janadhvani

Kannada Online News Paper

ಹಿಂಸಾಚಾರ: ಸೂಕ್ತ ಚಿಕಿತ್ಸೆ ಒದಗಿಸಬೇಕು- ಮಧ್ಯರಾತ್ರಿಯಲ್ಲೇ ಆದೇಶ ಹೊರಡಿಸಿದ ಹೈಕೋರ್ಟ್

ನವದೆಹಲಿ ,ಫೆ.26: ಸಿಎಎ ಪರ-ವಿರೋಧ ಚಳುವಳಿಯಿಂದ ಹಿಂಸಾಚಾರದ ಕಡೆಗೆ ತಿರುಗಿರುವ ದೆಹಲಿ ಪ್ರಕ್ಷುಬ್ಧ ಪರಿಸ್ಥಿತಿಯ ಕುರಿತು ಮಂಗಳವಾರ ಮಧ್ಯರಾತ್ರಿ ತುರ್ತು ವಿಚಾರಣೆ ನಡೆಸಿರುವ ದೆಹಲಿ ನ್ಯಾಯಾಲಯ ದೆಹಲಿ ಹಿಂಸಾಚಾರದಲ್ಲಿ ಗಾಯಗೊಂಡವರಿಗೆ ತುರ್ತು ಚಿಕಿತ್ಸೆ ನಿಡುವಂತೆ ಪೊಲೀಸರಿಗೆ ನಿರ್ದೆಶನ ನೀಡಿದೆ.

ಈಶಾನ್ಯ ದಿಲ್ಲಿಯ ಹಿಂಸಾಚಾರದಲ್ಲಿ ತೀವ್ರವಾಗಿ ಗಾಯಗೊಂಡು ಅಲ್ ಹಿಂದ್ ಆಸ್ಪತ್ರೆಯಲ್ಲಿ ಸಿಕ್ಕಿಹಾಕಿಕೊಂಡಿರುವ 22 ಮಂದಿಯನ್ನು ತುರ್ತು ಚಿಕಿತ್ಸೆಗೆ ಕರೆದೊಯ್ಯಲು ಅಗತ್ಯ ಭದ್ರತೆ ನೀಡುವಂತೆ ದೆಹಲಿ ಹೈಕೋರ್ಟ್, ಮಧ್ಯರಾತ್ರಿಯ ವಿಚಾರಣೆ ಬಳಿಕ ಆದೇಶ ನೀಡಿದೆ.

ದೆಹಲಿಯಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ಹಿಂಸಾಚಾರದಲ್ಲಿ ಗಾಯಗೊಂಡವರಿಗೆ ಸೂಕ್ತ ವೈದ್ಯಕೀಯ ಸೌಲಭ್ಯಗಳನ್ನು ನೀಡಬೇಕು, ಸುರಕ್ಷಿತವಾಗಿ ಉತ್ತಮ ಆಸ್ಪತ್ರೆಗಳಿಗೆ ಸಾಗಿಸಿ ಉತ್ತಮ ಚಿಕಿತ್ಸೆ ನಿಡಬೇಕು ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನಿನ್ನೆ ರಾತ್ರಿ ನ್ಯಾಯಮೂರ್ತಿ ಎಸ್. ಮುರಳೀಧರ್ ಅವರ ಮನೆಗೆ ತೆರಳಿ ಸಲ್ಲಿಸಲಾಗಿತ್ತು.

ಮಧ್ಯರಾತ್ರಿ ಬಳಿಕ ಬುಧವಾರ ಮುಂಜಾನೆ 12:30ಕ್ಕೆ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಮುರಳೀಧರ್ ನಿವಾಸದಲ್ಲಿ ನಡೆದ ವಿಚಾರಣೆ ಬಳಿಕ ಈ ಆದೇಶ ನೀಡಲಾಗಿದೆ. ಜಂಟಿ ಆಯುಕ್ತ ಅಲೋಕ್ ಕುಮಾರ್ ಮತ್ತು ಡಿಸಿಪಿ (ಅಪರಾಧ) ರಾಜೇಶ್ ದೇವ್, ದಿಲ್ಲಿ ಸರ್ಕಾರದ ಅಭಿಯೋಜಕ ಸಂಜಯ್ ಘೋಷ್ ಕೂಡಾ ವಿಚಾರಣೆ ವೇಳೆ ಹಾಜರಿದ್ದರು.

ನ್ಯೂ ಮುಸ್ತಫಾಬಾದ್ ಪ್ರದೇಶದ ಅಲ್ ಹಿಂದ್ ಆಸ್ಪತ್ರೆಯಲ್ಲಿ ಹಲವು ಮಂದಿ ಗಾಯಾಳುಗಳು ಸಿಕ್ಕಿಹಾಕಿಕೊಂಡಿದ್ದು, ತುರ್ತು ಹಾಗೂ ಅನಿವಾರ್ಯ ಚಿಕಿತ್ಸೆಗೆ ಅವರನ್ನು ಜಿಬಿಟಿ ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗುತ್ತಿಲ್ಲ ಎಂದು ಹಿರಿಯ ವಕೀಲ ಸುರೂರ್ ಮಂದೆರ್ ಸಲ್ಲಿಸಿದ ಅರ್ಜಿಯ ತುರ್ತು ವಿಚಾರಣೆಯನ್ನು ನ್ಯಾಯಮೂರ್ತಿಗಳು ಮಧ್ಯರಾತ್ರಿ ಆರಂಭಿಸಿದರು.

