಯ ತಾಲೂಕು ಅಧ್ಯಕ್ಷರಾದ ಮುಹಮ್ಮದ್ ಕುಂಞಿ ಗೂನಡ್ಕ ಹಾಗೂ ಗೂನಡ್ಕ ಗ್ರಾಮ ಪಂಚಾಯತ್ ಸದಸ್ಯರಾದ ಅಬೂಸಾಲಿರವರು ವಿಚಾರಿಸಿದಾಗ ಮಂಗಳೂರಿನಿಂದ ನಡೆದುಕೊಂಡೇ ಬಂದ ವಿಚಾರ ಬೆಳಕಿಗೆ ಬಂದಿದೆ.
ತಕ್ಷಣ ಎಚ್ಚೆತ್ತುಕೊಂಡ ಅವರು ಎಸ್.ಎಸ್.ಎಫ್ ಹಾಗೂ ಎಸ್.ವೈ.ಎಸ್ ತುರ್ತುಸೇವಾ ತಂಡದ ಸದಸ್ಯರಾದ ಸಿದ್ದೀಖ್ ಹಾಗೂ ಹಾರಿಸ್ ಗೂನಡ್ಕರವರಿಗೆ ಮಾಹಿತಿ ನೀಡಿ ಆ ವ್ಯಕ್ತಿಯನ್ನು ಮನೆಗೆ ತಲುಪಿಸಿದ್ದಾರೆ. ಮನೆಯ ಬಗ್ಗೆ ಸಂಪೂರ್ಣ ಮಾಹಿತಿಯ ಕೊರತೆಯಿದ್ದರೂ ಹರಸಾಹಸಪಟ್ಟು ಈ ಲಾಕ್ ಡೌನಿನ ಮಧ್ಯೆಯೂ ಪೋಲೀಸರ ಅನುಮತಿ ಪಡೆದು ತಲುಪಿಸಲು ತುರ್ತು ಸೇವಾ ತಂಡದವರು ಯಶಸ್ವಿಯಾಗಿದ್ದಾರೆ.
ಮನೆಗೆ ತಲುಪಿದಾಗ ಇಪ್ಪತ್ತು ವರ್ಷ ಮೊದಲು ಮನೆಬಿಟ್ಟಿದ್ದ ಮಗನನ್ನು ಕಂಡು ಆ ವ್ಯಕ್ತಿಯ ಹೆತ್ತವರು ಮತ್ತು ಮನೆಯವರು ಸಂತೋಷಾಧಿಕ್ಯದಿಂದ ಎಸ್.ಎಸ್.ಎಫ್ ಹಾಗೂ ಎಸ್.ವೈ.ಎಸ್ ನ ತುರ್ತು ಸೇವಾತಂಡದ ಸದಸ್ಯರಿಗೆ ಮನದಾಳದಿಂದ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೈನ್ ಗೇಟ್ ನಲ್ಲಿ ವಾಸವಿರುವ ತಮ್ಮಯ್ಯ ಹಾಗೂ ಶಿವಮ್ಮ ದಂಪತಿಯ ಏಕಮಾತ್ರ ಪುತ್ರ ಕೇಶವ ಎಂಬ ಹೆಸರಿನ ಈ ವ್ಯಕ್ತಿ ಕಳೆದ ಇಪ್ಪತ್ತು ವರ್ಷ ಮೊದಲು ಮನೆಬಿಟ್ಟು ತೆರಳಿದ್ದರು. ಈ ಕಾರ್ಯಾಚರಣೆಗೆ ಸುಳ್ಯ ನಗರ ಪಂಚಾಯತ್ ಸದಸ್ಯರಾದ ಉಮರ್ ಕೆ.ಎಸ್ ಹಾಗೂ ಸವಾದ್ ಗೂನಡ್ಕರವರು ಸಂಪೂರ್ಣ ಸಹಕಾರವನ್ನು ನೀಡಿದರು.