janadhvani

Kannada Online News Paper

ಶಾಸನವನ್ನು ಹಿಂಪಡೆಯದಿದ್ದರೆ ಈಶಾನ್ಯ ಭಾರತ ಹೊತ್ತಿ ಉರಿಯಲಿದೆ- ಪ್ರಫುಲ್ಲ ಕುಮಾರ ಮಹಾಂತ

ಗುವಾಹಟಿ: ವಿದ್ಯಾರ್ಥಿ ಚಳವಳಿ ಮೂಲಕ ರಾಜಕೀಯ ಪ್ರವರ್ಧಮಾನಕ್ಕೆ ಬಂದ ಪ್ರಫುಲ್ಲ ಕುಮಾರ ಮಹಾಂತ ಅಸ್ಸಾಂನಲ್ಲಿಎರಡು ಅವಧಿಗೆ ಮುಖ್ಯಮಂತ್ರಿಯಾಗಿದ್ದವರು. ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿಯ ಬಹಳ ಹಳೆಯ ಮತ್ತು ದೀರ್ಘಕಾಲದ ಮಿತ್ರಪಕ್ಷ ಎಂದರೆ ಅದು ಮಹಾಂತ ಅವರು ಸ್ಥಾಪಿಸಿದ ಅಸ್ಸಾಂ ಗಣ ಪರಿಷತ್‌ (ಎಜಿಪಿ).

ಅಕ್ರಮವಾಗಿ ನುಸುಳಿರುವ ಬಾಂಗ್ಲಾದೇಶಿ ಪ್ರಜೆಗಳನ್ನು ದೇಶದಿಂದ ಓಡಿಸಬೇಕು ಎಂಬುದೇ ಮಹಾಂತ ನೇತೃತ್ವದ ಪಕ್ಷ ನಡೆಸಿದ ಸುದೀರ್ಘ ವಿದ್ಯಾರ್ಥಿ ಚಳವಳಿಯ ಪ್ರಮುಖ ಬೇಡಿಕೆಯಾಗಿತ್ತು. ಈಗ ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ವಿಧೇಯಕವನ್ನು ಎಜಿಪಿ ಬಹಿರಂಗವಾಗಿಯೇ ವಿರೋಧಿಸಿರುವುದು ಮಾತ್ರವಲ್ಲ, ಸರಕಾರ ಈ ಶಾಸನವನ್ನು ಹಿಂಪಡೆಯದಿದ್ದರೆ ಈಶಾನ್ಯ ಭಾರತ ಹೊತ್ತಿ ಉರಿಯಲಿದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

ಸುದ್ದಿಸಂಸ್ಥೆಗೆ ಅವರು ನೀಡಿದ ಸಂದರ್ಶನದ ಆಯ್ದ ಭಾಗ:
ಪೌರತ್ವ ತಿದ್ದುಪಡಿ ವಿಧೇಯಕದ ವಿರುದ್ಧ ಈಶಾನ್ಯ ಭಾರತದಲ್ಲಿ ಇಷ್ಟು ಪ್ರತಿರೋಧವೇಕೆ?
ಸಂಸತ್‌ನ ಉಭಯ ಸದನಗಳಲ್ಲಿ ಅಂಗೀಕಾರಗೊಂಡಿರುವ ವಿಧೇಯಕ ರಾಷ್ಟ್ರಪತಿಯವರ ಅಂಕಿತ ಪಡೆದು ಕಾಯಿದೆಯಾಗಿ ಜಾರಿಗೆ ಬಂದಿದೆ. ಈಶಾನ್ಯ ಭಾರತದ ಜನರಿಗೆ ಈಗ ಅಸ್ಮಿತೆಯ ಪ್ರಶ್ನೆ ಎದುರಾಗಿದೆ. ಅಸ್ಸಾಂ ಮತ್ತು ಈಶಾನ್ಯ ಭಾರತದ ಮೂಲ ಪ್ರಜೆಗಳು ತಮ್ಮ ಸಂಕೀರ್ಣ ಸಂಸ್ಕೃತಿಗೆ ಧಕ್ಕೆ ಒದಗಲಿದೆ ಎಂಬ ಆತಂಕ ಎದುರಿಸುತ್ತಿದ್ದಾರೆ. ಪೌರತ್ವ ತಿದ್ದುಪಡಿ ಕಾಯಿದೆಯು ಈ ವಲಯದಲ್ಲಿ ಅಕ್ರಮ ವಿದೇಶೀಯರು ನೆಲೆಸಲು ಮಹಾದ್ವಾರವನ್ನು ತೆರೆದಂತೆ ಆಗುತ್ತದೆ. ಹೀಗಾಗಿ ನಮ್ಮ ಕೊನೆಯ ಉಸಿರು ಇರುವವರೆಗೂ ಕಾಯಿದೆ ವಿರುದ್ಧ ಹೋರಾಡುತ್ತೇವೆ.

ಅಕ್ರಮ ವಲಸಿಗರನ್ನು ಹೊರಹಾಕಲು ಈ ಕಾಯಿದೆ ನೆರವಾಗುವುದಿಲ್ಲವೆ?

ಇಲ್ಲ, ಅದು ಕಾಯಿದೆಯ ಮೂಲ ಆಶಯವೇ ಅಲ್ಲ. ಹಿಂದೂ ಮತ್ತು ಮುಸ್ಲಿಂರನ್ನು ಒಡೆದು ಆಳುವುದೇ ಕಾಯಿದೆಯ ನಿಜವಾದ ಉದ್ದೇಶ. ಕೇಂದ್ರ ಗೃಹ ಸಚಿವರು ಇದರ ಗಂಭೀರತೆಯನ್ನು ಅರ್ಥ ಮಡಿಕೊಳ್ಳುವಲ್ಲಿ ವಿಫಲವಾದಂತೆ ತೋರುತ್ತದೆ. ಬಹುಮತ ಇದೆ ಎನ್ನುವುದೇ ಪ್ರಜಾಪ್ರಭುತ್ವದ ತಿರುಳಲ್ಲ. ಈಶಾನ್ಯ ಭಾರತ ಎಲ್ಲಾ ಸಂಸ್ಕೃತಿಗಳ ಜತೆ ಮುಕ್ತವಾಗಿ ಬೆರೆಯುತ್ತದೆ. ಬಿಜೆಪಿ ಅದಕ್ಕೆ ಧಕ್ಕೆ ತರಲು ಹೊರಟಿದೆ.

ನಿಮ್ಮ ಪಕ್ಷದ ಕೆಲವು ನಾಯಕರು ಪೌರತ್ವ ತಿದ್ದುಪಡಿ ವಿಧೇಯಕ ಸಮರ್ಥಿಸಿದ್ದಾರಲ್ಲವೆ?

ಎಜಿಪಿಯ ಕೆಲವು ನಾಯಕರು ಕೇಂದ್ರ ಸರಕಾರದ ತೀರ್ಮಾನವನ್ನು ಸಮರ್ಥಿಸಿಕೊಂಡಿರುವುದು ನಿಜ. ಅದು ಪಕ್ಷದ ಅಭಿಪ್ರಾಯವಲ್ಲ. ಪಕ್ಷದ ನಿಲುವು ಖಚಿತವಾಗಿದೆ ಮತ್ತು ಪೌರತ್ವ ತಿದ್ದುಪಡಿ ಕಾಯಿದೆ ಜಾರಿ ವಿರುದ್ಧವಾಗಿದೆ.

ಆದರೂ ನಿಮ್ಮ ಪಕ್ಷ ಬಿಜೆಪಿ ಜತೆ ಸಖ್ಯ ಉಳಿಸಿಕೊಂಡಿದೆಯಲ್ಲ?

ಈ ಕಾರಣದಿಂದಲೇ ಪಕ್ಷದ ಕೆಲವರು ರಾಜೀನಾಮೆ ನೀಡಿದ್ದಾರೆ. ವಿಧೇಯಕದ ಕಾರಣದಿಂದ ಬಿಜೆಪಿ ಜತೆಗಿನ ಮೈತ್ರಿ ಕಡಿದುಕೊಳ್ಳುವ ಅಗತ್ಯ ಕಾಣದು. ವಾಸ್ತವವಾಗಿ ಹೇಳುವುದಿದ್ದರೆ ಅಕ್ರಮ ಬಾಂಗ್ಲಾವಲಸಿಗರನ್ನು ಹೊರದಬ್ಬಬೇಕೆಂದು ನನ್ನ ನೇತೃತ್ವದಲ್ಲಿ ನಡೆದ ಚಳವಳಿಗಿಂತ ಪರಿಸ್ಥಿತಿ ಈಗ ಗಂಭೀರವಾಗಿದೆ. ಏಕೆಂದರೆ ವ್ಯವಸ್ಥಿತವಾಗಿ ಸಾಮಾಜಿಕ ಧ್ರುವೀಕರಣ ನಡೆದಿದೆ.

ಹಾಗಿದ್ದರೆ ಈ ವಿಚಾರದಲ್ಲಿನಿಮ್ಮ ಮುಂದಿನ ನಡೆ ಏನು?

ಕೇಂದ್ರ ಸರಕಾರಕ್ಕೆ ವಾಸ್ತವ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತೇವೆ. ಕಾಯಿದೆ ಜಾರಿ ವಿರುದ್ಧ ಹೋರಾಟ ಮುಂದುವರಿಯಲಿದೆ. ಕೇಂದ್ರ ಸರಕಾರ ಸಕಾಲದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳದಿದ್ದರೆ ಈಶಾನ್ಯ ಭಾರತಕ್ಕೆ ಊಹಿಸಿಕೊಳ್ಳಲೂ ಸಾಧ್ಯವಾಗದಷ್ಟು ಘಾಸಿ ಉಂಟಾಗುತ್ತದೆ. ಒಂದೊಮ್ಮೆ ಸರಕಾರ ಮಣಿಯದಿದ್ದರೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ.

(ಪ್ರಫುಲ್ಲಕುಮಾರ ಮಹಾಂತ ಅವರು 1985ರಿಂದ 1991 ಹಾಗೂ 1991ರಿಂದ 1996ರರ ಅವಧಿಯಲ್ಲಿಅಸ್ಸಾಂ ಮುಖ್ಯಮಂತ್ರಿಯಾಗಿದ್ದರು. ಅಧಿಕಾರಕ್ಕೆ ಬರುವುದಕ್ಕೂ ಮುನ್ನ ಅಂದರೆ 1979ರಿಂದ 1985ರವರೆಗೆ ಎಜಿಪಿ ನಡೆಸಿದ ಚಳವಳಿಯಲ್ಲಿ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದರು.)

error: Content is protected !! Not allowed copy content from janadhvani.com