ಎಲ್ಲೋ ಒಂದು ಬಾಂಬ್ ಸ್ಪೋಟವಾದೊಡನೆ, ಭಯೋತ್ಪಾದಕ ಚಟುವಟಿಕೆ ಕಂಡು ಬಂದೊಡನೆ ಅಕ್ಕಪಕ್ಕದ ನೂರಿನ್ನೂರು ಮುಸ್ಲಿಮರನ್ನು ಬಂಧಿಸಿ ಅವರನ್ನು ಭಯೋತ್ಪಾದಕ ಪಟ್ಟಿಗೆ ಸೇರಿಸಿ, ಕೇಸ್ ಕ್ಲೋಸ್ ಮಾಡುವ ತನಿಖಾ ಸಂಸ್ಥೆಗಳಿಗೆ, ಮೊನ್ನೆ ಉಗ್ರವಾದಿಗಳನ್ನು ತನ್ನ ಕಾರಿನಲ್ಲಿ ದೆಹಲಿಗೆ ಕೊಂಡೊಯ್ಯುತ್ತಿದ್ದಾಗ ರೆಡ್‍ಹ್ಯಾಂಡಾಗಿ ಸಿಕ್ಕಿಬಿದ್ದಿರುವ ದೇವಿಂದರ್ ಸಿಂಗ್ ಬಂಧನ ಒಂದು ಪಾಠವಾಗಬೇಕು.
ಭಯೋತ್ಪಾದನೆಯನ್ನು ಕೇವಲ ಮುಸ್ಲಿಮ್ ಸಮುದಾಯಕ್ಕೆ ಸೀಮಿತವಾಗಿಸಿ, ಭಯೋತ್ಪಾದನೆ ವಿರೋಧಿ ತನಿಖೆಗಳನ್ನು ಮುಸ್ಲೀಮ್ ವಿರೋಧಿ ತನಿಖೆಗಳನ್ನಾಗಿ ಮಾಡಿರುವುದರ ಫಲ ಇದು. ಭಾತರದಷ್ಟು ವಿಶಾಲವಾದ, ಭಾಷಾ ವೈವಿಧ್ಯದ ದೇಶದಲ್ಲಿ ಪಾಕಿಸ್ಥಾನದ ಉಗ್ರವಾದಿಗಳು, ಲೋಕಲ್ ಸಪೋರ್ಟ್ ಇಲ್ಲದೇ ಯಾವುದೇ ಉಗ್ರವಾದಿ ಚಟುವಟಿಕೆಯನ್ನು ಮಾಡುವುದು ಅಸಾಧ್ಯ. ಆದರೆ ಸದ್ಯಕ್ಕೆ ಈ ಲೋಕಲ್ ಸಪೋರ್ಟ್ ಕೊಡುವವರು ಕೇವಲ ಮುಸ್ಲಿಮರೆನ್ನುವುದು ನಮ್ಮ ದ್ವೇಷಭಕ್ತರ ಹಾಗೂ ತನಿಖಾ ಸಂಸ್ಥೆಗಳ ಅಂಬೋಣ.
ಕಳೆದೆರಡು ವರುಷಗಳ ಹಿಂದೆ ಮಧ್ಯಪ್ರದೇಶದಲ್ಲಿ ಪಾಕಿಸ್ಥಾನದ ಐಎಸ್‍ಐ ಪರವಾಗಿ ಭಾರತದಲ್ಲಿ ಬೇಹುಗಾರಿಕೆ ನಡೆಸುತ್ತಿದ್ದ ಹನ್ನೊಂದು ಜನರನ್ನು ಬಂಧಿಸಲಾಗಿತ್ತು. ಅವರಲ್ಲಿ ಬಿಜೆಪಿ ಕಾರ್ಪರೇಟರ್ ಒಬ್ಬರ ಸಂಬಂಧಿ, ಬಿಜೆಪಿ ಐಟಿ ಸೆಲ್‍ನ ಜಿಲ್ಲಾ ಸಂಯೋಜಕ ಕೂಡಾ ಇದ್ದರು. ಆದರೆ ಆ ಪ್ರಕರಣ ಹೆಚ್ಚೇನು ಸುದ್ದಿಯೇ ಮಾಡಲಿಲ್ಲ ಯಾಕೆಂದರೆ ಬಂಧಿಸಲ್ಪಟ್ಟವರು ಧ್ರುವ್ ಸಕ್ಸೇನಾ, ಬಲರಾಮ್ ಸಿಂಗ್, ಸತ್ವಿಂದರ್ ಸಿಂಗ್, ಮೋಹಿತ್, ಆಶಿಶ್ ಸಿಂಗ್ ರಾಥೋರ್, ರಾಜ್ ಬಹದ್ದೂರ್ ಸಿಂಗ್ ಮುಂತಾದ ಹೆಸರಿದ್ದವರೇ ಹೊರತು ಮಹಮ್ಮದ್, ಸಾದಿಕ್, ಅಹ್ಮದ್, ಫೈಜಲ್ ಅಲ್ಲ. ಆಶಿಶ್ ಸಿಂಗ್, ರಾಜ್ ಬಹದ್ದೂರು ಬಜರಂಗ ದಳದ ಸದಸ್ಯರಾಗಿದ್ದರು. ಅವರ ಬಂಧನದ ಬಳಿಕ ಬಜರಂಗ ದಳ ಅವರನ್ನು ಅಧಿಕೃತವಾಗಿ ಉಚ್ಚಾಟಿಸಿತ್ತು.
