ನವದೆಹಲಿ (ಡಿ.18): ದೇಶದೆಲ್ಲೆಡೆ ಕಿಚ್ಚು ಹೊತ್ತಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಗೆ ತಡೆ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ವಿವಾದಾತ್ಮಕ ಹೊಸ ಪೌರತ್ವ ಕಾನೂನಿನ ಸಿಂಧುತ್ವವನ್ನು ಪ್ರಶ್ನಿಸಿ 60 ಕ್ಕೂ ಹೆಚ್ಚು ಮನವಿಗಳಿಗೆ ಸ್ಪಂದಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ನೋಟಿಸ್ ನೀಡಿದೆ.
ಕಾಯ್ದೆ ಕುರಿತು ವಿಚಾರಣೆ ನಡೆಸಿದ ಮುಖ್ಯನ್ಯಾಯಾಮೂರ್ತಿ ಎಸ್.ಎ ಬೋಬ್ಡೆ, ನ್ಯಾ. ಬಿಆರ್ ಗವಾಯಿ ಮತ್ತು ಸೂರ್ಯ ಕಾಂತ್ ತ್ರಿಸದಸ್ಯ ಪೀಠ, ಕಾಯ್ದೆ ತಡೆ ನೀಡಲು ಸಾಧ್ಯವಿಲ್ಲ. ಈ ಕುರಿತು ಜನವರಿ ಎರಡನೇ ವಾರದೊಳಗೆ ಪ್ರತಿಕ್ರಿಯೆ ಸಲ್ಲಿಸಲು ಕೇಂದ್ರಕ್ಕೆ ಕೇಳಿದೆ.
ಈ ಕಾಯ್ದೆಯನ್ನು ತಡೆಹಿಡಿಯಬೇಕೇ ಎಂದು ನಾವು ನೋಡಬೇಕಾಗಿದೆ ಹಾಗೂ ಈ ವಿಷಯದಲ್ಲಿ ಮುಂದಿನ ವಿಚಾರಣೆಯ ದಿನಾಂಕವಾಗಿ ಜನವರಿ 22ಕ್ಕೆ ವಿಚಾರಣೆ ದಿನಾಂಕ ನಿಗದಿಸಲಾಗಿದೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನೂತನ ಪೌರತ್ವ ತಿದ್ದುಪಡಿ ಮಸೂದೆಯು ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಸುಪ್ರೀಂಕೋರ್ಟ್ಗೆ ಕಾಂಗ್ರೆಸ್ ಕೂಡ ಅರ್ಜಿ ದಾಖಲಿಸಿತ್ತು.ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ವಿಪಕ್ಷಗಳು, ನಾಗರಿಕ ಸಮಾಜದ ಸದಸ್ಯರು ಈ ಕಾಯ್ದೆ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಇಲ್ಲಿಯವರೆಗೆ ಒಟ್ಟು 60 ಅರ್ಜಿಗಳು ಸುಪ್ರೀಂಕೋರ್ಟ್ಗೆ ಸಲ್ಲಿಕೆಯಾಗಿದೆ.
ಭಾರತದ ನೆರೆಯ ರಾಷ್ಟ್ರಗಳಿಂದ ಅಂದರೆ ಪಾಕಿಸ್ತಾನ, ಆಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಧರ್ಮದ ಆಧಾರದ ಮೇಲೆ ಕಿರುಕುಳ ಅನುಭವಿಸಿ ಭಾರತಕ್ಕೆ ವಲಸೆ ಬಹಂದಿರುವ 6 ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳಿಗೆ ಭಾರತದ ಪೌರತ್ವ ನೀಡುವ ಮಸೂದೆಯೇ ಪೌರತ್ವ ತಿದ್ದುಪಡಿ ಮಸೂದೆ-2019.
