ರಿಯಾದ್: ಸೌದಿ ಅರೇಬಿಯಾದಲ್ಲಿ ಸ್ವದೇಶೀಕರಣ ಪ್ರಬಲವಾಗಿ ಜಾರಿಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅನೇಕ ವಲಸಿಗರು ತಮ್ಮ ಊರಿಗೆ ಮರಳಿದ್ದಾರೆ. ಆದಾಗ್ಯೂ, ಕಳೆದ ವರ್ಷ, 2019ರಲ್ಲಿ 12 ಲಕ್ಷಕ್ಕೂ ಹೆಚ್ಚು ಜನರು ಹೊಸ ಉದ್ಯೋಗಗಳಿಗೆ, ಹೊಸ ವೀಸಾಗಳಲ್ಲಿ ಸೌದಿಗೆ ಆಗಮಿಸಿದ್ದರು.ಪ್ರತಿ ಹೊಸ ವರ್ಷವನ್ನು ವಲಸಿಗರು ಬಹು ನಿರೀಕ್ಷೆಯೊಂದಿಗೆ ಬರಮಾಡಿಕೊಳ್ಳುತ್ತಾರೆ.
2020 ರಲ್ಲಿ, ಜಾರಿಯಾಗಲಿರುವ, ವಲಸಿಗರು ತಿಳಿದಿರಬೇಕಾದ ಹೊಸ ನಿಯಮಗಳು ಮತ್ತು ವ್ಯವಸ್ಥೆಗಳು:
1. ಹಗಲು ಮತ್ತು ರಾತ್ರಿ ಪೂರ್ತಿಯಾಗಿ ಅಂಗಡಿಗಳು ತೆರೆದಿರುತ್ತವೆ:
ವಲಸಿಗರು ಆತಂಕ ಮತ್ತು ನಿರೀಕ್ಷೆಯೊಂದಿಗೆ ಕಾಣುತ್ತಿರುವ, 2020 ರಲ್ಲಿ ಜಾರಿಗೆ ಬರಲಿರುವ ಕಾನೂನುಗಳು ಮತ್ತು ಬದಲಾವಣೆಗಳ ಬಗ್ಗೆ ಸೌದಿ ಅರೇಬಿಯಾ ತಿಳಿಸಿದೆ. ಸೌದಿ ಅರೇಬಿಯಾದ ವಾಣಿಜ್ಯ ಸಂಸ್ಥೆಗಳ ಕೆಲಸದ ಸಮಯವನ್ನು ಇಪ್ಪತ್ನಾಲ್ಕು ಗಂಟೆಗಳವರೆಗೆ ವಿಸ್ತರಿಸುವ ನಿರ್ಧಾರ ಬುಧವಾರದಿಂದ ಜಾರಿಗೆ ಬಂದಿದೆ. ದೇಶದ ವಾಣಿಜ್ಯ ಸಂಸ್ಥೆಗಳಿಗೆ ವಿರಾಮವಿಲ್ಲದೆ ತೆರೆದಿಡುವ ಅನುಮತಿ ಮೇರೆಗೆ,ಅಂಗಡಿಗಳಲ್ಲಿ ಕ್ಯಾಮೆರಾಗಳನ್ನು ಸ್ಥಾಪಿಸಿ, ಶುಲ್ಕ ಪಾವತಿಸಿ ಪರವಾಣಿಗೆ ಪಡೆಯಬಹುದು. ಇದು ಜನವರಿ 1ರಿಂದ ಜಾರಿಗೆ ಬಂದಿದೆ.
