ರಾಂಚಿ, ಡಿ.15: ಪೌರತ್ವ ತಿದ್ದುಪಡಿ ಮಸೂದೆಯು ಕಾಯ್ದೆಯಾಗಿ ಬದಲಾದ ನಂತರ ಉದ್ಭವಿಸಿರುವ ಭಾರೀ ಪ್ರತಿಭಟನೆಗಳು ಕೇಂದ್ರ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿವೆ. ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವ ಪ್ರತಿಭಟನೆಗಳು ಒಂದೆಡೆಯಾದರೆ, ಇನ್ನೊಂದೆಡೆ ದೇಶ-ವಿದೇಶದ ಗಣ್ಯರು ಸೇರಿದಂತೆ ಬಿಜೆಪಿಯ ಮಿತ್ರಪಕ್ಷಗಳೇ ಕಾಯ್ದೆಯ ವಿರುದ್ಧ ಮಾತನಾಡಲು ಶುರುಮಾಡಿವೆ.
ಎಲ್ಲಕ್ಕಿಂತ ಹೆಚ್ಚಾಗಿ ಬಿಜೆಪಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿರು ಈಶಾನ್ಯ ಭಾರತದಲ್ಲಿ ಪ್ರತಿರೋಧ ಮುಗಿಲು ಮುಟ್ಟಿದೆ. ಅಸ್ಸಾಂನಲ್ಲಿ ಅಧಿಕಾರ ಹಂಚಿಕೊಂಡಿರುವ ಬಿಜೆಪಿಯ ಮಿತ್ರಪಕ್ಷ ಎಜಿಪಿ ಕಾಯ್ದೆ ವಿರೋಧಿಸಿ ಸುಪ್ರೀಂ ಮೆಟ್ಟಿಲೇರುವ ಸೂಚನೆ ನೀಡಿದೆ. ಬಿಜೆಪಿಯ ಮುಖಂಡರು ಸರಣಿ ರಾಜೀನಾಮೆ ನೀಡುತ್ತಿದ್ದಾರೆ. ಇದೆಲ್ಲವೂ ಅಮಿತ್ ಶಾ ಮತ್ತು ನರೇಂದ್ರ ಮೋದಿಯವರನ್ನು ಕಂಗೆಡಿಸಿದೆ. ಹಾಗಾಗಿ ಗೃಹ ಸಚಿವ ಅಮಿತ್ ಶಾ ಕಾಯ್ದೆಯಲ್ಲಿ ಬದಲಾವಣೆ ತರುವುದಾಗಿ ಸುಳಿವು ನೀಡಿದ್ದಾರೆ.
ಪೌರತ್ವ ತಿದ್ದುಪಡಿ ಕಾನೂನು ಜಾರಿಯಾದ ನಂತರ ತಮ್ಮ ಮೊದಲ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, “ಮೇಘಾಲಯ ಮುಖ್ಯಮಂತ್ರಿ ಕೊರ್ನಾಡ್ ಸಂಗ್ಮಾ ಮತ್ತು ಸಂಪುಟ ಸಚಿವರು ಶುಕ್ರವಾರ, ರಾಜ್ಯಗಳಿಗೆ ಎದುರಾಗಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅಂಥ ಯಾವ ಸಮಸ್ಯೆಯೂ ಇಲ್ಲ ಎಂದು ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದೇನೆ. ಕಾಯ್ದೆಯಲ್ಲಿ ಕೆಲ ಬದಲಾವಣೆಗಳು ಆಗಲೇಬೇಕು ಎಂದು ಒತ್ತಡ ತಂದಾಗ, ಕ್ರಿಸ್‌ಮಸ್ ಬಳಿಕ ಭೇಟಿಯಾಗಲು ಸೂಚಿಸಿದ್ದೇನೆ. ಈ ಸಂಬಂಧ ರಚನಾತ್ಮಕ ಚರ್ಚೆ ನಡೆಸಿ ಮೇಘಾಲಯದ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದ್ದೇನೆ” ಎಂದು ಸ್ಪಷ್ಟಪಡಿಸಿದರು.
ನಾವು ಇದರ ಬಗ್ಗೆ ಮಾತನಾಡುತ್ತೇವೆ, ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ (ಸಿಎಎ) ಕೆಲವು ಬದಲಾವಣೆಗಳಾಗಬಹುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಅಸ್ಸಾಂ ಮತ್ತು ಈಶಾನ್ಯದ ಇತರ ರಾಜ್ಯಗಳ ಜನರಿಗೆ ಅವರ ಸಂಸ್ಕೃತಿ, ಭಾಷೆ, ಸಾಮಾಜಿಕ ಗುರುತು ಮತ್ತು ರಾಜಕೀಯ ಹಕ್ಕುಗಳ ಮೇಲೆ ದುಷ್ಪರಿಣಾಮಗಳು ಬೀರುವುದಿಲ್ಲ ಎಂದು ಭರವಸೆ ನೀಡಲು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
“ಈಶಾನ್ಯ ರಾಜ್ಯದ ಜನರನ್ನು ರಕ್ಷಿಸುವುದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸರ್ಕಾರದ ಜವಾಬ್ದಾರಿಯಾಗಿದೆ” ಎಂದು ಅವರು ಜಾರ್ಖಂಡ್‌ನ ಗಿರಿಡಿಹ್‌ನಲ್ಲಿ ಶನಿವಾರ ನಡೆದ ಚುನಾವಣಾ ರ್‍ಯಾಲಿಯಲ್ಲಿ ಹೇಳಿದ್ದಾರೆ.
ಏನೇ ಆದರೂ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದೇಶಾದ್ಯಂತ ಹೋರಾಟ ನಡೆಸುತ್ತಿರುವ ಜನರಿಗೆ ಕೇಂದ್ರ ಸರ್ಕಾರ ಸ್ವಲ್ಪ ಮಟ್ಟಿಗೆ ಮಣಿದ ಹಾಗೆ ಕಾಣುತ್ತಿದೆ. ಪ್ರತಿಭಟನೆಗಳು ಮುಂದುವರಿದಿದ್ದು ಕೇಂದ್ರ ಸರ್ಕಾರ ಏನು ಮಾಡಲಿದೆ ಎಂಬುದು ಸ್ವಲ್ಪ ದಿನದಲ್ಲಿಯೇ ಗೊತ್ತಾಗಲಿದೆ.






