janadhvani

Kannada Online News Paper

ಉಡುಪಿಯ ಅನಿವಾಸಿ ಭಾರತೀಯ ಉದ್ಯಮ ದೊರೆ ಬಿ.ಆರ್ ಶೆಟ್ಟಿ ಸಾಮ್ರಾಜ್ಯ ಮಕಾಡೆ ಮಲಗಿಬಿಟ್ಟಿತಾ? ಕೋಟಿ ಕೋಟಿ ಮೊತ್ತದ ವಾಣಿಜ್ಯ ಶೋಗಳ ಮೂಲಕ ಪ್ರವರ್ಧಮಾನಕ್ಕೆ ಬಂದ ಇವರಿಂದ ಇದ್ದಕ್ಕಿದ್ದಂತೆ ದಿವಾಳಿ ಸಂಕೇತಗಳೇಕೆ ಹೊರ ಬರಲಾರಂಭಿಸಿದೆ? ಜಗತ್ತಿನ ಕಣ್ಣುಕುಕ್ಕುವಂತೆ ತಾನೆ ಕಟ್ಟಿಬೆಳೆಸಿದ್ದ ದೈತ್ಯ ಎನ್‍ಎಂಸಿ ಕಂಪನಿಯಿಂದ ತೊಲಗಬೇಕಾಗಿ ಬಂದಿದ್ದಾದರೂ ಯಾಕೆ? ಅಬುದಾಬಿಯನ್ನು ತನ್ನ ವಾಣಿಜ್ಯ ವ್ಯವಹಾರದ ಹೆಡ್‍ಕ್ವಾರ್ಟರ್ಸ್ ಮಾಡಿಕೊಂಡಿದ್ದರೂ ಬೃಹತ್ ದಂಧೆಗಳನ್ನು ಭಾರತದಲ್ಲಿ ಅದರಲ್ಲೂ ಹುಟ್ಟೂರು ಉಡುಪಿ ಮತ್ತದರ ಆಚೀಚೆಯ ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಸ್ಥಾಪಿಸುತ್ತಿರುವ ಬಿ.ಆರ್.ಶೆಟ್ಟೆ ಭೋಂಗು ಭೂಪನಾ? ಇಂಥ ಚರ್ಚೆಗಳೀಗ ಕರಾವಳಿಯ ಪಟ್ಟಾಂಗ ಕಟ್ಟೆಯಲ್ಲಿ ಜೋರಾಗುತ್ತಿದೆ….

ಎಂಬತ್ತರ ಇಳಿವಯಸ್ಸಿನಲ್ಲೂ ನವತರುಣನಂತೆ ಮಿಂಚುವ ಗೆಟಪ್ಪಿನಲ್ಲಿ ಬಿ.ಆರ್.ಶೆಟ್ಟಿ ಆರೋಗ್ಯ ಹಾಗೂ ವಿದೇಶಿ ಹಣ ವರ್ಗಾವಣೆಯ ದೈತ್ಯ ಕಂಪನಿಗಳ ಒಡೆಯ. ದುರ್ಬಲರಿಗೆ ಕೈಗೆಟಕುವ ಆರೋಗ್ಯ ಸೇವೆಯೇ ತನ್ನ ದಂಧೆಯ ಧ್ಯೇಯವೆನ್ನುವ ಇವರು ಕರಾವಳಿಯಲ್ಲಿ ದಾನ ದೇಣಿಗೆ ಆಸ್ಪತ್ರೆ ನಡೆಸುವಿಕೆಯಿಂದ ಒಂಥರಾ ಕುಬೇರನ ಇಮೇಜು ಬೆಳೆಸಿಕೊಂಡಿದ್ದರು. ಆದರೆ ಇತ್ತೀಚಿನ ವರ್ಷದಲ್ಲಿ ಅವರ ಭರವಸೆ ಆಶ್ವಾಸನೆ ಉದ್ಯಮ ಸ್ಥಾಪನೆಯ ಹೇಳಿಕೆಗಳೆಲ್ಲಾ ಅದ್ಯಾಕೋ ಬೌನ್ಸ್ ಆಗತೊಡಗಿವೆ. ಸ್ವಜಾತಿ ಬಂಟರ ಸಂಘಗಳಿಗೆ ಕೊಟ್ಟ ಮಾತೇ ಉಳಿಸಿಕೊಳ್ಳಲಾಗುತ್ತಿಲ್ಲ! ಶೆಟ್ಟಿ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿರುವ ಈ ಸಂದಿಗ್ಧ ಕಾಲದಲ್ಲೇ ದೊಡ್ಡ ಸಂಕಷ್ಟಕ್ಕೆ ಬಿದ್ದಿದ್ದಾರೆ. ಬಿಆರ್ ಶೆಟ್ಟಿಯ ವ್ಯವಹಾರಗಳು ನಂಬಿಕೆಗೆ ಅರ್ಹವಲ್ಲವೆಂದು ಅಮೆರಿಕ ಮೂಲದ ಸಂಶೋಧನಾ ಸಂಸ್ಥೆ “ಮುಡ್ಡಿ ವಾಟರ್ಸ್” ವರದಿ ಕೊಟ್ಟಿದೆ.