2. ರಾತ್ರಿಯಲ್ಲಿ ಕೆಲಸ ಮಾಡುವವರಿಗೆ ಇದರ ಪ್ರಯೋಜನ ಲಭ್ಯ:
ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಹೊಸ ಪ್ರಯೋಜನಗಳು ಜನವರಿ 1ರಿಂದ ಜಾರಿಗೆ ಬಂದಿದೆ. ರಾತ್ರಿ ಹನ್ನೊಂದರಿಂದ ಬೆಳಗ್ಗೆ ಆರು ಗಂಟೆಯ ನಡುವೆ ಕೆಲಸ ಮಾಡುವವರಿಗೆ ಈ ಸೌಲಭ್ಯಗಳು ಸಿಗುತ್ತವೆ. ಆಹಾರ ತಯಾರಿಕೆ ಮತ್ತು ಭತ್ಯೆಯನ್ನು ಉದ್ಯೋಗದಾತ ನೀಡಬೇಕು.
3. ವಿಮಾನ ನಿಲ್ದಾಣಗಳಲ್ಲಿ ಹತ್ತು ರಿಯಾಲ್ ಶುಲ್ಕ:
ಜನವರಿ 1ರಿಂದ ಗ್ರಾಹಕರಿಗೆ ಹತ್ತು ರಿಯಾಲ್ ಶುಲ್ಕವನ್ನು ವಿಧಿಸಲಾಗುವುದು. ಶುಲ್ಕವನ್ನು ನಾಗರಿಕ ವಿಮಾನಯಾನ ಪ್ರಾಧಿಕಾರವು ವಿಮಾನ ಕಂಪೆನಿಗಳಿಂದ ವಸೂಲು ಮಾಡಲಿದ್ದು, ಟಿಕೆಟ್‌ಗಳಿಗೆ ಇನ್ನು ಮುಂದೆ ಹತ್ತು ರಿಯಾಲ್ ಹೆಚ್ಚಳವಾಗಲಿವೆ. ವಿಮಾನ ನಿಲ್ದಾಣದ ವಿಶ್ರಾಂತಿ ಕೋಣೆಗಳು ಮತ್ತು ಸಂಬಂಧಿತ ಸೌಕರ್ಯಗಳನ್ನು ಬಳಸಲು ಈ ಶುಲ್ಕ ವಿಧಿಸಲಾಗುತ್ತಿದೆ.
4. ಹೈಡ್ರೋಜನೀಕರಿಸಿದ ಆಹಾರವನ್ನು ನಿಷೇಧಿಸಲಾಗುವುದು:
ಭಾಗಶಃ ಹೈಡ್ರೋಜನೀಕರಿಸಿದ ತೈಲವನ್ನು ಹೊಂದಿರುವ ಆಹಾರ ಉತ್ಪನ್ನಗಳನ್ನು ಜನವರಿ 1 ರಿಂದ ಸೌದಿಯಲ್ಲಿ ನಿಷೇಧಿಸಲಾಗುವುದು. ಸೌದಿ ಆರೋಗ್ಯ ಸಚಿವಾಲಯದ ಪ್ರಕಾರ ಕೆಟ್ಟ ಕೊಲೆಸ್ಟ್ರಾಲ್ನನ್ನು ಹೆಚ್ಚಿಸುವ ಸಂಭವ ಇರುವ ಹಿನ್ನೆಲೆಯಲ್ಲಿ ಈ ನಿರ್ಧಾರವು ಹೊರಡಿಸಲಾಗಿದೆ. ಈ ಬಗ್ಗೆ ಆಮದುದಾರರು ಮತ್ತು ಸಂಸ್ಥೆಗಳಿಗೆ ಆದೇಶ ಹೊರಡಿಸಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
5. ರಿಯಾದ್ ಮೆಟ್ರೋಗೆ ಚಾಲನೆ:
ಸೌದಿ ರಾಜಧಾನಿಯಲ್ಲಿ ಪೂರ್ಣಗೊಳ್ಳಲಿರುವ ರಿಯಾದ್ ಮೆಟ್ರೋ ಈ ವರ್ಷ ಪರೀಕ್ಷೆ ಓಟವನ್ನು ಮುಗಿಸಿ, ಓಡಾಟವನ್ನು ಪ್ರಾರಂಭಿಸಲಿದೆ. ವಿಶ್ವದ ಅತಿದೊಡ್ಡ ಮೆಟ್ರೋ ಯೋಜನೆ ಇದಾಗಿದ್ದು, ನೂರ ಮೂವತ್ತನಾಲ್ಕು ಕಿಲೋಮೀಟರ್‌ನಲ್ಲಿ ವ್ಯಾಪಿಸಿದೆ. ಶೇಕಡಾ ತೊಂಬತ್ತರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಸೇತುವೆಗಳ ಸುಂದರೀಕರಣ ಕಾರ್ಯ ಪ್ರಗತಿಯಲ್ಲಿದೆ.ಮೆಟ್ರೊದಲ್ಲಿ ಕೆಲಸ ಮಾಡುವ ಹೆಚ್ಚಿನವರು ವಿದೇಶಿಯರಾಗಿದ್ದು, ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
6. ಮೆಟ್ರೋ ಬಸ್ಸುಗಳ ಓಡಾಟ ಆರಂಭ:
3,000 ಕ್ಕೂ ಹೆಚ್ಚು ಬಸ್‌ಗಳ ಪೈಕಿ 319 ಬಸ್‌ಗಳನ್ನು ಮೊದಲ ಹಂತದಲ್ಲಿ ನಿಯೋಜಿಸಲಾಗಿದ್ದು, ಎಲ್ಲವೂ ರಾಜಧಾನಿಗೆ ಬಂದಿವೆ. ಪ್ರಾಥಮಿಕ ಪ್ರಾಯೋಗಿಕ ಓಟವನ್ನು ಪ್ರಾರಂಭಿಸಿವೆ. ಮರ್ಸಿಡಿಸ್ ಮಾನ್ ಕಂಪನಿಗಳು ನಿರ್ಮಿಸಿದ ಆಧುನಿಕ ಬಸ್ಸುಗಳು ರಿಯಾದ್‌ನ ಚಿತ್ರಣವನ್ನು ಬದಲಾಯಿಸಲಿವೆ. ಮೆಟ್ರೋ ಬಸ್ ಉದ್ಯೋಗಿಗಳಲ್ಲಿ ಹೆಚ್ಚಿನವರು ವಿದೇಶಿಯರು. ಈ ವಲಯದಲ್ಲಿ ವಿವಿಧ ಉದ್ಯೋಗಗಳು ಲಭ್ಯ.
7. ಕಅಬಾ ಮತ್ತು ಹರಮ್ ಅಂಗಳದಲ್ಲಿ ಛತ್ರಿಗಳು
ಮಕ್ಕಾದಲ್ಲಿನ ಮಸ್ಜಿದ್ ಅಲ್-ಹರಮಿನ ವಿಶಾಲವಾದ ಪ್ರಾಂಗಣಗಳಲ್ಲಿ ಶೀಘ್ರದಲ್ಲೇ ನೆರಳು ಛತ್ರಿಗಳನ್ನು ಸ್ಥಾಪಿಸಲಾಗುವುದು. ವಿಶ್ವದ ಅತಿದೊಡ್ಡ ನೆರಳು ಛತ್ರಿಗಳನ್ನು ಮಳೆ ಮತ್ತು ಸೂರ್ಯ ಪ್ರಕಾಶವನ್ನು ತಡೆಯಲು ಬಳಸಲಾಗುತ್ತದೆ. ಇದು ರಂಝಾನ್‌ಗಿಂತ ಮುಂಚಿತವಾಗಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇದಕ್ಕಾಗಿ ಕಂಪನಿಯು ಒಪ್ಪಂದವನ್ನು ಪ್ರಾರಂಭಿಸಿದೆ.
