ಹುಬ್ಬಳ್ಳಿ: ಅಮಿತ್ ಶಾ ವಿರುದ್ಧ “ಗೋ ಬ್ಯಾಕ್” ಘೋಷಣೆ- ಹಲವರ ಬಂಧನ

ಹುಬ್ಬಳ್ಳಿ, ಜ.18: ಇಂದು ಹುಬ್ಬಳ್ಳಿಗೆ ಅಮಿತ್ ಶಾ ಆಗಮಿಸಲಿರುವ ಹಿನ್ನೆಲೆಯಲ್ಲಿ ಎನ್.ಆರ್.ಸಿ, ಸಿಎಎ ವಿರೋಧಿಸಿ ಪ್ರತಿಭಟನೆಗೆ ಮುಂದಾಗಿದ್ದ ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಪೊಲೀಸರ ಅನುಮತಿ ನಿರಾಕರಣೆಯ ನಡುವೆಯೂ ‘ಗೋ ಬ್ಯಾಕ್ ಅಮಿತ್ ಶಾ’ ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸಲು ಮುಂದಾದ ಸಂವಿಧಾನ ರಕ್ಷಣಾ ಸಮಿತಿಯ ಸದಸ್ಯರನ್ನು ಪೊಲೀಸರು ವಶಕ್ಕೆ ಪಡೆದರು.

ಸಮಾವೇಶದ ಸ್ಥಳದಲ್ಲಿ ಕಪ್ಪು ಬಲೂನ್‌ ಹಾರಾಟ
ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಅಮಿತ್ ಶಾ ಭಾಗಿಯಾಗಿದ್ದು, ಕಾರ್ಯಕ್ರಮ ನಡೆಯುತ್ತಿರುವ ಸ್ಥಳದ ಸಮೀಪವೇ ಕಪ್ಪು ಬಣ್ಣದ ಬಲೂನುಗಳನ್ನು ಹಾರಿಬಿಡಲಾಗಿದೆ. ಈ ಬಲೂನುಗಳನ್ನು ಪೌರತ್ವ ತಿದ್ದುಪಡಿ ಕಾಯಿದೆಯನ್ನು ವಿರೋಧಿಸುವವರು ಹಾರಿಬಿಟ್ಟಿದ್ದಾರೆ ಎನ್ನಲಾಗಿದೆ. ಈ ಹಿಂದೆಯೇ ಕಾಂಗ್ರೆಸ್‌ನ 3000 ಕಾರ್ಯಕರ್ತರು ರಾಣಿ ಚೆನ್ನಮ್ಮ ವೃತ್ತದ ಬಳಿ ಪ್ರತಿಭಟನೆ ನಡೆಸುವುದಾಗಿ ಮುಂದಾಗಿದ್ದರು. ಆದರೆ, ಇದಕ್ಕೆ ಅವಕಾಶ ನೀಡರಲಿಲ್ಲ.

ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರ ಬಂಧನ

ನಗರದ ಕೋರ್ಟ್ ಸರ್ಕಲ್ ಬಳಿ ನೆರೆದಿದ್ದ ಪ್ರತಿಭಟನಾಕಾರರನ್ನು ತಡೆದು ಪೊಲೀಸರು ಮೊದಲು ಪ್ರತಿಭಟನೆ ನಡೆಸದಂತೆ ಮನವಿ ಮಾಡಿದರು. ಇದನ್ನು ಲೆಕ್ಕಿಸದೇ ಪ್ರತಿಭಟನೆಗೆ ಮುಂದಾದವರನ್ನು ವಶಕ್ಕೆ ಪಡೆದು ಬಸ್ನಲ್ಲಿ ಕರೆದುಕೊಂಡು ಹೋದರು.

ಸಮಿತಿಯ ಮುಖಂಡ ಅನ್ವರ್ ಮುಧೋಳ ಮಾತನಾಡಿದ, ‘ಜನ ವಿರೋಧಿಯಾದ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯಬೇಕು. ಅಮಿತ್ ಶಾ ಹುಬ್ಬಳ್ಳಿಗೆ ಬರಬಾರದು’ ಎಂದು ಆಗ್ರಹಿಸಿದರು.

ಮಹಿಳಾ ಕಾರ್ಯಕರ್ತೆಯರ ಆಕ್ರೋಶ

ನಮ್ಮ ಪಾಡಿಗೆ ಸುಮ್ಮನೆ ನಿಂತಿದ್ದರೂ ಪೊಲೀಸರು ನಮ್ಮನ್ನು ಬಂಧಿಸಿದ್ದಾರೆ, ನಾವು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿದ್ದೆವೆಯೇ ಎನ್ನುವ ಅನುಮಾನ ಕಾಡುತ್ತಿದೆ ಎಂದು ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಿವಿಧ ಸಂಘಟನೆಗಳು ಹಾಗೂ ಕಾಂಗ್ರೆಸ್ ಪ್ರತಿಭಟನೆ ನಡೆಸಲು ತಯಾರಿ ನಡೆಸಿರುವ ಹಿನ್ನೆಲೆಯಲ್ಲಿ ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ ಹಾಗೂ ಕೋರ್ಟ್ ವೃತ್ತ ಹಾಗೂ ಕಾಮತ್ ಹೋಟೆಲ್ ಮುಂಭಾಗದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!