ರಿಯಾದ್ ,ಏ.6: ಸೌದಿ ಅರೇಬಿಯಾದಲ್ಲಿ ಹೊಸತಾಗಿ 82 ಮಂದಿಗೆ ಕೊರೋನಾ ದೃಢೀಕರಿಸಲಾಗಿದೆ. ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 2605 ಕ್ಕೆ ಏರಿದೆ. 2016 ಮಂದಿ ಚಿಕಿತ್ಸೆ ಪಡುಯುತ್ತಿದ್ದು, 38 ಮಂದಿ ಮರಣ ಹೊಂದಿದ್ದಾರೆ. 551 ಮಂದಿ ಗುಣಮುಖರಾಗಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ 41 ಮಂದಿ ತೀವ್ರ ನಿಗಾ ಘಟಕದಲ್ಲಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಕೊರೋನಾ ಹರಡುವಿಕೆ ತೀವ್ರಗೊಂಡ ಹಿನ್ನಲೆಯಲ್ಲಿ ಇನ್ನಷ್ಟು ನಗರ ಮತ್ತು ಪ್ರದೇಶಗಳಲ್ಲಿ 24 ಗಂಟೆಗಳ ಕರ್ಫ್ಯೂ ಜಾರಿಗೊಳಿಸಲಾಗಿದೆ. ರಿಯಾದ್, ದಮ್ಮಾಮ್, ತಬೂಕ್, ದಹ್ರಾನ್ ಮತ್ತು ಹುಫುಫ್ ನಗರಗಳಲ್ಲೂ ಜಿದ್ದಾ , ತ್ವಾಇಫ್, ಖತೀಫ್ ಮತ್ತು ಅಲ್ ಖೋಬಾರ್ ಪ್ರದೇಶಗಳಲ್ಲಿ ನಿಷೇಧಾಜ್ಞೆಯನ್ನು 24 ಗಂಟೆಗಳ ಕಾಲ ವಿಸ್ತರಿಸಲಾಗಿದೆ.ಆದೇಶ ಇಂದಿನಿಂದ ಜಾರಿಗೊಂಡಿದ್ದು,ಕರ್ಫ್ಯೂ ಅನಿರ್ದಿಷ್ಟಾವಧಿ ಮುದುವರಿಯಲಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಇಲ್ಲಿನ ಜನರು ಹೊರ ಹೋಗುವುದು ಅಥವಾ ಹೊರಗಿನವರು ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ.ಆಹಾರ ಮತ್ತು ಔಷಧಿಗಾಗಿ ಬೆಳಿಗ್ಗೆ 6 ರಿಂದ ಮಧ್ಯಾಹ್ನ 3 ರವರೆಗೆ ಅವಕಾಶ ನೀಡಲಾಗುವುದು. ಅಗತ್ಯ ವಸ್ತುಗಳನ್ನು ಮಾತ್ರ ಈ ಪ್ರದೇಶದ ಅಂಗಡಿಗಳಿಂದ ಖರೀದಿಸಲು ಅನುಮತಿಸಲಾಗಿದೆ.
ಆಹಾರ ಪೂರೈಕೆ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಈ ನಿಷೇಧ ಅನ್ವಯಿಸುವುದಿಲ್ಲ. ಆಸ್ಪತ್ರೆ, ಔಷಧಾಲಯ, ಆಹಾರ ಸಾಮಗ್ರಿಗಳ ಮಳಿಗೆ , ಪೆಟ್ರೋಲ್ ಪಂಪ್‌ಗಳು, ಅನಿಲ ಸರಬರಾಜು, ಬ್ಯಾಂಕ್, ಮೈಂಟನನ್ಸ್, ಎ.ಸಿ ಟೆಕ್ನೀಷನ್, ಪ್ಲಂಬರ್,ನೀರು ಸರಬರಾಜು,ತ್ಯಾಜ್ಯ ವಿಲೇವಾರಿ ಮುಂತಾದ ಸಂಸ್ಥೆಗಳು ಮತ್ತು ಉದ್ಯೋಗಿಗಳನ್ನು ಹೊರತುಪಡಿಸಿ ಯಾವುದನ್ನೂ ತೆರೆಯುವಂತಿಲ್ಲ.
ಬೆಳಿಗ್ಗೆ 6 ರಿಂದ ಮಧ್ಯಾಹ್ನ 3 ರವರೆಗೆ ಆಸ್ಪತ್ರೆಗಳಿಗೆ ಅಥವಾ ಆಹಾರ ಖರೀದಿಗೆ ತೆರಳುವ ವಾಹನದಲ್ಲಿ ಡ್ರೈವರ್ ಮತ್ತು ಒಬ್ಬ ವ್ಯಕ್ತಿಯನ್ನು ಮಾತ್ರ ಅನುಮತಿಸಲಾಗಿದೆ.
ವಯಸ್ಕರಿಗೆ ಮಾತ್ರ ಮನೆಗಳಿಂದ ಹೊರ ಹೋಗಲು ಅವಕಾಶವಿದ್ದು’ ಸೋಂಕು ಹರಡುವ ಸಾಧ್ಯತೆಯಿರುವ ಕಾರಣ ಮಕ್ಕಳನ್ನು ಹೊರ ಬಿಡಬಾರದು. ಆಹಾರ ಮತ್ತು ಔಷಧಿ ಖರೀದಿಗೆ ಆನ್‌ಲೈನ್ ವಿತರಣಾ ಸೇವೆಯನ್ನು ಬಳಸಿಕೊಳ್ಳಬೇಕು. ಗೃಹ ಸಚಿವಾಲಯವು ಪರಿಸ್ಥಿತಿಯನ್ನು ನಿರಂತರ ಪರಿಶೀಲಿಸಿ,ನಿರ್ಧಾರಗಳನ್ನು ಬದಲಿಸಲಿದೆ. ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲೇ ಉಳಿಯಬೇಕು, ಜನಸಂದಣಿಗೆ ಅವಕಾಶವಿಲ್ಲ ಎಂದು ಸಚಿವಾಲಯ ಎಚ್ಚರಿಸಿದೆ.