janadhvani

Kannada Online News Paper

ಕಲಬುರ್ಗಿಯಲ್ಲಿ ಕೊರೋನಾ ವೈರಸ್ ಗೆ ವೃದ್ಧರೊಬ್ಬರು ಬಲಿ-ದೇಶದಲ್ಲೇ ಮೊದಲ ಪ್ರಕರಣ

ಕಲಬುರ್ಗಿ: ‘ಸೌದಿ ಅರೇಬಿಯಾದಿಂದ ವಾಪಸಾಗಿದ್ದ ನಗರದ 76 ವರ್ಷದ ವೃದ್ಧರೊಬ್ಬರು ಮಾ.10ರಂದು ಕೋವಿಡ್‌ 19 ವೈರಸ್‌ನಿಂದಲೇ ಮೃತಪಟ್ಟಿರುವುದರಿಂದ ಅವರ ಒಡನಾಟದಲ್ಲಿದ್ದ 43 ಜನರಿಗೆ ಪ್ರತ್ಯೇಕ ಸ್ಥಳದಲ್ಲಿರಿಸಿ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಸ್ಪಷ್ಟಪಡಿಸಿದರು.

ಭಾರತದಲ್ಲೇ ಕೊರೋನಾಗೆ ಬಲಿಯಾದ ಮೊದಲ ಪ್ರಕರಣ ಇದಾಗಿದೆ. ಆದರೆ, ಇನ್ನೂ ಕೇಂದ್ರ ಸರ್ಕಾರ ಭಾರತದಲ್ಲೇ ಇದೇ ಮೊದಲ ಪ್ರಕರಣವಾ? ಎಂಬ ಬಗ್ಗೆ ಯಾವುದೇ ಖಚಿತವಾದ ಮಾಹಿತಿ ನೀಡಿಲ್ಲ.

ಮೃತ ಮಹಮ್ಮದ್ ಹುಸೇನ್ ಸಿದ್ದೀಕಿ (76) ಸೌದಿಯಿಂದ ಉಮ್ರಾ ಯಾತ್ರೆ ಮುಗಿಸಿ, ಹೈದರಾಬಾದ್ ಮೂಲಕ ಫೆಬ್ರವರಿ 29 ರಂದು ಕಲಬುರ್ಗಿಗೆ ವಾಪಸ್ಸಾಗಿದ್ದರು. ಹೈದರಾಬಾದ್ ಏರ್ಪೋರ್ಟ್ನಲ್ಲಿ ಇವರನ್ನು ಸ್ಕ್ರೀನಿಂಗ್ ಮಾಡಿಯೇ ಹೊರಗೆ ಬಿಡಲಾಗಿತ್ತು. ಬಂದ ನಂತರ ಆರೋಗ್ಯದಿಂದಲೇ ಇದ್ದ ಇವರಿಗೆ ಮಾರ್ಚ್ 6 ರಂದು ಶೀತ, ಕೆಮ್ಮು, ಜ್ವರ ಕಾಣಿಸಿಕೊಂಡಿದೆ.ಜ್ವರ ಜಾಸ್ತಿಯಾದ್ದರಿಂದ ಮಾರ್ಚ್ 09 ರಂದು ಕಲಬುರ್ಗಿಯ ಸನ್ ರೈಸ್ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದಿದ್ದರು.

ಈ ವೇಳೆ ಅವರ ಥ್ರೋಟ್ ಸ್ಯಾಂಪಲನ್ನು ಬೆಂಗಳೂರಿಗೆ ವೈದ್ಯಕೀಯ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಇಷ್ಟರೊಳಗಾಗಿಯೇ ಹೆಚ್ಚಿನ ಚಿಕಿತ್ಸೆಗಾಗಿ ಕುಟುಂಬಸ್ಥರು ಅವರನ್ನು ಹೈದರಾಬಾದ್ ಗೆ ಕರೆದೊಯ್ದು ಕೇರ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಲ್ಲಿಯೂ ಸೂಕ್ತ ಚಿಕಿತ್ಸೆ ಸಿಗದ ಹಿನ್ನೆಲೆಯಲ್ಲಿ ಕಲಬುರ್ಗಿಗೆ ವಾಪಸ್ ಕರೆತರೋ ವೇಳೆ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ.