ಹಳೆಯ ಕಾಯ್ದೆಯಲ್ಲಿ ವಿದೇಶಿಗರು ಕಾನೂನು ಬದ್ಧವಾಗಿ ಭಾರತಕ್ಕೆ ವಲಸೆ ಬಂದು ಇಲ್ಲಿ 12 ವರ್ಷ ಅದಕ್ಕಿಂತಲೂ ಹೆಚ್ಚು ವರ್ಷ ನೆಲೆಸಿದ್ದರೆ, ಪೌರತ್ವ ಪಡೆಯಲು ಅರ್ಹರಾಗಿದ್ದರು. ಆದರೆ, ಹೊಸ ತಿದ್ದುಪಡಿ ಕಾಯ್ದೆಯಲ್ಲಿ ಭಾರತಕ್ಕೆ ಮೇಲಿನ ಮೂರು ದೇಶಗಳಿಂದ ಅಕ್ರಮವಾಗಿ ವಲಸೆ ಬಂದಿದ್ದರೂ ಇಲ್ಲಿ 6 ವರ್ಷ ವಾಸಿದ್ದರೆ ಆರು ಧರ್ಮೀಯರು ಭಾರತದ ಪೌರತ್ವ ಪಡೆಯಲು ಅರ್ಹರಾಗಿರುತ್ತಾರೆ. ಇದರ ಅನುಸಾರ 2014ರ ಡಿ.31ರ ಒಳಗೆ ಭಾರತಕ್ಕೆ ವಲಸೆ ಬಂದ ಮುಸ್ಲಿಮೇತರ ನಿರಾಶ್ರಿತರು ಭಾರತದ ಪೌರತ್ವ ಪಡೆಯಲು ಅರ್ಹರು.
ಪೌರತ್ವ ತಿದ್ದುಪಡಿ ಮಸೂದೆಯಲ್ಲಿ ಮುಸ್ಲಿಂ ಸಮುದಾಯವನ್ನು ಹೊರಗಿಟ್ಟಿರುವುದು ಅಥವಾ ಧರ್ಮದ ಆಧಾರದ ಮೇಲೆ ಪೌರತ್ವ ನೀಡುತ್ತಿರುವುದು ಈ ತಿದ್ದುಪಡಿ ವಿರೋಧಕ್ಕೆ ಮೊದಲ ಕಾರಣ. ಇದು ಸಂವಿಧಾನದ 14ನೇ ವಿಧಿಯನ್ನು ಉಲ್ಲಂಘಿಸುತ್ತದೆ. ಭಾರತದ ಜಾತ್ಯತೀತ ರಾಷ್ಟ್ರ. ಹಾಗಾಗಿ ಧರ್ಮದ ಆಧಾರದ ಮೇಲೆ ಪೌರತ್ವ ನೀಡುವುದು ಸರಿಯಲ್ಲ ಎಂದು ವಿರೋಧ ಪಕ್ಷಗಳು ಮಸೂದೆಯನ್ನು ವಿರೋಧಿಸುತ್ತಿವೆ.
ಹಾಗೆಯೇ ಕೇಂದ್ರ ಸರ್ಕಾರ ನೆರೆಯ ರಾಷ್ಟ್ರಗಳಿಂದ ಕಿರುಕುಳ ಅನುಭವಿಸಿ ವಲಸೆ ಬಂದ ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಪೌರತ್ವ ನೀಡುತ್ತಿದ್ದೇವೆಂದು ಹೇಳುತ್ತಿದೆ. ಆದರೆ, ಈ ತಿದ್ದುಪಡಿ ಮಸೂದೆಯು ಎಲ್ಲಾ ಅಲ್ಪ ಸಂಖ್ಯಾತ ಸಮುದಾಯಗಳನ್ನು ಮತ್ತು ಎಲ್ಲಾ ನೆರೆ ರಾಷ್ಟ್ರಗಳನ್ನು ಒಳಗೊಂಡಿಲ್ಲ. ಪಾಕಿಸ್ತಾನದಲ್ಲಿ ಅಹ್ಮದಿಯೂ ಮತ್ತು ಶಿಯಾ ಮುಸ್ಲಿಂ ಸಮುದಾಯಗಳೂ ತಾರತಮ್ಯವನ್ನು ಅನುಭವಿಸುತ್ತಿವೆ. ಬರ್ಮಾದಲ್ಲಿ ರೊಹಿಂಗ್ಯಾ ಮುಸ್ಲಿಮರು ಮತ್ತು ಹಿಂದೂಗಳು ಕಿರುಕುಳ ಅನುಭವಿಸುತ್ತಿದ್ದಾರೆ. ಶ್ರೀಲಂಕಾದಲ್ಲಿ ಹಿಂದುಗಳು, ಕ್ರಿಶ್ಚಿಯನ್ನರು ಮತ್ತು ತಮಿಳರು ತಾರತಮ್ಯವನ್ನು ಅನುಭವಿಸುತ್ತಿದ್ದಾರೆಂಬುದು ಮತ್ತೊಂದು ಬದಿಯ ವಾದವಾಗಿದೆ.