ನವದೆಹಲಿ,ನ.23: ಅಮೆರಿಕಾ ಸದನದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ಜಮ್ಮು-ಕಾಶ್ಮೀರದ ಪ್ರಸ್ತುತ ಸ್ಥಿತಿಗತಿ ಬಗ್ಗೆ ಯುಎಸ್ ಕಾಂಗ್ರೆಸ್ ನಿರ್ಣಯ ಮಂಡಿಸಿದೆ. ಜಮ್ಮು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ. ಹಾಗಾಗಿ ಈ ವಿವಾದಿತ ಪ್ರದೇಶದ ಸಮಸ್ಯೆಯನ್ನು ಭಾರತ ಮತ್ತು ಪಾಕಿಸ್ತಾನ ಮಾತುಕತೆ ಮೂಲಕ ಇತ್ಯರ್ಥ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದೆ. ಯುಎಸ್ ಕಾಂಗ್ರೆಸ್ ಸದಸ್ಯರಾದ ಯರಾದ ರಶೀದಾ ತ್ಲಲಿಬ್ ಮತ್ತು ಇಹಾನ್ ಒಮರ್ ಉಭಯ ದೇಶಗಳಿಗೆ ಹೀಗೆ ಕಿವಿಮಾತು ಹೇಳಿದ್ದಾರೆ.
ಇತ್ತೀಚೆಗೆ ಭಾರತ ಸರಕಾರವು ಜಮ್ಮು-ಕಾಶ್ಮೀರದ ವಿಶೇಷಾಧಿಕಾರ ರದ್ದುಗೊಳಿಸಿದ ವಿಚಾರವಾಗಿ ಮತ್ತೊಮ್ಮೆ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮ್ಮದ್ ಖುರೇಶಿ ಪತ್ರ ಬರೆದಿದ್ದರು. ವಿಶ್ವಸಂಸ್ಥೆ ಭದ್ರತಾ ಮಂಡಳಿ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟೆರ್ರೆಸ್ಗೆ ಬರೆದ ಪತ್ರದಲ್ಲಿ “370ನೇ ವಿಧಿ ರದ್ದುಗೊಳಿಸಿ ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಿಸಿದ ಭಾರತದ ಅಕ್ರಮ ಆದೇಶ ತಿರಸ್ಕರಿಸಿ” ಎಂದು ಖುರೇಷಿ ಆಗ್ರಹಿಸಿದ್ದರು.
ಜಮ್ಮು-ಕಾಶ್ಮೀರ ವಿಚಾರವನ್ನು ವಿಶ್ವಸಂಸ್ಥೆ ಮೊದಲಾದ ಅಂತಾರಾಷ್ಟ್ರೀಯ ವೇದಿಕೆಯ ಮುಂದೆ ತರಲು ಪಾಕಿಸ್ತಾನ ಮೊದಲಿಂದಲೂ ಪ್ರಯತ್ನಿಸುತ್ತಲೇ ಇದೆ. ಆದರೆ, ಜಮ್ಮು-ಕಾಶ್ಮೀರದ ವಿಶೇಷಾಧಿಕಾರವನ್ನ ಭಾರತ ಸರ್ಕಾರ ರದ್ದುಗೊಳಿಸಿದ ಬಳಿಕ ಪಾಕಿಸ್ತಾನಕ್ಕೆ ಇನ್ನಷ್ಟು ಜೋರು ಧ್ವನಿಯಲ್ಲಿ ಮಾತನಾಡಲು ಅನುವಾಗಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಈ ವಿಚಾರ ಚರ್ಚೆಯಾಗಬೇಕೆಂದು ಪಾಕಿಸ್ತಾನ ಮನವಿ ಕೂಡ ಮಾಡಿಕೊಂಡಿತು. ಅದಕ್ಕಾಗಿ ಚೀನಾದ ಮೂಲಕ ಲಾಬಿಯನ್ನೂ ಮಾಡಿಸಿತು. ಚೀನಾದ ಪ್ರಯತ್ನದಿಂದಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕೊನೆಗೂ ಕ್ಲೋಸ್ಡ್ ಡೋರ್ ಕನ್ಸಲ್ಟೇಷನ್ಸ್ ಸಭೆಯೂ ನಡೆಯಿತು.
ಗಡಿ ನಿಯಂತ್ರಣ ರೇಖೆಯಲ್ಲಿ ಪರಿಸ್ಥಿತಿ ಕೈಮೀರಿ ಹೋಗದಂತಹ ಚಟುವಟಿಕೆಗಳನ್ನ ನಡೆಸಬಾರದು. ವಿಶ್ವಸಂಸ್ಥೆ ನಿಯಮದ ಪ್ರಕಾರ ರಚನೆಯಾದ ದ್ವಿಪಕ್ಷೀಯ ಒಪ್ಪಂದದ ಆಶಯದಂತೆ ನೇರ ಮಾತುಕತೆ ಮೂಲಕ ಶಾಂತಿಯುತವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ಭಾರತ ಮತ್ತು ಪಾಕಿಸ್ಥಾನಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಈಗಾಗಲೇ ಆದೇಶಿಸಿದೆ.
ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 35ಎ ಮತ್ತು 370ನೇ ವಿಧಿಗಳನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ. ಹಾಗೆಯೇ ಕಣಿವೆ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದೆ. ಇವುಗಳಿಗೆ ಸಂಸತ್ನ ಎರಡೂ ಸದನಗಳಲ್ಲಿ ಅನುಮೋದನೆಯೂ ಸಿಕ್ಕಿದೆ. ಈಗಾಗಲೇ ರಾಷ್ಟ್ರಪತಿಗಳ ಅಂಕಿತದೊಂದಿಗೆ ಅಧಿಕೃತವಾಗಿ ಚಾಲನೆಗೆ ಬಂದಿದೆ.