ಇವರು ಕೊರೋನಾ ವೈರಸ್‌ನಿಂದಲೇ ನಿಧನ ಹೊಂದಿದ್ದಾರೆ ಎನ್ನಲಾಗಿತ್ತು. ಹಾಗಾಗಿಯೇ ಸೂಕ್ತ ನಿಗಾವಹಿಸುವಂತೆ ಕಲಬುರಗಿ ಜಿಲ್ಲಾ ಆರೋಗ್ಯ ಇಲಾಖೆಗೆ ರಾಜ್ಯ ಸರ್ಕಾರ ಸುತ್ತೊಲೆ ಹೊರಡಿಸಿತ್ತು. ಆದರೆ ಇನ್ನೂ ಲ್ಯಾಬ್ ರಿಪೋರ್ಟ್ ಬರಬೇಕಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಸುತ್ತೊಲೆಯಲ್ಲಿ ತಿಳಿಸಿದ್ದರು. ಅದರಂತೆಯೇ ಈಗ ಲ್ಯಾಬ್ ರಿಪೋರ್ಟ್ ಲಭ್ಯವಾಗಿದ್ದು, ಇವರು ಕೊರೋನಾ ಸೋಂಕಿಗೆ ಬಲಿಯಾದರು ಎಂದು ಅಧಿಕೃತವಾಗಿ ಮಾಹಿತಿ ನೀಡಲಾಗಿದೆ.

ಕೊರೋನಾ ವೈರಸ್ನಿಂದಲೇ ಇವರು ಮೃತಪಟ್ಟಿದ್ದಾರೆ ಎಂದು ತಿಳಿದ ಕೂಡಲೇ ಕಲಬುರ್ಗಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಅವರ ಸಂಪರ್ಕದಲ್ಲಿದ್ದ ಒಟ್ಟು 43 ಜನರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ‘ಈ 43 ಜನರ ಆರೋಗ್ಯದಲ್ಲಿ ಈ ವರೆಗೂ ವ್ಯತ್ಯಾಸವಾಗಿಲ್ಲ. ಇವರಲ್ಲಿ 9 ಜನ ಅವರ ಕುಟುಂಬ ಸದಸ್ಯರು, ನಾಲ್ಕು ಜನ ಅವರಿಗೆ ಚಿಕಿತ್ಸೆ ನೀಡಿದವರು ಹಾಗೂ ಉಳಿದವರು ಅಕ್ಕಪಕ್ಕದ ಮನೆಯವರು ಇದ್ದಾರೆ’ ಎಂದರು.

‘ಸದ್ಯಕ್ಕೆ ಕುಟುಂಬ ಸದಸ್ಯರನ್ನು ನಗರದ ಅವರ ಮನೆ ಇರುವ ಎಂ.ಎಸ್.ಕೆ. ಮಿಲ್‌ ಬಡಾವಣೆಯಲ್ಲಿಯೇ ತಪಾಸಣೆ ನಡೆಸಲಾಗಿದೆ. ಕೊರೊನಾ ಸೋಂಕು ಕಂಡು ಬಂದರೆ ತಕ್ಷಣ ಅವರನ್ನು ಸ್ಥಳಾಂತರಿಸಲು ನಗರದ ಸೇಡಂ ರಸ್ತೆಯಲ್ಲಿರುವ ಇಎಸ್‌ಐ ಆಸ್ಪತ್ರೆಯಲ್ಲಿ 400 ಹಾಸಿಗೆಗಳ ವಿಭಾಗವನ್ನು ತೆರೆಯಲಾಗಿದೆ’ ಎಂದು ಹೇಳಿದರು.

‘ನಗರದ ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್‌)ಯಲ್ಲಿಯೇ ಪ್ರಯೋಗಾಲಯ ಆರಂಭಿಸಲು ಸರ್ಕಾರಕ್ಕೆ ಮನವಿ ಮಾಡಿದ್ದೆವು. ಅಗತ್ಯ ಉಪಕರಣಗಳಿದ್ದು, ಕೇಂದ್ರ ಸರ್ಕಾರ ವೈದ್ಯಕೀಯ ಕಿಟ್‌ವೊಂದನ್ನು ನೀಡಬೇಕಾಗುತ್ತದೆ. ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಕೇಂದ್ರ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದು, ಜಿಮ್ಸ್‌ನಲ್ಲಿ ಪ್ರಯೋಗಾಲಯ ಆರಂಭಿಸಲು ಒಂದೆರಡು ದಿನಗಳಲ್ಲಿ ಒಪ್ಪಿಗೆ ದೊರೆಯಲಿದೆ’ ಎಂದು ಹೇಳಿದರು.

ಬಳ್ಳಾರಿಯ ವಿಮ್ಸ್‌, ಉಡುಪಿ ಜಿಲ್ಲೆಯ ಮಣಿಪಾಲ, ಮೈಸೂರಿನಲ್ಲಿಯೂ ಪ್ರಯೋಗಾಲಯ ಆರಂಭಕ್ಕೆ ಹಸಿರು ನಿಶಾನೆ ದೊರೆಯಲಿದೆ ಎಂದು ಶರತ್ ಹೇಳಿದರು.

error: Content is protected !! Not allowed copy content from janadhvani.com