8. ಲೆವಿಯ ದುಷ್ಪರಿಣಾಮ ಅಧ್ಯಯನ ವರದಿ:
ಖಾಸಗಿ ವಲಯದ ಮೇಲೆ ವಿಧಿಸಲಾಗುವ ಲೆವಿಯ ದುಷ್ಪರಿಣಾಮದ ಕುರಿತು ವಿಶೇಷ ವರದಿಯನ್ನು ಸಿದ್ಧಪಡಿಸಲಾಗುತ್ತಿದ್ದು, ಇದನ್ನು ಈ ವರ್ಷ ಹಣಕಾಸು ಮತ್ತು ಕಾರ್ಮಿಕ ಸಚಿವಾಲಯಕ್ಕೆ ಸಲ್ಲಿಸಬಹುದು. ಹಣಕಾಸು ಕ್ಷೇತ್ರದಲ್ಲಿ ವಿಧಿಸಬೇಕಾದ ಯಾವುದೇ ಶುಲ್ಕಗಳ ಬಗ್ಗೆ ಮರುಪರಿಶೀಲನಾ ಅಧ್ಯಯನ ನಡೆಸುವ ಪ್ರಸ್ತಾಪವು ಜಾರಿಗೆ ಬಂದಿದೆ. ಈ ವರ್ಷದಿಂದ ಯಾವುದೇ ಶುಲ್ಕವನ್ನು ಜಾರಿಗೊಳಿಸಬೇಕಾದರೂ, ಅದರ ಪರಿಣಾಮವನ್ನು ಅಧ್ಯಯನ ಮಾಡುವುದು ಮತ್ತು ವರದಿಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ.
9. ಖಾಸಗಿ ವಲಯದಲ್ಲಿ ಸಂಬಳ ಹೆಚ್ಚಳ:
ಸೌದಿಯ ಖಾಸಗಿ ವಲಯದಲ್ಲಿ ವೇತನ ಹೆಚ್ಚಳ ಈ ವರ್ಷ ಜಾರಿಯಾಗುವ ನಿರೀಕ್ಷೆಯಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಿನ ಸಂಸ್ಥೆಗಳು ವಿವಿಧ ಕಾರಣಗಳಿಗಾಗಿ ನಿರ್ಬಂಧಿಸಿದ ಹಣವನ್ನು ಪಡೆದಿದೆ. ಬ್ಲೂಮ್‌ಬರ್ಗ್ ಪತ್ರಿಕೆ ಸೇರಿದಂತೆ ವಿವಿಧ ಮಾಧ್ಯಮಗಳು ಹಣಕಾಸು ಸಂಸ್ಥೆಗಳು ಖಾಸಗಿ ಸಂಸ್ಥೆಗಳ ವೇತನವನ್ನು ಹೆಚ್ಚಿಸುವ ಭರವಸೆ ನೀಡಿವೆ ಎಂದು ಸೌದಿಯ ಖಾಸಗಿ ಕಂಪನಿಗಳನ್ನು ಉಲ್ಲೇಖಿಸಿವೆ. ಸೌದಿ ಅರೇಬಿಯಾದಲ್ಲಿ ಸರಕಾರವು ಜಾರಿಗೆ ತಂದಿರುವ ಯೊಜನೆಗಳ ಪೈಕಿ ನಿರ್ಮಾಣ ಕಂಪನಿಗಳಿಗೆ ಬಾಕಿ ಇರುವ ಪಾವತಿಯನ್ನು ಶೀಘ್ರಗೊಳಿಸಲು ರಾಜ ಸಲ್ಮಾನ್ ಆದೇಶಿಸಿದ್ದಾರೆ.
