ಭಾರತ ಧರ್ಮಾಧಾರಿತ ಆಗಿದ್ದಿಲ್ಲ, ಈಗಲೂ ಇಲ್ಲ, ಮುಂದೆಯೂ ಆಗಲು ಬಿಡುವುದಿಲ್ಲ

ಬೆಂಗಳೂರು ,ಜ.16: ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಬೇಕೆಂಬುದು ಆರೆಸ್ಸೆಸ್ ಮತ್ತು ಬಿಜೆಪಿಯವರ ಹಿಡನ್ ಅಜೆಂಡಾ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಕೇಂದ್ರ ಜಾರಿಗೆ ತರಲು ಹೊರಟಿರುವ ಸಿಎಎ, ಎನ್ಆರ್ಸಿ, ಎನ್ಪಿಆರ್ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇವು ಸಂವಿಧಾನದ ಆಶಯಕ್ಕೇ ಧಕ್ಕೆ ತರುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ಧಾರೆ.

ಆರೆಸ್ಸೆಸ್ ಜನ್ಮತಳೆದ ಉದ್ದೇಶವೇ ಹಿಂದೂ ರಾಷ್ಟ್ರ ಮಾಡಬೇಕೆಂಬುದು. ಹೆಡಗೇವಾರ್ ಒಬ್ಬರೇ ಅಲ್ಲ, ಅವರ ನಂತರ ಗೋಳ್ವಾಲ್ಕರ್ ಅವರೆಲ್ಲರೂ ಉದ್ದಕ್ಕೂ ಇದನ್ನೇ ಹೇಳಿಕೊಂಡು ಬಂದಿದ್ಧಾರೆ… ಅಂಬೇಡ್ಕರ್ ಅವರು ಸಂವಿಧಾನವನ್ನು ಸಂಸತ್ನಲ್ಲಿ ಮಂಡಿಸಿದಾಗ ಜನಸಂಘಿಗಳು ಅದನ್ನು ವಿರೋಧ ಮಾಡಿದರು. ಆವತ್ತು ಅವರ ಹಿಡನ್ ಅಜೆಂಡಾ ಬಹಿರಂಗ ಆಗಿತ್ತು. ಅವರು ಯಾವತ್ತೂ ಸಂವಿಧಾನದ ಪರವಾಗಿ ಇರಲಿಲ್ಲ. ಮನುಸ್ಮೃತಿ ಮಾದರಿಯಲ್ಲಿ ಸಂವಿಧಾನ ಆಗಬೇಕು ಎಂದು ಹೇಳುತ್ತಿದ್ದವರು ಅವರು ಎಂದು ಸಿದ್ದರಾಮಯ್ಯ ಟೀಕಿಸಿದರು.

1950ರಲ್ಲಿ ಹುಟ್ಟಿದ ಜನಸಂಘಕ್ಕೆ ಮೊದಲ ಅಧ್ಯಕ್ಷರಾಗಿದ್ದ ಶ್ಯಾಮಪ್ರಸಾದ್ ಮುಖರ್ಜಿ ಮೂಲತಃ ಕಾಂಗ್ರೆಸ್ ಗಿರಾಕಿ. ನೆಹರೂ ಮಂತ್ರಿಮಂಡಲದಲ್ಲಿ ಮಂತ್ರಿ ಆಗಿದ್ದವರು. ಸಂವಿಧಾನ ರಚನೆ ಮಾಡುವ ಕಾನ್ಸ್ಟಿಟ್ಯುಯೆಂಟ್ ಅಸೆಂಬ್ಲಿಯಲ್ಲಿದ್ದ 289 ಸದಸ್ಯರಲ್ಲಿ ಕಮ್ಯೂನಿಸ್ಟರೂ ಇದ್ದರು, ಆರೆಸ್ಸೆಸ್ನವರೂ ಇದ್ದರು. ಇವರೆಲ್ಲಾ ಸೇರಿಯೇ ಸಂವಿಧಾನ ರಚನೆ ಮಾಡಿದ್ದು. ಸಂವಿಧಾನದ ಪ್ರೀಆ್ಯಂಬಲ್ ಕೂಡ ಇವರೇ ಸೇರಿ ಮಾಡಿದ್ದು. ಧರ್ಮ ನಿರಪೇಕ್ಷತೆಯು ಸಂವಿಧಾನದ ಪ್ರೀಆ್ಯಂಬಲ್ನಲ್ಲಿದೆ. ಈಗ ನೀವೇ ಇದನ್ನು ಉಲ್ಲಂಘಿಸುತ್ತಿರುವುದು ಸರಿಯಾ? ಇದನ್ನು ನಾವು ಒಪ್ಪಿಕೊಳ್ಳಬೇಕಾ? ಎಂದು ಹಿರಿಯ ಕಾಂಗ್ರೆಸ್ ನಾಯಕರು ಪ್ರಶ್ನಿಸಿದರು.

