ಪುತ್ತೂರು: ಪಾಂಡಿತ್ಯಲೋಕದ ಶ್ರೇಷ್ಠ ವ್ಯಕ್ತಿತ್ವ ದಾರುಲ್ ಇರ್ಷಾದ್ ಸಾರಥಿ ಝೈನುಲ್ ಉಲಮಾರಿಗೆ ಪೌರಸನ್ಮಾನ ಮಹಾ ಸಮ್ಮೇಳನವು ಕಬಕ ಜಂಕ್ಷನ್ ನಲ್ಲಿ ಜನವರಿ 2 ರಂದು ಐತಿಹಾಸಿಕವಾಗಿ ನಡೆಯಲಿದೆ.
ದರ್ಸ್ ರಂಗದಲ್ಲಿ 50 ವರ್ಷಗಳನ್ನು ಪೂರೈಸಿದ ಶೈಖುನಾ ಮಾಣಿ ಉಸ್ತಾದರ ಸೇವೆಯನ್ನು ಪರಿಗಣಿಸಿ ಸುನ್ನಿ ಸಂಘಟನೆಗಳು ಪೌರ ಸನ್ಮಾನ ಹಮ್ಮಿಕೊಂಡಿದೆ.
ಜನವರಿ 2 ರಂದು ಕಬಕದಲ್ಲಿ ನಡೆಯಲಿರುವ ಸುನ್ನಿ ಮಹಾ ಸಮ್ಮೇಳನದಲ್ಲಿ ಮಾಣಿ ಉಸ್ತಾದರನ್ನು ಇಂಡಿಯನ್ ಗ್ರಾಂಡ್ ಮುಫ್ತಿ ಶೈಖುನಾ ಎ. ಪಿ ಉಸ್ತಾದರು ಸನ್ಮಾನಿಸಲಿದ್ದು ಹಲವಾರು ಉಲಮಾಗಳು ಮತ್ತು ಸಾದಾತುಗಳು ಈ ಪೌರಸನ್ಮಾನ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.
ಧಾರ್ಮಿಕ ಶೈಕ್ಷಣಿಕ ಕ್ಷೇತ್ರದ ಹರಿಕಾರ ಶೈಖುನಾ ಮಾಣಿ ಉಸ್ತಾದ್
✍ ಗಫೂರ್ ಬಾಯಾರ್
ಧಾರ್ಮಿಕ ಹಾಗೂ ಲೌಕಿಕವಾದ ಶಿಕ್ಷಣದಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಶಿಕ್ಷಣ ನೀಡುತ್ತಾ ದಕ್ಷಿಣ ಕರ್ನಾಟಕದ ಶೈಕ್ಷಣಿಕ ರಂಗಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲೊಂದಾಗಿದೆ ದಾರುಲ್ ಇರ್ಶಾದ್ ಎಜುಕೇಷನ್ ಕಾಂಪ್ಲೆಕ್ಸ್.
ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದರ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿರುವ ಈ ಶಿಕ್ಷಣ ಸಂಸ್ಥೆಯು ಸಮನ್ವಯ ವಿದ್ಯಾಭ್ಯಾಸ ರಂಗದಲ್ಲಿ ದಕ್ಷಿಣ ಕರ್ನಾಟಕದಲ್ಲೇ ಪ್ರಥಮ ಶೈಕ್ಷಣಿಕ ಸಂಸ್ಥೆಯಾಗಿದೆ.
ಪರಿಚಯ:ಝೈನುಲ್ ಉಲಮಾ, ಮಾಣಿ ಉಸ್ತಾದ್, ಮಚ್ಚಂಪಾಡಿ ಉಸ್ತಾದ್ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಉಸ್ತಾದರ ನಿಜವಾದ ಹೆಸರು ಶೈಖುನಾ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಎಂದಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಬುಡೋಳಿ ಗ್ರಾಮದಲ್ಲಿ ಪರ್ತಿಪಾಡಿಯ ಅಬ್ದುಲ್ಲಾಹಿ ಮತ್ತು ಪೆರುವಾಯಿ ಮೊಹಿಯುದ್ದೀನ್‌ರವರ ಮಗಳಾದ ಆಸಿಯಮ್ಮ ದಂಪತಿಗಳ ನಾಲ್ಕನೇ ಮಗನಾಗಿ ಮಾಣಿ ಉಸ್ತಾದರು ಜನಿಸಿದರು.
ಮಿತ್ತೂರು ನೂರುಲ್ ಇಸ್ಲಾಂ ಮದರಸದಲ್ಲಿ ಅಬ್ದು ಮುಕ್ರಿಕ ಎಂಬ ಕೋಯಮ್ಮ ಹಾಜಿಯವರಿಂದ ಪ್ರಾಥಮಿಕ ಶಿಕ್ಷಣ ಪಡೆದವರು ನಂತರ ಸಿ.ಪಿ ಮುಹಮ್ಮದ್ ಮುಸ್ಲಿಯಾರ್ (ನ:ಮ), ಮಂಜನಾಡಿ ಅಬ್ದುಲ್ಲಾ ಮುಸ್ಲಿಯಾರ್ (ನ:ಮ), ಸಜಿಪ ಕೋಟ ಅಬ್ದುಲ್ ಖಾದರ್ ಮುಸ್ಲಿಯಾರ್ (ನ:ಮ) ಮತ್ತು ತಾಜುಲ್ ಉಲಮಾ ಉಳ್ಳಾಲ ತಂಙಳ್(ಖ.ಸಿ) ರಂತಹ ಮಹಾನರಿಂದ ಜ್ಞಾನಾರ್ಜನೆ ಮಾಡಿದ ನಂತರ ಉತ್ತರ ಪ್ರದೇಶದ ದಯೂಬಂದ್ ದಾರುಲ್-ಉಲೂಮ್‌ನಿಂದ ಪದವಿ ಪಡೆದರು.
ಉಳ್ಳಾಲದ ಮುದರ್ರಿಸ್ ಆಗಿದ್ದ ಚೆರುಕುಂಞಿ ಕೋಯ ತಂಙಳ್, ಮಂಜನಾಡಿ ಅಲ್ ಮದೀನಾ ಇಸ್ಲಾಮಿಕ್ ಕಂಪ್ಲೆಕ್ಸ್‌ನ ಸಂಸ್ಥಾಪಕರಾದ ಮರ್ಹೂಂ ಅಬ್ಬಾಸ್ ಉಸ್ತಾದ್ (ನ.ಮ) ಮೊದಲಾದವರ ಸಹಪಾಠಿಯಾಗಿದ್ದರು.
1971 ರಿಂದಲೇ ದರ್ಸ್ ನಡೆಸಲಾರಂಭಿಸಿದ ಉಸ್ತಾದರು ಸೂರಿಂಜೆ, ಪಾಣೆಮಂಗಳೂರು ಮತ್ತು ಕರ್ನಾಟಕ ಕೇರಳದ ಗಡಿ ಪ್ರದೇಶವಾದ ಮಚ್ಚಂಪಾಡಿ ಮುಂತಾದೆಡೆ ದರ್ಸ್ ನಡೆಸಿದ ನಂತರ 1991ರಲ್ಲಿ ದಾರುಲ್ ಇರ್ಶಾದ್ ಎಜುಕೇಷನ್ ಕಾಂಪ್ಲೆಕ್ಸ್ ಅನ್ನು ಸ್ಥಾಪಿಸಿದರು.
ಧಾರ್ಮಿಕ ಶಿಕ್ಷಣಕ್ಕೆ ಕೇರಳದಂತೆ ಹೆಚ್ಚಿನ ಸೌಕರ್ಯವಿಲ್ಲದಿರುವುದನ್ನು ಮನಗಂಡ ಉಸ್ತಾದರು ಮೊದಲಿಗೆ ಉಸ್ತಾದರ ಮನೆಯ ಸಮೀಪದ ಮಸೀದಿಯಲ್ಲಿ ಜ್ಞಾನದಾಹಿಗಳಿಗೆ ಗುಣಾತ್ಮಕವಾದ ಹೆಚ್ಚುವರಿ ದೀನೀ ಶಿಕ್ಷಣವನ್ನು ಪಡೆಯಬಲ್ಲಂತಹ ಗ್ರಂಥಾಲಯವನ್ನು ಆರಂಭಿಸಿದರು.
ಅನಂತರ ಅದು ದಾರುಲ್ ಇರ್ಶಾದ್ ಕ್ಯಾಂಪಸ್ ಆಗಿ ಬದಲಾಯಿತು. ಆ ಸಮಯದಲ್ಲಿ ಮಾಣಿಯಿಂದ ನಾಲ್ಕಾರು ಕಿಲೋಮೀಟರ್ ದೂರದ ಮಿತ್ತೂರಿನಲ್ಲಿ ದಾರುಲ್ ಇರ್ಶಾದ್ ಎಂಬ ಕಾಲೇಜ್ ಸ್ಥಾಪಿಸಿ ಅಜ್ಮೀರ್ ಖ್ವಾಜಾ ಮುಯಿನುದ್ದೀನ್ ಚಿಸ್ತಿ(ರ) ರವರ ಹೆಸರಿನಲ್ಲಿ ಅಲ್ ಮುಈನಿ ಎಂಬ ಪದವಿಯನ್ನು ಪ್ರಧಾನಿಸುವ ದಅ್‌ವ ಕಾಲೇಜ್ ಅನ್ನು ಸ್ಥಾಪಿಸಿದರು.