10. ಜಿ ಟ್ವೆಂಟಿ ಶೃಂಗಸಭೆ ಸೌದಿಯಲ್ಲಿ ನಡೆಯಲಿದೆ:
ಜಿ-ಟ್ವೆಂಟಿ ಶೃಂಗಸಭೆಯು ಸೌದಿ ರಾಜಧಾನಿ ರಿಯಾದ್‌ನಲ್ಲಿ ನಡೆಯಲಿದೆ. ನವೆಂಬರ್‌ನಲ್ಲಿ ನಡೆಯುವ ಶೃಂಗಸಭೆಗೆ ಮುಂಚಿತವಾಗಿ ರಿಯಾದ್ ವಿಮಾನ ನಿಲ್ದಾಣದಲ್ಲಿ ವಿಶೇಷ ಕೌಂಟರ್ ತೆರೆಯಲಾಗಿದೆ. ವಿವಿಧ ಯೋಜನೆಗಳನ್ನು ಯೋಜಿಸಲಾಗುತ್ತಿದೆ. ಇದರ ಭಾಗವಾಗಿ ವಿವಿಧ ಉದ್ಯೋಗಗಳನ್ನು ಸೃಷ್ಟಿಸಲಾಗುತ್ತದೆ.
11. ಹೋಟೆಲ್‌ಗಳು ಮತ್ತು ಪೆಟ್ರೋಲ್ ಪಂಪ್‌ಗಳಲ್ಲಿ ಬೆಲೆ ಪ್ರದರ್ಶನ:
ಹೋಟೆಲ್‌ಗಳಲ್ಲಿ ಆಹಾರದಲ್ಲಿನ ಕ್ಯಾಲೊರಿಗಳನ್ನು ಪ್ರದರ್ಶಿಸುವುದು ಅತ್ಯಗತ್ಯ. ಪ್ರದರ್ಶಿಸದ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಪ್ರಾರಂಭಿಸಲಾಗಿದೆ. ಪೆಟ್ರೋಲ್ ಬೆಲೆಯನ್ನು ನಿಗದಿತ ಸಮಯಕ್ಕೆ ನವೀಕರಿಸುವುದರಿಂದ, ಪ್ರತಿ ದಿನ ಪೆಟ್ರೋಲ್ ಬೆಲೆಯನ್ನು ಪ್ರದರ್ಶಿಸಬೇಕು. ಮೂಲಸೌಕರ್ಯ ಇಲ್ಲದ ಪೆಟ್ರೋಲ್ ಪಂಪ್‌ಗಳನ್ನು ಸ್ಥಗಿತಗೊಳಿಸಲಾಗಿದೆ. ಅವುಗಳನ್ನು ಮೂಲಸೌರ್ಯ ಒದಗಿಸಿದ ಬಳಿಕ ಅನುಮತಿಯೊಂದಿಗೆ ತೆರೆಯಬಹುದು,
12. ಭ್ರಷ್ಟಾಚಾರ ನಿಗ್ರಹ ಕಾಯ್ದೆ ಜಾರಿ:
ಸೌದಿ ಅರೇಬಿಯಾದ ಶುರಾ ಕೌನ್ಸಿಲ್ ಭ್ರಷ್ಟಾಚಾರ ಬಗೆಗಿನ ಮಾಹಿತಿದಾರರನ್ನು ರಕ್ಷಿಸುವ ಪ್ರಮುಖ ಕಾನೂನನ್ನು ಜಾರಿಗೆ ತಂದಿದೆ. ಗೌಪ್ಯ ಮಾಹಿತಿದಾರರಿಗೆ ಕಾನೂನು ರಕ್ಷಿಣೆ ನೀಡಲಾಗುತ್ತದೆ. ಈ ಕ್ರಮವು ಭ್ರಷ್ಟಾಚಾರವನ್ನು ತಡೆಗಟ್ಟುವ ಕಾರ್ಯಕ್ರಮದ ಭಾಗವಾಗಿದೆ. ಅದರಂತೆ ಭ್ರಷ್ಟಾಚಾರಕ್ಕೆ ಯತ್ನಿಸಿದವರನ್ನು ಬಂಧಿಸಲಾಗಿದೆ. ಅಧಿಕಾರಶಾಹಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವುದು ಇದರ ಉದ್ದೇಶ.