ಈ ತನಿಖಾ ವರದಿ ಹೊರಬರುತ್ತಿದ್ದಂತೆಯೇ ಶೆಟ್ಟಿಯ ಉದ್ಯಮಗಳ ಕೇಂದ್ರ ಅಬುದಾಬಿಯ ವಾಣಿಜ್ಯ ವಲಯದಲ್ಲಿ ಅಲ್ಲೋಲಕಲ್ಲೋಲವಾಗಿದೆ. ಅದರ ಅಡ್ಡ ಪರಿಣಾಮ ಇಂಡಿಯಾದಲ್ಲಿ ಎಲ್ಲೆಲ್ಲಿ ಶೆಟ್ಟಿ ದಂಧೆ ನಡೆಸುತ್ತಿದ್ದಾರೆ ಅಥವಾ ಜನಹಿತ ಬಿಸಿನೆಸ್ ಶುರು ಮಾಡುವುದಾಗಿ ಹೇಳಿದ್ದಾರೋ ಅಲ್ಲೆಲ್ಲಾ ಒಂದರ ಹಿಂದೊಂದರಂತೆ ಆಗುವ ಸೂಚನೆ ಗೋಚರಿಸಲಾರಂಭಿಸಿದೆ. ಎಪ್ಪತ್ತರ ದಶಕದಲ್ಲಿ ಹೊಟ್ಟೆಪಾಡಿನ ಚಾಕರಿಗಾಗಿ ದುಬೈ ಸೇರಿಕೊಂಡಿದ್ದ ಶೆಟ್ಟಿ ಅಲ್ಲಿಯ ವೈದ್ಯಕೀಯ ವಾಣಿಜ್ಯ ವ್ಯವಹಾರ ನಡೆಸಿ ಸಂಪತ್ತು ಗಳಿಸುತ್ತಾರೆ. ಆ ಬಂಡವಾಳದಿಂದ ಸ್ವಂತ ಉದ್ಯಮ ಆರಂಭಿಸುತ್ತಾರೆ. ದುಬೈನ ದುಡ್ಡಿನ ಕುಳಗಳ ಜೊತೆಗೆ ಇಟ್ಟುಕೊಂಡಿದ್ದ ಶೆಟ್ರು ಅಭಿವೃದ್ಧಿಯಾಗುತ್ತಲೇ ಹೋದರು. ದುಡ್ಡಿನ ಫಲದಲ್ಲಿ ಭಾರತದಲ್ಲಿ ಬಿರುದು-ಬಾವುಲಿಗಳು- ಪ್ರಶಸ್ತಿಗಳನ್ನು ಕೊಂಡುಕೊಂಡರು. ಮಹಾನ್ ದಾನಿ ಎನಿಸಿಕೊಂಡರು. ಆನಂತರ ಅಬುದಾಬಿಯ ಅತ್ಯುನ್ನತ ಪುರಸ್ಕಾರ, ಭಾರತದ ಪದ್ಮಪ್ರಶಸ್ತಿಗಳೂ ಹಣವಂತ ಉದ್ಯಮಪತಿಗಳು ನಿರಾಯಾಸವಾಗಿ ಒಲಿಯಿತು.