ದೇವಿಂದರ್ ಸಿಂಗ್ ಮೇಲೆ 2001ರಲ್ಲೇ ಉಗ್ರವಾದಿಗಳೊಡನೆ ಸಂಬಂಧವಿರುವ ಬಗ್ಗೆ ಆರೋಪ ಕೇಳಿಬಂದಿತ್ತು. ಆದರೆ ಆತ ಮುಸ್ಲೀಮ್ ಆಗಿರಲಿಲ್ಲವಲ್ಲಾ? ಹಾಗಾಗಿ ಆತನ ವಿರುದ್ದ ಕನಿಷ್ಟ ಇಲಾಖಾ ತನಿಖೆ ಕೂಡಾ ನಡೆಯಲಿಲ್ಲ. ಆತನನ್ನು ಕೇವಲ ಬಡ್‍ಗಾಂವ್‍ನ Special Operations Groupನ ಡಿಎಸ್‍ಪಿ ಹುದ್ದೆಯಿಂದ ಹಿಂಬಡ್ತಿ ಕೊಟ್ಟು inspector ಆಗಿ ಮಧ್ಯ ಕಾಶ್ಮೀರದಲ್ಲಿ ಗುಪ್ತಚರ ಇಲಾಖೆಗೆ ವರ್ಗಾವಣೆ ಮಾಡಿ ಕೈ ತೊಳೆದುಕೊಂಡಿತ್ತು ನಮ್ಮ ವ್ಯವಸ್ಥೆ. ಇದಾಗಿದ್ದು ಫೆಬ್ರವರಿ 2001ರಲ್ಲಿ, ಅಂದರೆ ಸಂಸತ್ ಮೇಲೆ ದಾಳಿಯಾಗುವ ಸುಮಾರು ಹತ್ತು ತಿಂಗಳ ಹಿಂದೆ. ಆ ವೇಳೆಗೆ ಅವರ ಮೇಲೆ ಲಾಕಪ್ ಡೆತ್ ಆರೋಪಗಳೂ ಕೇಳಿಬಂದಿದ್ದವು. ಅಷ್ಟೇ ಅಲ್ಲದೆ ನಾಗರಿಕರನ್ನು ಹಿಂಸಿಸುವ, ಅವರಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆಯೂ ಆರೋಪಗಳು ಕೇಳಿ ಬಂದಿದ್ದವು. ಇಷ್ಟೆಲ್ಲಾ ಆರೋಪಗಳು ಬಂದರೂ, ಅವರನ್ನು ತನಿಖೆಗೆ ಒಳಪಡಿಸದೇ ಕೇವಲ ಹಿಂಬಡ್ತಿ ಕೊಟ್ಟು ಪ್ರಕರಣವನ್ನು ಮುಚ್ಚಿ ಹಾಕಿದ್ದರು.
