janadhvani

Kannada Online News Paper

ಪೌರತ್ವ ವಿಭಜನೆ: ದೇಶಾದ್ಯಂತ ಪ್ರತಿಭಟನೆಯ ಕಿಚ್ಚು-ದೆಹಲಿಯ 7 ಮೆಟ್ರೋ ನಿಲ್ದಾಣಗಳು ಬಂದ್

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದಾದ್ಯಂತ ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದು, ವಿವಿಧ ವಿದ್ಯಾರ್ಥಿ ಸಂಘಟನೆಗಳು ಬೀದಿಗಿಳಿದು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. ಪ್ರತಿಭಟನೆ ತೀವ್ರಗೊಳ್ಳುವ ಹಿನ್ನೆಲೆಯಲ್ಲಿ ದೆಹಲಿಯ 7 ಮೆಟ್ರೋ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

ದೆಹಲಿ ವಿವಿಧ ಭಾಗಗಳಲ್ಲಿ ಪ್ರತಿಭಟನೆ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಹಲವೆಡೆ ಸಂಚಾರ ದಟ್ಟಣೆ ಎದುರಾಗಿದೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ದೆಹಲಿ ಮೆಟ್ರೋ ಅಧಿಕಾರಿಗಳು, ನಗರದ 7 ಮೆಟ್ರೋ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ. ಜಾಮಿಯಾ ಮಿಲಿಯಾ ಇಸ್ಲಾಮಿಕ್, ಜಸೋಲಾ, ಲಾಲ್ ಕಿಲಾ, ಜಮಾ ಮಸೀದಿ, ಚಾಂದಿನ ಚೌಕ್ ಮತ್ತು ವಿಶ್ವಿದ್ಯಾಲಯ ನಿಲ್ದಾಣಗಳಲ್ಲಿ ರೈಲು ನಿಲ್ಲುವುದಿಲ್ಲ ಎಂದು ತಿಳಿಸಿದ್ದಾರೆ.

ಇಂದು ಮಧ್ಯಾಹ್ನ 12 ಗಂಟೆಗೆ ದೆಹಲಿಯ ಕೆಂಪುಕೋಟೆಯಿಂದ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದ್ದು, ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಳು ಕೆಂಪುಕೋಟೆ ಬಳಿ ಸೆಕ್ಷನ್ 144 ಜಾರಿ ಮಾಡಿದ್ದಾರೆಂದು ತಿಳಿದುಬಂದಿದೆ.

ಭಾರತದ ನೆರೆಯ ರಾಷ್ಟ್ರಗಳಿಂದ ಅಂದರೆ ಪಾಕಿಸ್ತಾನ, ಆಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಧರ್ಮದ ಆಧಾರದ ಮೇಲೆ ಕಿರುಕುಳ ಅನುಭವಿಸಿ ಭಾರತಕ್ಕೆ ವಲಸೆ ಬಂದಿರುವ ಮುಸ್ಲಿಮರನ್ನು ಹೊರತು ಪಡಿಸಿ 6 ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳಿಗೆ ಭಾರತದ ಪೌರತ್ವ ನೀಡುವ ಮಸೂದೆಯೇ ಪೌರತ್ವ ತಿದ್ದುಪಡಿ ಮಸೂದೆ-2019.

ಹಳೆಯ ಕಾಯ್ದೆಯಲ್ಲಿ ವಿದೇಶಿಗರು ಕಾನೂನು ಬದ್ಧವಾಗಿ ಭಾರತಕ್ಕೆ ವಲಸೆ ಬಂದು ಇಲ್ಲಿ 12 ವರ್ಷ ಅದಕ್ಕಿಂತಲೂ ಹೆಚ್ಚು ವರ್ಷ ನೆಲೆಸಿದ್ದರೆ, ಪೌರತ್ವ ಪಡೆಯಲು ಅರ್ಹರಾಗಿದ್ದರು. ಆದರೆ, ಹೊಸ ತಿದ್ದುಪಡಿ ಕಾಯ್ದೆಯಲ್ಲಿ ಭಾರತಕ್ಕೆ ಮೇಲಿನ ಮೂರು ದೇಶಗಳಿಂದ ಅಕ್ರಮವಾಗಿ ವಲಸೆ ಬಂದಿದ್ದರೂ ಇಲ್ಲಿ 6 ವರ್ಷ ವಾಸಿದ್ದರೆ ಆರು ಧರ್ಮೀಯರು ಭಾರತದ ಪೌರತ್ವ ಪಡೆಯಲು ಅರ್ಹರಾಗಿರುತ್ತಾರೆ. ಇದರ ಅನುಸಾರ 2014ರ ಡಿ.31ರ ಒಳಗೆ ಭಾರತಕ್ಕೆ ವಲಸೆ ಬಂದ ಮುಸ್ಲಿಮೇತರ ನಿರಾಶ್ರಿತರು ಭಾರತದ ಪೌರತ್ವ ಪಡೆಯಲು ಅರ್ಹರು.

ಪೌರತ್ವ ತಿದ್ದುಪಡಿ ಮಸೂದೆಯಲ್ಲಿ ಮುಸ್ಲಿಂ ಸಮುದಾಯವನ್ನು ಹೊರಗಿಟ್ಟಿರುವುದು ಅಥವಾ ಧರ್ಮದ ಆಧಾರದ ಮೇಲೆ ಪೌರತ್ವ ನೀಡುತ್ತಿರುವುದು ಈ ತಿದ್ದುಪಡಿ ವಿರೋಧಕ್ಕೆ ಮೊದಲ ಕಾರಣ. ಇದು ಸಂವಿಧಾನದ 14ನೇ ವಿಧಿಯನ್ನು ಉಲ್ಲಂಘಿಸುತ್ತದೆ. ಭಾರತದ ಜಾತ್ಯತೀತ ರಾಷ್ಟ್ರ. ಹಾಗಾಗಿ ಧರ್ಮದ ಆಧಾರದ ಮೇಲೆ ಪೌರತ್ವ ನೀಡುವುದು ಸರಿಯಲ್ಲ ಎಂದು ವಿರೋಧ ಪಕ್ಷಗಳು ಮಸೂದೆಯನ್ನು ವಿರೋಧಿಸುತ್ತಿವೆ.

ಪೌರತ್ವ ಮಸೂದೆ ಎಂದರೇನು?
ಬಾಂಗ್ಲಾದೇಶ, ಪಾಕಿಸ್ತಾನ, ಆಫ್ಘಾನಿಸ್ತಾನ ದೇಶಗಳಲ್ಲಿ ಧಾರ್ಮಿಕ ಕಿರುಕುಳ ಅನುಭವಿಸಿದ ಕಾರಣಕ್ಕೆ ಭಾರತಕ್ಕೆ ವಲಸೆ ಬಂದಿರುವ ಮುಸ್ಲಿಮೇತರರು. ಅಂದರೆ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿ ಮತ್ತು ಕ್ರೈಸ್ತರಿಗೆ ಭಾರತೀಯ ಪೌರತ್ವ ನೀಡಲು ಕೇಂದ್ರ ಸರ್ಕಾರ ಪೌರತ್ವ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಿದೆ. ಜೊತೆಗೆ ಹೀಗೆ ಪೌರತ್ವ ಪಡೆಯಲು, ವಲಸಿಗರು ಭಾರತದಲ್ಲಿ ಕನಿಷ್ಠ 11 ವರ್ಷ ನೆಲೆಸಿರಬೇಕು ಎಂಬ ನಿಯಮವನ್ನು ಸರ್ಕಾರ 6 ವರ್ಷಕ್ಕೆ ಇಳಿಸಿದೆ. ಆದರೆ, ಧರ್ಮದ ಆಧಾರದಲ್ಲಿ ಪೌರತ್ವ ನೀಡುವುದಕ್ಕೆ ಈಶಾನ್ಯ ರಾಜ್ಯಗಳ ಹಲವು ಸಂಘಟನೆಗಳು ವಿರೋಧ ಹೊಂದಿವೆ.

ಎನ್ಆರ್’ಸಿ ಎಂದರೇನು?
ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಮಸೂದೆಯು, ದೇಶದಲ್ಲಿ ನೆಲೆಸಿರುವ ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕುವ ಉದ್ದೇಶ ಹೊಂದಿದೆ. ಮೊದಲ ಹಂತದಲ್ಲಿ ಸುಪ್ರೀಂಕೋರ್ಟ್ ಸೂಚನೆ ಅನ್ವಯ ಇದನ್ನು ಅಸ್ಸಾಂನಲ್ಲಿ ಜಾರಿಗೆ ತರಲಾಗಿತ್ತು. ಅಲ್ಲಿ ಇತ್ತೀಚೆಗೆ ಪ್ರಕಟಿಸಲಾದ ಅಂತಿಮ ವರದಿ ಅನ್ವಯ, 30 ಲಕ್ಷ ಜನರನ್ನು ಅಕ್ರಮ ನಿವಾಸಿಗಳು ಎಂದು ಘೋಷಿಸಲಾಗಿದೆ. ಆದರೆ, ಇವರಿಗೆಲ್ಲಾ ವಿದೇಶಿಗರ ಮೇಲ್ಮನವಿ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವ ಹಕ್ಕನ್ನು ಕಲ್ಪಿಸಲಾಗಿದೆ.

error: Content is protected !! Not allowed copy content from janadhvani.com