13. ಉಮ್ರಾಗಳಿಗೆ ವಿಮಾ ಕಡ್ಡಾಯ:
ಉಮ್ರಾ ಯಾತ್ರಿಕರಾದ ವಿದೇಶಿಯರಿಗೆ ಸಮಗ್ರ ಆರೋಗ್ಯ ವಿಮೆ ಯೋಜನೆ ಕಡ್ಡಾಯವಾಗಲಿದೆ. ಹಜ್ ಉಮ್ರಾ ಸಚಿವಾಲಯ ಮತ್ತು ತವುನಿಯಾ ವಿಮಾ ಕಂಪನಿ ಈ ಯೋಜನೆಯನ್ನು ಜಾರಿಗೊಳಿಸುತ್ತಿವೆ. ಆರೋಗ್ಯ ಸೇವೆಗಳ ಜೊತೆಗೆ, ವಿಮಾನ ನಿಲ್ದಾಣಗಳಲ್ಲಿ ಎದುರಾಗುವ ವಿವಿಧ ಪ್ರಯಾಣ ಸಮಸ್ಯೆಗಳಿಗೂ ವಿಮೆಯ ಪ್ರಯೋಜನವನ್ನು ಪಡೆಯಬಹುದು. ಪ್ರತಿ ಯಾತ್ರಿಕನು ಒಂದು ತಿಂಗಳ ಪಾಲಿಸಿಗೆ 189 ರಿಯಾಲ್‌ಗಳನ್ನು ಪಾವತಿಸಬೇಕಾಗುತ್ತದೆ.
14. ವಲಸಿಗರು ಚಿಕಿತ್ಸೆಗಾಗಿ ಇಖಾಮಾ ನೀಡಿದರೆ ಸಾಕು:
ಸೌದಿಯಲ್ಲಿ ವೈದ್ಯಕೀಯ ಸೇವೆಗಳಿಗೆ ವಿಮಾ ಕಾರ್ಡ್ ಅಗತ್ಯವಿಲ್ಲ. ವೈದ್ಯಕೀಯ ವಿಮಾ ಪಾಲಿಸಿ ಹೊಂದಿರುವ ವ್ಯಕ್ತಿಗಳು ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳಿಗೆ ಪ್ರವೇಶಕ್ಕಾಗಿ ತಮ್ಮ ಇಖಾಮಾ ಮತ್ತು ರೆಸಿಡೆಂಟ್ ಐಡೆಂಟಿಟಿ ಕಾರ್ಡ್ ಅನ್ನು ತೋರಿಸಿದರೆ ಸಾಕಾಗುತ್ತದೆ. ನಿವಾಸ ಸಂಖ್ಯೆಯನ್ನು ಒದಗಿಸುವುದರಿಂದ ವಿಮೆ ಮಾಡಿದ ವ್ಯಕ್ತಿಯ ಮಾಹಿತಿ ಖಚಿತಪಡಿಸಿಕೊಳ್ಳಲು ಸಹ ಸಹಾಯ ಮಾಡಲಿದೆ.
15. ಸೌದಿಯಲ್ಲಿ ವಿದೇಶಿ ವಿಶ್ವವಿದ್ಯಾಲಯಗಳು;
ಸೌದಿ ಅರೇಬಿಯಾದ ಪರಿಷ್ಕೃತ ಕಾನೂನು ವೈಯಕ್ತಿಕ ವಿಶ್ವವಿದ್ಯಾಲಯಗಳಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅನುಮತಿ ನೀಡುತ್ತಿದೆ. ಪ್ರತಿಯೊಂದು ವಿಶ್ವವಿದ್ಯಾಲಯಗಳನ್ನು ಸಚಿವಾಲಯದ ಅಧೀನದಲ್ಲಿರುವ ಟ್ರಸ್ಟ್ ಮಂಡಳಿಗಳು ನಿರ್ವಹಿಸುತ್ತವೆ. ಹೊಸ ಕಾನೂನಿನ ಪ್ರಕಾರ, ಸ್ಥಳೀಯ ವಿಶ್ವವಿದ್ಯಾಲಯಗಳು ದೇಶದ ಹೊರಗೆ ಶಾಖೆಗಳನ್ನು ತೆರೆಯಬಹುದು ಮತ್ತು ವಿದೇಶಿ ವಿಶ್ವವಿದ್ಯಾಲಯಗಳಿಗೆ ದೇಶದಲ್ಲಿ ಶಾಖೆಗಳನ್ನು ತೆರೆಯಲು ಅನುಮತಿ ಇದೆ.