ಅದೇ ವರುಷದ ಕೊನೆಯಲ್ಲಿ ಸಂಸತ್ ಮೇಲೆ ದಾಳಿ ನಡೆದ ಮರುದಿನವೇ ಗುಪ್ತಚರ ಇಲಾಖೆಯೆ ಸಿಕ್ಕ ಮಾಹಿತಿಯ ಪ್ರಕಾರ ಅಫ್ಜಲ್ ಗುರು ಬಂಧನವಾಗಿತ್ತು. ಸಂಸತ್ ಮೇಲೆ ದಾಳಿಗೆ ತಯಾರಿ ನಡೆಯುತ್ತಿದ್ದಾಗ, ಜೈಷ್-ಎ-ಮಹಮ್ಮದ್ ಉಗ್ರವಾದಿಗಳು ಪಾಕೀಸ್ಥಾನದಿಂದ ಕಾಶ್ಮೀರವಾಗಿ ದೆಹಲಿಗೆ ತಲುಪಿದಾಗಲೂ ಯಾವುದೇ ಮಾಹಿತಿಯಿಲ್ಲದ ಗುಪ್ತಚರ ಇಲಾಖೆಗೆ, ಸಂಸತ್ ಮೇಲೆ ದಾಳಿ ಮಾಡಿದ ಎಲ್ಲಾ ಉಗ್ರರು ದಾಳಿಯ ಸಂಧರ್ಬದಲ್ಲೇ ಸತ್ತುಹೋಗಿದ್ದರೂ, ಒಂದೇ ದಿನಕ್ಕೆ ಅಫ್ಜಲ್ ಗುರುವಿನ ಬಗ್ಗೆ ಹೇಗೆ ಮಾಹಿತಿ ಸಿಕ್ಕಿತ್ತೆಂದು ಆವಾಗಲೇ ಊಹಾಪೋಹಾಗಳು ಎದ್ದಿದ್ದವು. ಈವಾಗ ಬರುತ್ತಿರುವ ಮಾಹಿತಿಗಳ ಪ್ರಕಾರ ಸ್ವತ: ದೇವಿಂದರ್ ಸಿಂಗೇ ಅಫ್ಜಲ್ ಗುರುವನ್ನು ಸಿಕ್ಕಿಹಾಕಿಸಿ, ತಾನು ಬಚಾವಾಗಿದ್ದನು.
ಸಂಸತ್ ಮೇಲೆ ದಾಳಿ ಮಾಡಿದ ಉಗ್ರ ಮಹಮ್ಮದ್‍ನನ್ನು ತನಗೆ ಪರಿಚಯಿಸಿದ್ದು ದೇವಿಂದರ್ ಸಿಂಗ್ ಎಂದು ಅಫ್ಜಲ್ ಗುರು ಬರೆದ ಪತ್ರದ ಬಗ್ಗೆ ಯಾವತ್ತೂ ತನಿಖೆ ನಡೆಯಲಿಲ್ಲ. ಅದಕ್ಕೂ ಮೊದಲು ಕಾಶ್ಮೀರದಲ್ಲಿ ದೇವಿಂದರ್ ಸಿಂಗ್ ಅಫ್ಜಲ್ ಗುರುವನ್ನು ಬಂಧಿಸಿ ಅನೇಕ ದಿನಗಳ ಕಾಲ ಹಿಂಸಿಸಿದ್ದನೆಂದೂ ಅಫ್ಜಲ್ ಗುರು ಪತ್ರದಲ್ಲಿ ಹೇಳಿಕೊಂಡಿದ್ದನು. ಸಂಸತ್ ದಾಳಿಯ ಕೆಲ ತಿಂಗಳುಗಳ ಹಿಂದೆ ದೇವಿಂದರ್ ಸಿಂಗ್ ಅಲ್ತಾಫ್ ಹುಸೇನ್ ಎನ್ನುವ ವ್ಯಕ್ತಿಯ ಮುಖಾಂತರ ಅಫ್ಜಲ್ ಗುರುವನ್ನು ಕಾಶ್ಮೀರಕ್ಕೆ ಕರೆಸಿಕೊಂಡು ಜೈಷ್-ಎ-ಮಹಮ್ಮದ್ ಉಗ್ರ ಮಹಮ್ಮದ್‍ನನ್ನು ಆತನಿಗೆ ಪರಿಚಯಿಸಿ, ಆತನನ್ನು ದೆಹಲಿಗೆ ಕರೆದುಕೊಂಡು ಹೋಗಿ, ಆತ ದೆಹಲಿಯಲ್ಲಿ ಇರಲು ಬೇಕಾದ ಎಲ್ಲಾ ಸೌಕರ್ಯಗಳನ್ನು ಮಾಡಿಕೊಡಬೇಕೆಂದು ಹೇಳಿದ್ದರು.
ಈ ಅಲ್ತಾಫ್ ಹುಸೇನ್ ಅಂದಿನ ಜಮ್ಮು-ಕಾಶ್ಮೀರ ಪೋಲೀಸ ಇಲಾಖೆಯ ವರಿಷ್ಟ ಅಧಿಕಾರಿಯೊಬ್ಬರ ಸಂಬಂಧಿ ಹಾಗೂ ಜೈಷ್-ಎ-ಮೊಹಮ್ಮದ್ ಸದಸ್ಯ. ಮೊದಲೇ ದೇವಿಂದರ್ ಸಿಂಗ್ ಕೈಯಲ್ಲಿ ಹಿಂಸೆಗೊಳಪಟ್ಟಿದ್ದ ಅಫ್ಜಲ್ ಗುರು, ತನಗೆ ಪರಿಚಯವಿಲ್ಲದ ಉಗ್ರ ಮಹಮ್ಮದ್‍ನನ್ನು ದೆಹಲಿಗೆ ಕರೆದುಕೊಂಡು ಹೋಗಿ ಆತನಿಗೆ ವಸತಿ ಕಲ್ಪಿಸಿದ್ದನು. ತಾನು ಹಿಂದೊಮ್ಮೆ ಅಫ್ಜಲ್ ಗುರುವನ್ನು ಬಂಧಿಸಿ ಆತನನ್ನು ಹಿಂಸಿಸಿದ್ದಾಗಿ ಸ್ವತ: ದೇವಿಂದರ್ ಸಿಂಗ್ ಓರ್ವ ಫ್ರೀಲಾನ್ಸ್ ಪತ್ರಕರ್ತನಿಗೆ ಕೊಟ್ಟ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದರು. ಅರುಂಧತಿ ರೋಯ್ 2006ರಲ್ಲಿ ಬರೆದಿರುವ The Hanging of Afzal Guru and the Strange Case of the Attack on the Indian Parliament ಪುಸ್ತಕದಲ್ಲಿ ದೇವಿಂದರ್ ಸಿಂಗ್ ಬಗ್ಗೆ ಪ್ರತ್ಯೇಕ ಉಲ್ಲೇಖವಿದ್ದು, ಅವರು ಹೇಗೆ ಜಮ್ಮು-ಕಾಶ್ಮೀರದ ಪೋಲೀಸ್ ಇಲಾಖೆಯಲ್ಲಿ ಅಷ್ಟು ಬೇಗ ಬೆಳೆದರು ಎನ್ನುವುದನ್ನು ಹೇಳಲಾಗಿದೆ.
ಅಫ್ಜಲ್ ಗುರು ತನ್ನ ಲಾಯರಿಗೆ ಬರೆದ ಪತ್ರದಲ್ಲಿ ದೇವಿಂದರ್ ಸಿಂಗ್ ತನಗೂ, ಉಗ್ರ ಮಹಮ್ಮದ್‍ಗೂ ಮಾಡಿರುವ ಕರೆಗಳ ಬಗ್ಗೆಯೂ ಹೇಳಿದ್ದರು. ದೇವಿಂದರ್ ಸಿಂಗ್ ಮೇಲೆ ತನಿಖೆ ನಡೆದು, ಅವರ ಫೋನ್ ಕಾಲ್‍ಗಳ ಪರಿಶೀಲನೆ ಮಾಡಿರುತ್ತಿದ್ದರೆ ಆತ ಅಂದೇ ತಗಲಾಕಿಕೊಳ್ಳುತ್ತಿದ್ದರು. ಈವಾಗ ಬಂಧನವಾಗುತ್ತಿದ್ದಂತೆ ಜಮ್ಮು-ಕಾಶ್ಮೀರದ ಅನೇಕ ಪೋಲೀಸ್ ಅಧಿಕಾರಿಗಳು ದೇವಿಂದರ್ ಸಿಂಗ್ ಅನೇಕ ವರುಷಗಳಿಂದ ಉಗ್ರವಾದಿಗಳೊಡನೆ ವ್ಯವಹರಿಸುತ್ತಿದ್ದಾರೆಂದು ಹೇಳುತ್ತಿದ್ದಾರೆ. ಆತ ಇದನ್ನು ಹಣಕ್ಕಾಗಿ ಮಾಡುತ್ತಿದ್ದಾನೆಂದೂ ಹೇಳುತ್ತಿದ್ದಾರೆ. ಇಷ್ಟೆಲ್ಲಾ ಗೊತ್ತಿದ್ದು ಅವರು ಯಾಕೆ ಇಷ್ಟೊತ್ತು ಬಾಯ್ಮುಚ್ಚಿಕೊಂಡಿದ್ದರು ಎನ್ನುವುದನ್ನು ಅವರೇ ಉತ್ತರಿಸಬೇಕು. ಈ ದೇವಿಂದರ್ ಸಿಂಗ್‍ರನ್ನು ಇತರ ಉಗ್ರರಂತೆಯೇ ನಡೆಸಿ, ಅವರಿಂದ ಎಲ್ಲಾ ಮಾಹಿತಿಗಳನ್ನು ಕಕ್ಕಿಸಿದರೆ, ಬೃಹತ್ ಜಾಲವೊಂದೇ ಹೊರಬರಬಹುದೇನೋ?
– Almeida Gladson