ಜಗತ್ತಿನಲ್ಲೇ ಎತ್ತರದ ಬುರ್ಜ್ ಖಲೀಫಾ ಕಟ್ಟಡದಲ್ಲಿ ಒಂದು ಅಂತಸ್ತು ಖರೀದಿಸಿರುವ ಶೆಟ್ರು ಜಗತ್ತಿನಾದ್ಯಂತ 270 ಆಸ್ಪತ್ರೆ ಸ್ಥಾಪಿಸಿದ್ದೇನೆಂದು ಹೇಳುತ್ತಿದ್ದಾರೆ. ಆದರೆ ಅಲ್ಲೆಲ್ಲ ಬಡವರಿಗೆ ಉಚಿತ ಚಿಕಿತ್ಸೆ ಸಿಕ್ಕಿರುವುದು ಅನುಮಾನವೆಂದರೆ ಸಾಹಸ ಬಲ್ಲ ಉದ್ಯಮಿಗಳು ತಮಾಷೆಯೂ ಮಾಡುತ್ತಾರೆ. ಶೆಟ್ಟರ ವ್ಯವಹಾರದಲ್ಲಿ ಹೊರಗೆಲ್ಲ ಥಳುಕು – ಒಳಗೆಲ್ಲಾ ಹುಳುಕು ಎಂಬ ಸಾಮಾನ್ಯ ಅಭಿಪ್ರಾಯವಿತ್ತು. ಅದೀಗ ನಿಜವಾಗಿದೆ. ಶೆಟ್ರ ಮಾಲಿಕತ್ವದ ಕಂಪನಿಗಳು ತಮ್ಮ ಷೇರುಗಳ ಮೌಲ್ಯ ಮುಚ್ಚಿಟ್ಟು ಆಟವಾಡುತ್ತಿವೆ. ಅವುಗಳ ಲೆಕ್ಕಾಚಾರ ಅದ್ಯಾಕೋ ತಾಳೆಯಾಗುತ್ತಿಲ್ಲ. ಇದೊಂದು ಸುಳ್ಳಿನ ಸಾಮ್ರಾಜ್ಯ ಎಂಬರ್ಥದ ಅಮೆರಿಕೆಯ ಮುಡ್ಡಿ ವಾಟರ್ಸ್ ವರದಿ ಹೊರಬರುತ್ತಲೇ ಮೋದಿ ಮಾಮನ ಸಖ್ಯದ ಉದ್ಯಮಿಯ ಕಂಪನಿಗಳು ಶೇರುಪೇಟೆಯಲ್ಲಿ ಸೊಂಟ ಮುರಕೊಂಡು ಬಿದ್ದಿವೆ. ಲಂಡನ್ ಶೇರು ಮಾರುಕಟ್ಟೆಯಲ್ಲಿ ಶೆಟ್ರ ಷೇರುಗಳ ಮೌಲ್ಯ ಪ್ರಪಾತಕ್ಕೆ ಬಿದ್ದಿದೆ!!

ಶೆಟ್ರ ಉದ್ಯಮ ಸಾಮ್ರಾಜ್ಯವೀಗ ತತ್ತರಿಸುತ್ತಿದೆ. ಡ್ಯಾಮೇಜ್ ಕಂಟ್ರೋಲ್‍ಗೆ ಆತ ತಿಪ್ಪರಲಾಗ ಹಾಕುತ್ತಿದ್ದಾರೆ. ತನ್ನ ಎಂಎನ್‍ಸಿ ಕಂಪನಿ ಅಧ್ಯಕ್ಷತೆಗೆ ಅನಿವಾರ್ಯವಾಗಿ ಶೆಟ್ರು ರಾಜೀನಾಮೆ ಕೊಡಬೇಕಾಗಿ ಬಂದಿದೆ. ಉಪಾಧ್ಯಕ್ಷ ಖಲೀಫಾ ಬುಟ್ಟಿ ಮತ್ತಿತರರು ಕಂಪನಿಯಿಂದ ಹೊರಬಿದ್ದಿದ್ದಾರೆ! ಅಲ್ಲಿಗೆ ಶೆಟ್ಟರ ದೌಲತ್ತಿನ ಅಸಲಿ ಅವತಾರವು ಅನಾವರಣ ಆಗಿಹೋಗಿದೆ!! ಬಿ.ಆರ್ ಶೆಟ್ಟಿ ಉಡುಪಿ ಸರ್ಕಾರಿ ಆಸ್ಪತ್ರೆಯ ಸುಮಾರು 150 ಕೋಟಿ ಬೆಲೆಯ ಜಾಗದ ಮೇಲೆ ಕಣ್ಣು ಹಾಕಿರುವುದು ದೊಡ್ಡ ವಿವಾದವಾಗಿದೆ. ಅಲ್ಲಿಯ ಶಾಸಕ ರಘುಪತಿ ಭಟ್ಟರಿಗೆ ಶೆಟ್ರ ಕಂಡರಾಗದು. ಹಿಂದೆ ಉಡುಪಿ ಆಳಿದ್ದ ಪ್ರಮೋದ್ ಮಧ್ವರಾಜ್ ತನ್ನ ಮಂತ್ರಿಗಿರಿ ದರ್ಬಾರಿನಲ್ಲಿ ಶೆಟ್ಟರಿಗೆ ರತ್ನಗಂಬಳಿ ಹಾಸಿದ್ದರು. ಉಡುಪಿಯ ಹಾಜೀ ಅಬ್ದುಲ್ಲಾ ಆಸ್ಪತ್ರೆ ರಾಜ್ಯಸರ್ಕಾರದಿಂದ ಶೆಟ್ಟರಿಗೆ ಬಳುವಳಿಯಾಗಿ ಕೊಡಿಸಿದ್ದರು.