ಲಕ್ಷಾಂತರ ರೂಪಾಯಿ ಮೌಲ್ಯದ ಗ್ರಂಥಗಳನ್ನೊಳಗೊಂಡ ಅಲ್ ಮಕ್ತಬತುಲ್ ಗಝಾಲಿಯ್ಯ ಎಂಬ ಗ್ರಂಥಾಲಯದ ಜೊತೆಗೆ ಇರ್ಷಾದಿಯ್ಯ ಹಿಫ್ಲುಲ್ ಕುರ್ಆನ್ ಕಾಲೇಜು ಮತ್ತು ಪದವಿಪೂರ್ವ ಕಾಲೇಜುಗಳು ಈ ಕ್ಯಾಂಪಸ್ಸಿನಲ್ಲಿ ಕಾರ್ಯಾಚರಿಸುತ್ತಿವೆ.
ಉತ್ತರ ಕರ್ನಾಟಕದ ಹಲವೆಡೆ ದೀನಿ ದಅ್‌ವಾ ನಡೆಸುತ್ತಿರುವ ಅನೇಕ ವಿದ್ವಾಂಸರುಗಳ ಉಸ್ತಾದರಾಗಿರುವ ಮಹಾನರು ಕರ್ನಾಟಕ ಜಮ್ ಇಯತ್ತುಲ್ ಉಲಮಾದ ಕಾರ್ಯದರ್ಶಿಗಳೂ ಆಗಿದ್ದಾರೆ.
ಶೈಖುನಾ ಎಪಿ ಉಸ್ತಾದ್, ಇಬ್ರಾಹಿಂ ಖಲೀಲುಲ್ ಬುಖಾರಿ ತಂಙಳ್, ಶೈಖುನಾ ಪೊನ್ಮಳ ಉಸ್ತಾದ್, ಮತ್ತು ಪೇರೋಡ್ ಉಸ್ತಾಡ್ ಮುಂತಾದ ವಿದ್ವಾಂಸರೊಂದಿಗೆ ನಿಕಟ ಸ್ನೇಹ ಬಾಂಧವ್ಯ ಹೊಂದಿರುವ ಮಾಣಿ ಉಸ್ತಾದರು ವಿನಯಾನ್ವಿತ ಸ್ವಭಾವ ಮೈಗೂಡಿಸಿಕೊಂಡವರು.
ಅಜ್ಮೀರಿನ ಖ್ವಾಜಾ ಮೊಯಿನುದ್ದೀನ್ ಚಿಸ್ತಿ (ರ) ರವರೊಂದಿಗೆ ಆಧ್ಯಾತ್ಮಿಕವಾಗಿ ನಿಕಟ ಸಂಪರ್ಕ ಹೊಂದಿರುವ ಶೈಖುನಾ ಮಾಣಿ ಉಸ್ತಾದರು ಅಜ್ಮೀರಿಗೆ ನಿರಂತರವಾಗಿ ಭೇಟಿ ನೀಡುತ್ತಿರುತ್ತಾರಲ್ಲದೆ ಉಸ್ತಾದರ ಎಲ್ಲಾ ಕೆಲಸಕಾರ್ಯಗಳಲ್ಲೂ ಅಜ್ಮೀರ್‌ನೊಂದಿಗಿನ ಆ ಬಾಂಧವ್ಯದ ಬೆಸುಗೆ ಇರುತ್ತದೆ.
ಔಲಿಯಾಗಳನ್ನು ಅಪಾರವಾಗಿ ಪ್ರೀತಿಸುವ ಮಾಣಿ ಉಸ್ತಾದರು, ಕೈಗೊಳ್ಳುವ ತೀರ್ಮಾನಗಳು ವಿಸ್ಮಯಕರವಾದುದು ಎನ್ನುವುದು ಅವರನ್ನು ಹತ್ತಿರದಿಂದ ಬಲ್ಲವರ ಅಭಿಪ್ರಾಯ.
ಇಲಾಹಿ ಸ್ಮರಣೆಯನ್ನು ಮೈಗೂಡಿಸಿಕೊಂಡಿರುವ ಉಸ್ತಾದರು ಎಂದೂ ಆಧುನಿಕ ಜೀವನ ಶೈಲಿಗೆ ಮಾರು ಹೋದವರಲ್ಲ. ಬದಲಾಗಿ ಹಳೆಯ ಮನೆಯಲ್ಲಿ ಸಾಮಾನ್ಯರಂತೆ ಜೀವನ ಸಾಗಿಸುತ್ತಾ ದೀನೀ ಸೇವೆಗೆ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿರುವ ಉಸ್ತಾದರಿಗೆ ಸರ್ವಶಕ್ತನಾದ ಅಲ್ಲಾಹನು ಆಫಿಯತ್‌ನಿಂದ ಕೂಡಿದ ದೀರ್ಘಾಯಸ್ಸನ್ನು ಕರುಣಿಸಿ ಅನುಗ್ರಹಿಸುವುದರ ಜೊತೆಗೆ ನೂರ್ಕಾಲ ಸಮುದಾಯಕ್ಕೆ ನೇತೃತ್ವ ನೀಡುವ ಸೌಭಾಗ್ಯವನ್ನು ಕರುಣಿಸಿ ಅನುಗ್ರಹಿಸಲಿ ಆಮೀನ್.