ಲಕ್ನೋ ,ಜನವರಿ.13; ವಿವಾದಾತ್ಮಕ ಸಿಎಎ ಕಾನೂನು ಸಂಸತ್ನಲ್ಲಿ ಅಂಗೀಕಾರವಾದ ನಂತರ ಇದನ್ನು ಜಾರಿಗೊಳಿಸುತ್ತಿರುವ ಮೊದಲ ರಾಜ್ಯ ವಾದ ಯುಪಿಯಲ್ಲಿ 19 ಜಿಲ್ಲೆಗಳಲ್ಲಿ ನೆಲೆಸಿರುವ ಹಿಂದೂ ನಿರಾಶ್ರಿತರ ಪಟ್ಟಿಯನ್ನು ಕೇಂದ್ರ ಸರ್ಕಾರದ ಗೃಹ ಸಚಿವಾಲಯಕ್ಕೆ ಈಗಾಗಲೇ ಕಳುಹಿಸಲಾಗಿದೆ. 40,000ಕ್ಕೂ ಹೆಚ್ಚು ಮುಸ್ಲಿಮೇತರ ವಲಸಿಗರು ಯುಪಿಯಲ್ಲಿ ನೆಲೆಸಿದ್ದಾರೆ ಎಂದು ವರದಿಗಳು ಹೇಳುತ್ತಿದ್ದು, ಈ ಪೈಕಿ ಫಿಲ್ಬಿಟ್ ಜಿಲ್ಲೆಯಲ್ಲೇ ಸುಮಾರು 30 ರಿಂದ 35 ಸಾವಿರ ಜನ ನೆಲೆಸಿದ್ದಾರೆ ಎನ್ನಲಾಗುತ್ತಿದೆ.
ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಕೇಂದ್ರಕ್ಕೆ ಕಳುಹಿಸಿರುವ ವರದಿಯಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಉತ್ತರಪ್ರದೇಶಕ್ಕೆ ಆಗಮಿಸಿ ನೆಲೆಸಿರುವ ಪ್ರತಿಯೊಬ್ಬ ನಿರಾಶ್ರಿತರ ವ್ಯಯಕ್ತಿಕ ಕಥೆಗಳನ್ನು ವಿವರವಾಗಿ ದಾಖಲಿಸಲಾಗಿದೆ ಎನ್ನಲಾಗುತ್ತಿದೆ.
ಈ ಕುರಿತು ಮಾಹಿತಿ ನೀಡಿರುವ ಉತ್ತರ ಪ್ರದೇಶ ರಾಜ್ಯ ಸಚಿವ ಶ್ರೀಕಾಂತ್ ಶರ್ಮಾ, “ನಿರಾಶ್ರಿತರ ದಾಖಲಾತಿ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇದ್ದು, ನವೀಕರಿಸುತ್ತಲೇ ಇರಲಾಗುತ್ತದೆ. ಎಲ್ಲಾ ಜಿಲ್ಲಾ ನ್ಯಾಯಾಧೀಶರೂ ಸಹ ಸಮೀಕ್ಷೆಗಳನ್ನು ನವೀಕರಿಸುವಂತೆ ಕೇಳಿಕೊಂಡಿದ್ದಾರೆ. ಅಲ್ಲದೆ, ರಾಜ್ಯ ಸರ್ಕಾರ ಈ ಪಟ್ಟಿಯನ್ನು ಕೇಂದ್ರ ಗೃಹ ಸಚಿವಾಲಯದ ಜೊತೆಗೆ ಹಂಚಿಕೊಳ್ಳುವ ಪ್ರಕ್ರಿಯೆಯಲ್ಲಿದೆ” ಎಂದು ತಿಳಿಸಿದ್ದಾರೆ
ಉತ್ತರಪ್ರದೇಶದಲ್ಲಿ 40,000 ಮುಸ್ಲಿಮೇತರ ಅಕ್ರಮ ವಲಸಿಗರು ನೆಲೆಸಿದ್ದಾರೆ ಎಂದು ವರದಿಯಾಗಿದೆ. ಆಗ್ರಾ, ರೇ ಬರೇಲಿ, ಸಹರಾನ್ಪುರ, ಗೋರಖ್ಪುರ, ಆಲಿಘರ್, ರಾಂಪುರ್, ಮುಜಾಫರ್ನಗರ, ಮಥುರಾ, ಕಾನ್ಪುರ, ವಾರಣಾಸಿ, ಅಮೇಥಿ, ಲಕ್ನೋ, ಮೀರತ್ ಹಾಗೂ ಫಿಲ್ಬಿಟ್ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ನಿರಾಶ್ರಿತರು ನೆಲೆಸಿದ್ದಾರೆ.
ಸಿಎಂ ಯೋಗಿ ಆದಿತ್ಯನಾಥ್ ಇತ್ತೀಚೆಗೆ ತಮ್ಮ ಸ್ವಕ್ಷೇತ್ರ ಗೋರಖ್ಪುರದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ‘ಸಿಎಎ’ ಕಾಯ್ದೆಯ ವಿರುದ್ಧ ಇದ್ದ ಅನುಮಾನಗಳನ್ನು ಹೋಗಲಾಡಿಸಲು ಪ್ರಯತ್ನಿಸಿದ್ದರು. ಕಿರುಕುಳಕ್ಕೊಳಗಾದ ನಿರಾಶ್ರಿತರಿಗೆ ಆಶ್ರಯ ನೀಡುವ ಭಾರತದ ಸಂಪ್ರದಾಯಕ್ಕೆ ಅನುಗುಣವಾಗಿ ಈ ಕ್ರಮ ಜರುಗಿಸಲಾಗಿದೆ ಎಂದಿದ್ದರು. ಅವರು ಹೀಗೆ ಹೇಳಿದ ಒಂದು ವಾರಕ್ಕೆ ಸಿಎಎ ಕಾನೂನನ್ನು ಉತ್ತರಪ್ರದೇಶದಲ್ಲಿ ಅನುಷ್ಠಾನಗೊಳಿಸುವ ಕೆಲಸ ನಡೆಯುತ್ತಿದೆ.
ಒಂದು ತಿಂಗಳ ಹಿಂದೆ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಉತ್ತರಪ್ರದೇಶದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆದಿತ್ತು. ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಪರಿಣಾಮ ಸುಮಾರು 19 ಜನ ಈ ಹೋರಾಟದಲ್ಲಿ ಮೃತಪಟ್ಟಿದ್ದರು.
ಆದರೆ ಎಷ್ಟು ಮಂದಿ ಮುಸ್ಲಿಮರ ಪೌರತ್ವವನ್ನು ಕಸಿದುಕೊಳ್ಳಲಾಗಿದೆ ಎಂದು ಬಹಿರಂಗ ಪಡಿಸಲು ಯುಪಿ ಸರಕಾರ ಹಿಂದೇಟು ಹಾಕಿರುವುದು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ.