janadhvani

Kannada Online News Paper

ಮಾ.31ರವರೆಗೆ ಪ್ರಾರ್ಥನಾಲಯಗಳಲ್ಲಿ ಗುಂಪು ಸೇರುವುದು ನಿಷಿದ್ಧ -ಸಿ.ಎಮ್

ಬೆಂಗಳೂರು: ರಾಜ್ಯದ ಯಾವುದೇ ದೇವಾಲಯ ಅಥವಾ ಪ್ರಾರ್ಥನಾಲಯಗಳಲ್ಲಿ ಗುಂಪು ಸೇರುವಂತಿಲ್ಲ. ಬೆಂಗಳೂರು ಕರಗ ನಡೆಸಲೂ ಅನುಮತಿ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯುವ ಕುರಿತು ಖಾಸಗಿ ಆಸ್ಪತ್ರೆ ಆಡಳಿತಾಧಿಕಾರಿಗಳು ಮತ್ತು ವೈದ್ಯರೊಂದಿಗೆ ಸೋಮವಾರ ಸಭೆ ನಡೆಸಿದ ಅವರು, ಮಾರ್ಚ್ 31ರವರೆಗೆ ಮೊನ್ನೆ ತಿಳಿಸಿದ 9 ಜಿಲ್ಲೆಗಳಲ್ಲಿ ಸೆಕ್ಷನ್ 144 ಮುಂದುವರೆಸಲಾಗುವುದು. ಅತ್ಯವಶ್ಯಕ ಸೇವೆಗಳನ್ನು ಹೊರತು ಪಡಿಸಿ ಇತರ ಎಲ್ಲ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ ಎಂದು ಘೋಷಿಸಿದರು. ಜೀವನೋಪಾಯಕ್ಕೆ ದೈನಂದಿನ ಆದಾಯದ ಮೇಲೆ ಅವಲಂಬಿತರಾಗಿರುವ ಜನರಿಗೆ ಇಂದಿರಾ ಕ್ಯಾಂಟೀನ್‌ ಮೂಲಕ ಉಚಿತ ಆಹಾರ ಒದಗಿಸಲಾಗುವುದು ಎಂದು ಹೇಳಿದರು.

ಕೋವಿಡ್ 19 ಅನ್ನು ತಡೆಗಟ್ಟಲು ಸರ್ಕಾರದೊಂದಿಗೆ ಕೈಜೋಡಿಸಿ ಕಾರ್ಯ ನಿರ್ವಹಿಸುವಂತೆ ಖಾಸಗಿ ಆಸ್ಪತ್ರೆಗಳು, ತಜ್ಞ ವೈದ್ಯರು ಹಾಗೂ ಪರಿಣತರಿಗೆ ಮನವಿ ಮಾಡಿದ್ದೇನೆ. ತಜ್ಞರು ನೀಡುತ್ತಿರುವ ಸಲಹೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಸಭೆಯಲ್ಲಿ ಮುಖ್ಯಮಂತ್ರಿ ವಿವರಿಸಿದರು. ಕೋವಿಡ್ ಸೋಂಕಿತರ ಸಂಪರ್ಕಕ್ಕೆ ಬಂದ ದೊಡ್ಡ ಸಂಖ್ಯೆಯ ಜನರನ್ನು ಕ್ವಾರಂಟೈನ್‌ನಲ್ಲಿ ಇಡುವುದೇ ದೊಡ್ಡ ಸವಾಲಾಗಿದೆ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ತಜ್ಞರು, ‘ಸಂಪೂರ್ಣ ಶಟ್ ಡೌನ್ ಮಾಡುವುದೇ ಪರಿಹಾರ’ ಎಂದು ಸಲಹೆ ನೀಡಿದರು.

