janadhvani

Kannada Online News Paper

ನಾಳೆಯಿಂದ ಕರ್ನಾಟಕ ಸಂಪೂರ್ಣ ಸ್ಥಗಿತಗೊಳಿಸಲು ಸರ್ಕಾರ ಚಿಂತನೆ

ಬೆಂಗಳೂರು ,ಮಾ.23: ಕೊರೋನಾ ವೈರಸ್ ಸೋಂಕು ನಿಗ್ರಹಿಸಲು ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನ ತೆಗೆದುಕೊಂಡಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯದ 9 ಜಿಲ್ಲೆಗಳಲ್ಲಿ ಇಂದಿನಿಂದ ಬಂದ್​ ಆದೇಶ ಹೊರಡಿಸಿದೆ. ಇನ್ನು, ನಾಳೆಯಿಂದ ಸಂಪೂರ್ಣ ರಾಜ್ಯ ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ ಎನ್ನಲಾಗಿದೆ.

ಸಭೆಯಲ್ಲಿ ಕೈಗೊಳ್ಳಲಾದ ನಿರ್ಧಾರಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

  • ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲವನ್ನೂ ನಿರ್ಬಂಧಿಸಲಾಗಿದೆ.
  • ನಗರದ ಜನರು ಯಾರೂ ಹಳ್ಳಿಗಳಿಗೆ ಹೋಗಬಾರದು.
  • ಇಂದಿರಾ ಕ್ಯಾಂಟೀನ್‌ನಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ದಿನವಿಡೀ ಉಚಿತ ಆಹಾರ
  • ರಾಜ್ಯವನ್ನೇ ಲಾಕ್‌ಡೌನ್‌ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಈ ಬಗ್ಗೆ ವಿರೋಧ ಪಕ್ಷಗಳೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು.
  • ಧಾರ್ಮಿಕ ಕಾರ್ಯಕ್ರಮಗಳು ಇಂದಿನಿಂದಲೇ ನಿಷೇಧಿಸಲಾಗಿದೆ.
  • ವೈದ್ಯರು ಹಲವು ಸಲಹೆಗಳನ್ನು ನೀಡಿದ್ದಾರೆ. ಅದನ್ನು ನಾವು ಪಾಲಿಸುತ್ತೇವೆ.
  • ವಿಕ್ಟೋರಿಯಾ ಆಸ್ಪತ್ರೆಗೆ 1000 ಹಾಸಿಗಳಗನ್ನು ಪೂರೈಸಲಾಗುತ್ತದೆ.
  • ಹೋಂ ಕ್ವಾರಂಟೈನ್‌ನ ಮನೆಗಳ ಕುರಿತು ಅಧಿಸೂಚನೆ

ಆರೋಗ್ಯ, ಗೃಹ, ಕಂದಾಯ, ಅರಣ್ಯ ಸೇರಿದಂತೆ ಪ್ರಮುಖ ಇಲಾಖೆಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಉಳಿದೆಲ್ಲ ಇಲಾಖೆಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎನ್ನುವುದು ಮೂಲಗಳ ಮಾಹಿತಿ. ಇನ್ನು, ಈ ಬಾರಿ ಬೆಂಗಳೂರು ಕರಗ ನಡೆಸದಂತೆಯೂ ತೀರ್ಮಾನ ಮಾಡಲಾಗಿದೆ.

ಕೊರೋನಾ ವೈರಸ್ ಸೋಂಕಿತರು ಪತ್ತೆಯಾಗಿರುವ ಜಿಲ್ಲೆಗಳನ್ನು ಲಾಕ್ ಡೌನ್ ಮಾಡಲು ಈ ಮೊದಲು ನಿರ್ಧರಿಸಲಾಗಿತ್ತು. ಅಂತೆಯೇ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಗಳೂರು, ಮೈಸೂರು, ಬೆಳಗಾವಿ, ಕಲಬುರ್ಗಿ, ಧಾರವಾಡ, ಚಿಕ್ಕಬಳ್ಳಾಪುರ ಮತ್ತು ಕೊಡಗು ಜಿಲ್ಲೆಗಳಲ್ಲಿ ಮಾರ್ಚ್ 31ರವರೆಗೆ ಬಂದ್ ಮಾಡಲು ಆದೇಶಿಸಲಾಗಿದೆ.

ಭಾರತದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ಭಾರತದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 8ಕ್ಕೆ ಏರಿದೆ. ಈ ಮೂಲಕ ಮುಂಬೈವೊಂದರಲ್ಲೇ ಮೂರು ವ್ಯಕ್ತಿಗಳು ಕೊರೋನಾಗೆ ಬಲಿಯಾದಂತಾಗಿದೆ. ಕರ್ನಾಟಕದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 27 ಹಾಗೂ ಭಾರತದಾದ್ಯಂತ ಪ್ರಕರಣಗಳ ಸಂಖ್ಯೆ 415 ದಾಟಿದೆ.

error: Content is protected !! Not allowed copy content from janadhvani.com