ಸದ್ರಿ ಸರ್ಕಾರಿ ಆಸ್ಪತ್ರೆ ನವೀಕರಿಸಿ ಬಡವರಿಗೆ ಉಚಿತ ಸೇವೆ ಕೊಡುತ್ತೇನೆಂದು ಶೆಟ್ಟಿ ಹೇಳಿದರು. ಆದರೆ ಈ ಪುಣ್ಯಾತ್ಮ ಜಾಗ ದಾನ ಕೊಟ್ಟು ಆಸ್ಪತ್ರೆ ಸ್ಥಾಪನೆಗೆ ಕಾರಣರಾಗಿದ್ದ ಅಬ್ದುಲ್ಲಾರ ಹೆಸರು ತೆಗೆದು ತನ್ನ ಹೆತ್ತ ಕೂಸಮ್ಮ-ಶಂಭು ಶೆಟ್ಟಿ ಹೆಸರಿಡಲು ಹವಣಿಸಿದ್ದ. ಜನವಿರೋಧಿ ಎದುರಾದಾಗ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ಆಸ್ಪತ್ರೆ ಎಂದು ಹೆಸರಿಡಬೇಕಾಗಿ ಬಂತು. ಈ ಮಹಾನ್ ಉದ್ಯಮಿ ಜನಸೇವೆಯ ಪೋಸು ಕೊಡುತ್ತಲೇ ಉಲ್ಟಾ ಹೊಡೆದದ್ದೇ ಹೆಚ್ಚು. ದೇಶಪಾಂಡೆ ಪ್ರವಾಸೋದ್ಯಮ ಮಂತ್ರಿಯಾಗಿದ್ದಾಗ ಜಗತ್ಪ್ರಸಿದ್ಧ ಜೋಗ ಜಲಪಾತದ ನಿರ್ವಹಣೆ ಮಾಡುವೆನಾಗಿ ಹೇಳಿದ್ದರು ಶೆಟ್ರು. 400 ಕೋಟಿ ರೂ ಪ್ರಾಜೆಕ್ಟ್ ಘೋಷಿಸಿ ಬೇಸಿಗೆಯಲ್ಲೂ ಜೋಗದ ಜಲಪಾತ ಧುಮ್ಮಿಕ್ಕುವಂತೆ ಮಾಡುವ ಕಾರ್ಯಸಾಧುವಲ್ಲದ ಮಾತನಾಡಿದ್ದರು.

ಕಾಶ್ಮೀರದಲ್ಲಿ ನೂರು ಎಕರೆ ಜಾಗ ಖರೀದಿಸಿ ಭರ್ಜರಿ ಫಿಲಂ ಸಿಟಿ ಮಾಡಿದ್ದರು. 1000 ಕೋಟಿ ಮಹಾಭಾರತ ಸಿನಿಮಾ ನಿರ್ಮಿಸುವೆನೆಂದು ಜಂಬ ಕೊಚ್ಚಿಕೊಂಡಿದ್ದರು. ಕುಮಟಾದಲ್ಲಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಕಟ್ಟುವೆನೆಂದು ಪ್ರಚಾರ ಪಡೆದಿದ್ದರು. ಕರಾವಳಿಯ ಬಂಟರ ಸಂಘಗಳು ಇನ್ನಿತರ ಜನಪರ ಯೋಜನೆಗಳಿಗೆ ಎಲ್ಲ ಫೈನಾನ್ಸ್ ಮಾಡುವೆನೆಂದು ಮಾತು ಕೊಟ್ಟು ಶೆಟ್ರು ಕಾಣೆಯಾಗಿದ್ದೇ ಹೆಚ್ಚು. ಒಂದರ ಮಾತೃಸಂಘದ ಕಾಂಪ್ಲೆಕ್ಸ್ ಹಾಲ್ ಕಟ್ಟುವುದಕ್ಕೆ ನೆರವು ಕೊಡುವೆನೆಂದು ಶೆಟ್ರು ಹೇಳಿದ್ದು ಬರೀ ಬಾಯಿಮಾತಿನ ಉಪಚಾರಷ್ಟೇ ಆಗಿತ್ತು. ವರ್ಣ ಪ್ರತಿಷ್ಠೆ ಪ್ರಚಾರದ ಬೆವರಿನಲ್ಲಿ ಶೆಟ್ರು ಎಡವಿದರಾ?..

ಕೃಪೆ: naanugiuri.com

error: Content is protected !!
%d bloggers like this: