janadhvani

Kannada Online News Paper

ಎ.ಪಿ.ಉಸ್ತಾದರಿಂದ ಪ್ರಧಾನಿ,ಗೃಹ ಮಂತ್ರಿ ಭೇಟಿ-NRC,NPR,ದೆಹಲಿ ಹಿಂಸಾಚಾರ ಬಗ್ಗೆ ಚರ್ಚೆ

ಅಧಿಕೃತ ದಾಖಲೆಗಳಾದ ಶಾಲಾ ಪ್ರಮಾಣಪತ್ರ, ಪಾಸ್‌ಪೋರ್ಟ್, ಆಧಾರ್, ಚುನಾವಣಾ ಕಾರ್ಡ್ ಮತ್ತು ಪಡಿತರ ಚೀಟಿಗಳನ್ನು ಪ್ರಸ್ತುತಪಡಿಸುವವರನ್ನು ನಾಗರಿಕರನ್ನಾಗಿ ಪರಿಗಣಿಸಬೇಕು.

ದೆಹಲಿಯಲ್ಲಿನ ಕೋಮು ಹಿಂಸಾಚಾರವು ದೇಶದ ಜಾತ್ಯತೀತ ಸ್ವರೂಪವನ್ನು ಗಂಭೀರವಾಗಿ ಹಾನಿಗೊಳಿಸಿದೆ ಮತ್ತು ದೇಶದಲ್ಲಿ ಇಂತಹ ಘಟನೆಗಳು ಪುನರಾವರ್ತಿಸದಂತೆ ಸರಕಾರ ಹೆಚ್ಚಿನ ಕಾಳಜಿ ವಹಿಸಬೇಕು.


ನವದೆಹಲಿ: ಭಾರತದ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಿ ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್ ವಿಷಯಗಳ ಕುರಿತು ಚರ್ಚಿಸಿದರು. ಇಬ್ಬರ ಕಚೇರಿಯಲ್ಲಿ ಚರ್ಚೆ ನಡೆದಿದ್ದು, ನಾಗರಿಕ ಹಕ್ಕು ಕಾಯ್ದೆಗೆ ಸಂಬಂಧಿಸಿದಂತೆ ಜನರ ಕಳವಳವನ್ನು ಅವರು ವ್ಯಕ್ತಪಡಿಸಿದರು.

ಪ್ರಧಾನಿ ಮತ್ತು ಗೃಹ ಸಚಿವರಿಗೆ ನೀಡಿದ ಪ್ರಸ್ತಾವದಲ್ಲಿ, ದೇಶದ ಮುಸ್ಲಿಮರಿಗೆ ಪೌರತ್ವ ವಿಷಯದ ಬಗ್ಗೆ ಆತಂಕವಿದ್ದು, ಅದನ್ನು ಪರಿಹರಿಸಲು ಸರಕಾರ ಕ್ರಮ ವಹಿಸಬೇಕು ಎಂದು ಕಾಂತಪುರಂ ಒತ್ತಾಯಿಸಿದರು. ದೆಹಲಿಯಲ್ಲಿನ ಕೋಮು ಹಿಂಸಾಚಾರವು ದೇಶದ ಜಾತ್ಯತೀತ ಸ್ವರೂಪವನ್ನು ಗಂಭೀರವಾಗಿ ಹಾನಿಗೊಳಿಸಿದೆ ಮತ್ತು ದೇಶದಲ್ಲಿ ಇಂತಹ ಘಟನೆಗಳು ಪುನರಾವರ್ತಿಸದಂತೆ ಸರಕಾರ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಕಾಂತಪುರಂ ಹೇಳಿದರು.

ಧರ್ಮ, ಜಾತಿ, ಬಣ್ಣ, ದೇಶ, ಭಾಷೆಗಳ ಭೇದವಿಲ್ಲದೆ ಸಮಾನತೆಯನ್ನು ರೂಪಿಸುವ ಸಂವಿಧಾನ ಭಾರತದ್ದಾಗಿದೆ. ಸಂವಿಧಾನದ ಈ ಮೂಲ ನಿರ್ದೇಶವನ್ನು ಕಾಪಾಡಿಕೊಳ್ಳಲು ಸರಕಾರ ಹೆಚ್ಚು ಜಾಗ್ರತೆ ವಹಿಸಬೇಕು ಮತ್ತು ಎನ್‌ಆರ್‌ಸಿ ಮತ್ತು ಎನ್‌ಪಿಆರ್ ದತ್ತಾಂಶ ಸಂಗ್ರಹವು ಜನರಲ್ಲಿ ಹೆಚ್ಚಿನ ಆತಂಕವನ್ನು ಉಂಟುಮಾಡಿದೆ. ಜನರಲ್ಲಿ ಉಂಟಾಗುವ ಭಯವು ನಮ್ಮ ದೇಶದ ಸಮಗ್ರತೆಗೆ ಧಕ್ಕೆ ಉಂಟುಮಾಡುತ್ತದೆ.

ಅಧಿಕೃತ ದಾಖಲೆಗಳಾದ ಶಾಲಾ ಪ್ರಮಾಣಪತ್ರ, ಪಾಸ್‌ಪೋರ್ಟ್, ಆಧಾರ್, ಚುನಾವಣಾ ಕಾರ್ಡ್ ಮತ್ತು ಪಡಿತರ ಚೀಟಿಗಳನ್ನು ಪ್ರಸ್ತುತಪಡಿಸುವವರನ್ನು ನಾಗರಿಕರನ್ನಾಗಿ ಪರಿಗಣಿಸಬೇಕು ಮತ್ತು ಪ್ರಸಕ್ತ ಹಾಜರುಪಡಿಸಬೇಕೆನ್ನಲಾಗುವ ದಾಖಲೆಗಳು ಸಾವಿರಾರು ನಾಗರಿಕರನ್ನು ದೇಶದಿಂದ ಹೊರಗುಳಿಯುವಂತೆ ಮಾಡಲಿದೆ ಎಂದು ಅವರು ಹೇಳಿದರು.

ಗ್ರ್ಯಾಂಡ್ ಮುಫ್ತಿಯ ಪ್ರಸ್ತಾಪಗಳನ್ನು ಪರಿಗಣಿಸುವುದಾಗಿ ಮತ್ತು ಪೌರತ್ವ ಸಮಸ್ಯೆಗೆ ಸಂಬಂಧಿಸಿ, ಲಿಖಿತವಾಗಿ ನಿಖರವಾದ ಪ್ರತಿಕ್ರಿಯೆ ನೀಡುವುದಾಗಿ ಗೃಹ ಸಚಿವ ಅಮಿತ್ ಶಾ ಹೇಳಿದರು.

ಸಮಸ್ಥ ಮುಷಾವರ ಸದಸ್ಯ ಅಡ್ವಕೇಟ್ ಹುಸೈನ್ ಸಖಾಫಿ ಚುಲ್ಲಿಕೋಡ್, ಎಸ್‌ವೈಎಸ್ ರಾಜ್ಯ ಕಾರ್ಯದರ್ಶಿ ಡಾ.ಎ.ಪಿ. ಅಬ್ದುಲ್ ಹಕೀಮ್ ಅಝ್ಹರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com