16. ಹೊಸ ಝಕಾತ್ ಕಾನೂನು ವಿದೇಶಿಯರಿಗಿಲ್ಲ:
ಸೌದಿಯಲ್ಲಿ ಹೂಡಿಕೆ ಮಾಡುವ ವಿದೇಶಿ ಕಂಪನಿಗಳಿಗೆ ಝಕಾತ್ ಕಾನೂನು ಅನ್ವಯಿಸುವುದಿಲ್ಲ. ಅದೇ ಸಮಯದಲ್ಲಿ, ವಿದೇಶಿ ಕಂಪನಿಯ ಸೌದಿಯ ಮಾಲೀಕರು ಸ್ಥಳೀಯರಾಗಿದ್ದರೆ ಪಾವತಿಸುವುದು ಕಡ್ಡಾಯ. ಕೊಲ್ಲಿ ಕಂಪನಿಗಳು, ಕೊಲ್ಲಿ ಹೂಡಿಕೆದಾರರು ಮತ್ತು ಮೂಲ ನಿವಾಸಿಗಳು ಝಕಾತ್ ಪಾವತಿಸಬೇಕಾಗುತ್ತದೆ. ವಿದೇಶಿ ಹೂಡಿಕೆದಾರರಿಗೆ ಮಾತ್ರ ಜನವರಿಯಿಂದ ಕಾಯಿದೆಯಿಂದ ವಿನಾಯಿತಿ ನೀಡಲಾಗುವುದು.
17. ಟ್ಯಾಕ್ಸಿ ಉದ್ಯೋಗಗಳ ದೇಶೀಕರಣ:
ಉಬರ್ ಮತ್ತು ಕರೀಮ್ ಸೇರಿದಂತೆ ಸ್ವದೇಶೀಕರಣಗೊಳಿಸುವ ಪ್ರಯತ್ನಗಳು ಈ ವರ್ಷ ಪ್ರಾರಂಭವಾಗಲಿವೆ. ಸೌದಿಯ ಎಲ್ಲಾ ಟ್ಯಾಕ್ಸಿಗಳು ಆನ್‌ಲೈನ್‌ನಲ್ಲಿ ಸಂಪರ್ಕಗೊಳ್ಳಲಿದ್ದು, ಈ ವರ್ಷ ಪೂರ್ಣಗೊಳ್ಳಲಿದೆ. ಗ್ರಾಹಕರೊಂದಿಗೆ ವರ್ತಿಸಬೇಕಾದ ರೀತಿ ಸೇರಿದಂತೆ ಟ್ಯಾಕ್ಸಿ ಉದ್ಯೋಗಿಗಳಿಗೆ ತರಬೇತಿ ಪ್ರಗತಿಯಲ್ಲಿದೆ.
18. ಟರ್ಕಿ ಪ್ರಯಾಣಕ್ಕೆ ನಿಬಂಧನೆ:
ಟರ್ಕಿಗೆ ಪ್ರವೇಶಿಸಲು ಸೌದಿ ಪ್ರಜೆಗಳು ರಾಯಭಾರ ವೀಸಾ ಪಡೆಯಬೇಕು. ಈ ಮೊದಲು ಇದು ಸೌದಿಗಳಿಗೆ ವೆಬ್‌ಸೈಟ್ ಮೂಲಕ ಲಭ್ಯವಿತ್ತು.