“…ಬಿಜೆಪಿಯವರಿಗೆ ಒಂದು ಮಾತನ್ನು ಹೇಳಬೇಕು. ಇದನ್ನು ನಾವು ಹಿಂದೂ ರಾಷ್ಟ್ರವಾಗೋಕೆ ಬಿಡಲ್ಲ ಧರ್ಮ ಆಧಾರಿತ ರಾಷ್ಟ್ರ ಭಾರತ ಹಿಂದೆ ಆಗಿದ್ದಿಲ್ಲ, ಈಗಲೂ ಇಲ್ಲ, ಮುಂದೆಯೂ ಆಗಲ್ಲ” ಎಂದು ಸಿದ್ದರಾಮಯ್ಯ ಪಣತೊಟ್ಟರು.

“ಪಾಕಿಸ್ತಾನದವರು ಧರ್ಮ ಆಧಾರಿತ ರಾಷ್ಟ್ರ ಮಾಡಿಕೊಂಡಿರಬಹುದು. ಪಕ್ಕದ ಮನೆಯವರು ವಾಲೆ ಹಾಕಿಕೊಂಡ್ರೆ ಇವರು ಕಿವಿನೇ ಕಿತ್ತುಕೊಳ್ಳೋದು ಸರಿಯಾ?” ಎಂದು ಪ್ರಶ್ನೆ ಮಾಡಿದರು.

ಹಿಂದುತ್ವವಾದಿಗಳ ಸರ್ವೇ ಜನೋ ಸುಖಿನೋ ಭವಂತು ಘೋಷವಾಕ್ಯದ ಬಗ್ಗೆ ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಲೇವಡಿ ಮಾಡಿದರು: “ಹಿಂದುತ್ವ ಅಂದರೆ ಸರ್ವೇ ಜನೋ ಸುಖಿನೋ ಭವಂತು ಅಂತ ಅವರೇ ವ್ಯಾಖ್ಯಾನ ಮಾಡಿರೋದು. ಅದನ್ನು ಅವರು ಎಲ್ಲಿ ಮಾಡಿದ್ದಾರೆ? ಅಸ್ಪೃಶ್ಯರನ್ನು ಸೃಷ್ಟಿಸಿಬಿಟ್ಟಿದ್ದಾರೆ. ಸರ್ವೇ ಜನೋ ಸುಖಿನೋ ಭವಂತು ಎಂಬುದು ಕಾಂಗ್ರೆಸ್ಗೆ ಹೊಂದುತ್ತದೆ. ಆರೆಸ್ಸೆಸ್ನವರದ್ದು ಕೇವಲ ನಾಟಕ” ಎಂದು ಟೀಕಿಸಿದರು.

ಮನುಸ್ಮೃತಿ ಜಾರಿಗೆ ತರುವುದು ಬಿಜೆಪಿಯ ಹಿಡನ್ ಅಜೆಂಡಾ ಆಗಿದೆ. ಮನುಸ್ಮೃತಿ ಎಂದರೆ ಏನು? ವರ್ಣ ವ್ಯವಸ್ಥೆ ಮುಂದುವರಿಸಬೇಕು, ಶ್ರೇಣೀಕೃತ ಸಮಾಜ ಮುಂದುವರಿಯಬೇಕು ಅನ್ನೋದು ಮನುಸ್ಮೃತಿ. ಅದರಲ್ಲಿ ಮುಸ್ಲಿಮರು ಬರುತ್ತಾರಾ? ಕ್ರೈಸ್ತರು ಬರುತ್ತಾರಾ? ಕೆಳ ಸಮುದಾಯದ ಕಾಯಕಜೀವಿಗಳು ಈ ಶ್ರೇಣೀಕೃತ ವ್ಯವಸ್ಥೆಯಲ್ಲಿ ಬರುತ್ತಾರೆ. ಅವರನ್ನು ನೀವು ಶೋಷಿಸಿಕೊಂಡು ಈಗ ನಾಟಕ ಆಡಲು ಹೊರಟಿದ್ದೀರಲ್ಲ? ಅದನ್ನು ನೋಡಿಕೊಂಡು ನಾವು ಸುಮ್ಮನಿರಬೇಕಾ? ಹಾಗಾಗಿ, ಸಿಎಎ, ಎನ್ಆರ್ಸಿ, ಎನ್ಪಿಆರ್ ಅನ್ನು ವಿರೋಧಿಸುವುದು ಪ್ರತಿಯೊಬ್ಬ ಕಾಂಗ್ರೆಸ್ಸಿಗನ ಕರ್ತವ್ಯವಾಗಿದೆ ಎಂದು ಸಿದ್ದರಾಮಯ್ಯ ಕರೆ ನೀಡಿದರು.

Leave a Reply

Your email address will not be published. Required fields are marked *

WP Twitter Auto Publish Powered By : XYZScripts.com
error: Content is protected !!