‘ರಾಜ್ಯದಲ್ಲಿ ಶೀಘ್ರ ಫೀವರ್ ಕ್ಲಿನಿಕ್‌ಗಳನ್ನು ಸ್ಥಾಪಿಸಿ, ಪ್ರಾಥಮಿಕ ಪರೀಕ್ಷೆ ನಡೆಸಬೇಕು’ ಎಂದು ಸಲಹೆಯೂ ಸಭೆಯಲ್ಲಿ ವ್ಯಕ್ತವಾಯಿತು. ಈ ಸಲಹೆ ಒಪ್ಪಿಕೊಂಡ ಮುಖ್ಯಮಂತ್ರಿ, ’30 ಫಿವರ್ ಕ್ಲಿನಿಕ್ ಗಳನ್ನು ಸ್ಥಾಪಿಸಲಾಗುವುದು’ ಎಂದು ಭರವಸೆ ನೀಡಿದರು.

‘ಶೇ 50 ರಷ್ಟು ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯ ಸೇವೆ, ನೂರಕ್ಕೂ ಹೆಚ್ಚು ವೆಂಟಿಲೇಟರ್‌ಗಳು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ 1200 ಹಾಸಿಗೆಗಳ ಪ್ರತ್ಯೇಕ ಬ್ಲಾಕ್ ಗುರುತಿಸಿರುವಂತೆಯೇ ಖಾಸಗಿ ಆಸ್ಪತ್ರೆಯೊಂದನ್ನು ಗುರುತಿಸಲು ಸಹಕರಿಸುವುದಾಗಿ ಸಭೆಯಲ್ಲಿ ಪಾಲ್ಗೊಂಡಿದ್ದ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು ಮತ್ತು ವೈದ್ಯರು ಆಶ್ವಾಸನೆ ನೀಡಿದರು.

ಟೆಲಿಕನ್ಸಲ್ಟೇಶನ್‌ಗೆ ಅವಕಾಶ ನೀಡಲಾಗುವುದು. ಚಿಕಿತ್ಸೆ, ಸಲಹೆಗೆ ಹೊರಬರುವ ಅಗತ್ಯ ಇಲ್ಲ ಎಂದು ಮುಖ್ಯಮಂತ್ರಿ ಹೇಳಿದರು.

ರಾಜ್ಯದ ಎಲ್ಲ ಮಸೀದಿಗಳಲ್ಲಿ  ಜುಮಾ, ಸಾಮೂಹಿಕ ನಮಾಝ್ ಮಾರ್ಚ್ 31ರವರೆಗೆ ನಿಲ್ಲಿಸಲು ಶಿಫಾರಸು

ಕೊರೊನ ವೈರಸ್ ತಡೆಗಟ್ಟುವ ಕ್ರಮವಾಗಿ ರಾಜ್ಯದ ಎಲ್ಲ ಮಸೀದಿಗಳಲ್ಲಿ  ಮಾರ್ಚ್ 31ರವರೆಗೆ ಜುಮಾ ಸಹಿತ ಎಲ್ಲ ಸಾಮೂಹಿಕ ನಮಾಝ್ ಗಳನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ರಾಜ್ಯ ಸರಕಾರ ಮಸೀದಿಗಳಿಗೆ ಶಿಫಾರಸು ಮಾಡಿದೆ.

ಈ ಬಗ್ಗೆ ರಾಜ್ಯ ಅಲ್ಪಸಂಖ್ಯಾತ ಇಲಾಖೆ ಕಾರ್ಯದರ್ಶಿ ಎ.ಬಿ. ಇಬ್ರಾಹಿಂ ಅವರು ಪ್ರಕಟಣೆ ಹೊರಡಿಸಿದ್ದಾರೆ. ಜೊತೆಗೆ ಕೊರೊನಕ್ಕೆ ಕಡಿವಾಣ ಹಾಕಲು ಆಯಾ ಜಿಲ್ಲಾಡಳಿತ ಹಾಗು ಆರೋಗ್ಯ ಇಲಾಖೆ ಮಸೀದಿ, ಮದ್ರಸಗಳಿಗೆ  ನೀಡುವ ಯಾವುದೇ ಸೂಚನೆಗಳನ್ನು ಜಾರಿಗೆ ತರುವ ಜವಾಬ್ದಾರಿ ಆಯಾ ಜಿಲ್ಲಾ ವಕ್ಫ್ ಅಧಿಕಾರಿಗಳಿಗೆ ಇದೆ ಎಂದು ಪ್ರಕಟಣೆ ತಿಳಿಸಿದೆ.

error: Content is protected !! Not allowed copy content from janadhvani.com