19. ಪ್ರೀಮಿಯಂ ಇಖಾಮಗಳಿಗೆ ಶಾಶ್ವತ ವಾಸ್ತವ್ಯ:
ಸೌದಿಯಲ್ಲಿ ಪ್ರೀಮಿಯಂ ಇಖಾಮಾವನ್ನು ಹೊಂದಿರುವರು ಈ ವರ್ಷ ಸೌದಿ ಪ್ರಜೆಗಳಿಗೆ ಲಭಿಸುವ ಹೆಚ್ಚಿನ ಸೌಲಭ್ಯದೊಂದಿಗೆ ಸೌದಿಯಲ್ಲಿ ಉಳಿಯಲು ಸಾಧ್ಯವಾಗುತ್ತದೆ. ಹೊಸದಾಗಿ ಘೋಷಿಸಲಾದ ಪ್ರಿವಿಲೇಜ್ ವಿಶೇಷ ವಸತಿ ಸೌಕರ್ಯವಾಗಿದ್ದು ಅದಕ್ಕೆ ಪ್ರಾಯೋಜಕರ ಅಗತ್ಯವಿಲ್ಲ. ಅನುಮೋದಿಸಿದ ನಂತರ ವಿಶೇಷ ಸಂದರ್ಶನದ ನಂತರ ಶಾಶ್ವತ ನಿವಾಸ ಪ್ರಮಾಣಪತ್ರ ಅಥವಾ ಪ್ರೀಮಿಯಂ ನಿವಾಸ ಕಾರ್ಡ್ ನೀಡಲಾಗುತ್ತದೆ. ಈ ಯೋಜನೆಯು ಆಂತರಿಕ ಸಚಿವಾಲಯದ ಅಧೀನದಲ್ಲಿರುವ ಪ್ರೀಮಿಯಂ ರೆಸಿಡೆನ್ಸಿ ಕೇಂದ್ರದ ಅಡಿಯಲ್ಲಿದೆ. ಖಾಯಂ ವಾಸಿಸುವ ಇಖಾಮಾಗೆ 8 ಲಕ್ಷ ರಿಯಾಲ್ ಪಾವತಿಸಬೇಕಾಗುತ್ತದೆ. ಯಾವುದೇ ಲೆವಿ ವಿಧಿಸುವಿಕೆ ಅಥವಾ ಇತರ ಶುಲ್ಕಗಳು ಇರುವುದಿಲ್ಲ. ಪ್ರತಿ ವರ್ಷ ನವೀಕರಿಸಲಾಗುವ ತಾತ್ಕಾಲಿಕ ಇಖಾಮವು ಒಂದು ಲಕ್ಷ ರಿಯಾಲ್‌ಗಳ ಮೌಲ್ಯದ್ದಾಗಿದೆ.
20. ಹೊಸ ಸಂದರ್ಶಕ ವೀಸಾಗಳು:
ಈ ಹಿಂದೆ ಪ್ರವಾಸೋದ್ಯಮ ವೀಸಾಗಳ ಭಾಗವಾಗಿ ಕೆಲವು ದೇಶಗಳಿಗೆ ಮಾತ್ರ ಇ-ವೀಸಾಗಳನ್ನು ನೀಡಲಾಗುತ್ತಿತ್ತು. ಈ ವರ್ಷ ಹೆಚ್ಚಿನ ದೇಶಗಳಿಗೆ ನೀಡಲು ಅನುವು ಮಾಡಿಕೊಡಲಾಗುತ್ತಿದೆ. ಪ್ರವಾಸೋದ್ಯಮ ಸಚಿವಾಲಯದ ಅಡಿಯಲ್ಲಿರುವ ಈ ವೀಸಾಗಳಲ್ಲಿ ಸೌದಿ ಅರೇಬಿಯಾದಲ್ಲಿ ನಿಗದಿತ ದಿನಗಳು ಮಾತ್ರ ಉಳಿಯಬಹುದು.