ವಿಚಾರಣೆ ವೇಳೆ ಮಂದೆರ್, ಅಲ್‌ ಹಿಂದ್ ಆಸ್ಪತ್ರೆಯ ವೈದ್ಯ ಡಾ.ಅನ್ವರ್ ಜತೆ ಸ್ಪೀಕರ್ ಫೋನ್‌ನಲ್ಲಿ ಮಾತನಾಡಲು ವ್ಯವಸ್ಥೆ ಮಾಡಿದರು. ಆಸ್ಪತ್ರೆಯಲ್ಲಿ ಇಬ್ಬರು ಗಾಯಾಳುಗಳು ಮೃತಪಟ್ಟಿದ್ದು, 22 ಮಂದಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಜೆ 4 ಗಂಟೆಯಿಂದ ಅವರನ್ನು ಬೇರೆಡೆಗೆ ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯಲು ಪೊಲೀಸರ ನೆರವು ಕೇಳಲಾಗಿದೆ. ಆದರೆ ಇದುವರೆಗೂ ನೆರವು ಸಿಕ್ಕಿಲ್ಲ ಎಂದು ವೈದ್ಯ ಸ್ಪಷ್ಟಪಡಿಸಿದರು.

ಆ್ಯಂಬುಲೆನ್ಸ್ ವಾಹನ ಸಂಚಾರಕ್ಕೂ ಗಲಭೆಕೋರರು ಅವಕಾಶ ನೀಡುತ್ತಿಲ್ಲ. ಪರಿಸ್ಥಿತಿ ಇನ್ನೂ ಬಿಗುವಿನಿಂದ ಕೂಡಿದೆ. ರೋಗಿಗಳನ್ನು ಜಿಬಿಟಿ ಆಸ್ಪತ್ರೆಗೆ ಕರೆದೊಯ್ಯಲು ಬಿಗಿ ಭದ್ರತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಅರ್ಜಿದಾರರು ಆಗ್ರಹಿಸಿದರು.

ಇದು ರೋಗಿಯ ಜೀವದ ಬಗೆಗಿನ ಕಳಕಳಿಯಾಗಿರುವುದರಿಂದ ಪೊಲೀಸರು ಎಲ್ಲ ಸಂಪನ್ಮೂಲವನ್ನು ನಿಯೋಜಿಸಿ, ಗಾಯಾಳುಗಳ ತುರ್ತು ಚಿಕಿತ್ಸೆಗೆ ಜಿಟಿಬಿ ಸಾಧ್ಯವಾಗದಿದ್ದರೆ ಎಲ್‌ಎನ್‌ಜೆಪಿ ಅಥವಾ ಮೌಲಾನಾ ಆಝಾದ್ ಇಲ್ಲವೇ ಇತರ ಸರ್ಕಾರಿ ಆಸ್ಪತ್ರೆಗಳಿಗೆ ಕರೆದೊಯ್ಯಲು ಅಗತ್ಯ ಭದ್ರತೆ ನೀಡಬೇಕು ಎಂದು ನ್ಯಾಯಮೂರ್ತಿಗಳು ಸೂಚಿಸಿದರು.

ಈ ಅರ್ಜಿಯ ತುರ್ತು ವಿಚಾರಣೆ ನಡೆಸಿರುವ ನ್ಯಾಯಮೂರ್ತಿಗಳಾದ ಎಸ್. ಮುರಳೀಧರ್ ಮತ್ತು ಅನುಪ್ ಬಂಬಾನಿ ಅವರನ್ನೊಳಗೊಂಡ ನ್ಯಾಯಪೀಠ, “ದೆಹಲಿ ಹಿಂಸಾಚಾರದಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡಲು ಬೇಕಾಗುವ ಎಲ್ಲಾ ಸಂಪನ್ಮೂಲಗಳನ್ನು ಖಚಿತಪಡಿಸಿಕೊಳ್ಳಿ” ಎಂದು ಪೊಲಿಸರಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ, ಈ ಆದೇಶವನ್ನು ದೆಹಲಿಯ ಗುರು ತೇಜ್ ಬಹದ್ದೂರ್ ಮತ್ತು ಲೋಕ ನಾಯಕ ಜೈ ಪ್ರಕಾಶ್ ನಾರಾಯಣ್ ಆಸ್ಪತ್ರೆಗಳ ವೈದ್ಯಕೀಯ ಅಧೀಕ್ಷಕರಿಗೆ ತಿಳಿಸಲಾಗುವುದು ಎಂದು ನ್ಯಾಯಪೀಠ ತಿಳಿಸಿದೆ.

ಗಾಯಗೊಂಡವರ ಬಗ್ಗೆ ಮಾಹಿತಿ ಮತ್ತು ಅವರಿಗೆ ನೀಡಲಾಗುವ ಚಿಕಿತ್ಸೆಯನ್ನೂ ಒಳಗೊಂಡಂತೆ ಅನುಸರಣಾ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸುವಂತೆಯೂ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಮುಂದಿನ ವಿಚಾರಣೆಯನ್ನು ಬುಧವಾರ ಅಂದರೆ ಇಂದು ಮಧ್ಯಾಹ್ನ 2.15 ಕ್ಕೆ ಮುಂದೂಡಲಾಗಿದೆ.

ಈಶಾನ್ಯ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟಗಾರರು ಮತ್ತು ಕೋಮುವಾದಿಗಳ ಮಧ್ಯೆ ನಡೆದ ಸಂಘರ್ಷವು ಹಿಂಸಾರೂಪಕ್ಕೆ ತಿರುಗಿದ್ದು, ಈವರೆಗೆ 18 ಜನರನ್ನು ಬಲಿ ತೆಗೆದುಕೊಂಡಿದೆ. ಪರಿಣಾಮ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

error: Content is protected !! Not allowed copy content from janadhvani.com