ಜೈಪುರ,ನ.19: ರಾಜಸ್ಥಾನ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜಯಭೇರಿ ಭಾರಿಸಿದೆ. 49 ಸ್ಥಳೀಯ ಸಂಸ್ಥೆಗಳ ಪೈಕಿ ಕಾಂಗ್ರೆಸ್ 23 ಕಡೆ ಅಧಿಕಾರ ಹಿಡಿದರೆ, ಬಿಜೆಪಿಗೆ ಕೇವಲ 6 ಮಾತ್ರ ದಕ್ಕಿದೆ. ಉಳಿದ 20 ಕಡೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
ರಾಜಸ್ಥಾನದ 24 ಜಿಲ್ಲೆಗಳ 3 ನಗರಸಭೆ, 18 ನಗರ ಪರಿಷತ್ ಮತ್ತು 28 ನಗರಪಾಲಿಕೆಗಳಿಗೆ ಶನಿವಾರ ಮತದಾನವಾಗಿತ್ತು. ಶೇ. 71.53ರಷ್ಟು ಜನರು ಮತ ಚಲಾಯಿಸಿದ್ದರು. ಈ 49 ಸ್ಥಳೀಯ ಸಂಸ್ಥೆಗಳ ಒಟ್ಟು 2,105 ವಾರ್ಡ್ಗಳಲ್ಲಿ ಚುನಾವಣೆ ನಡೆದಿದೆ. ಇದರಲ್ಲಿ ಕಾಂಗ್ರೆಸ್ 961 ವಾರ್ಡ್ಗಳನ್ನು ಗೆದ್ದಿದೆ. ಬಿಜೆಪಿ 737ರಲ್ಲಿ ಜಯಿಸಿದೆ. 386 ಕ್ಷೇತ್ರಗಳು ಪಕ್ಷೇತರರ ಪಾಲಾಗಿವೆ. ಇನ್ನುಳಿದ ವಾರ್ಡ್ಗಳಲ್ಲಿ ಇತರೆ ಪಕ್ಷಗಳ ಅಭ್ಯರ್ಥಿಗಳು ಗೆಲುವು ಕಂಡಿದ್ಧಾರೆ.
ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶದ ವಿವರ:
ಚುನಾವಣೆ ನಡೆದ ಸಂಸ್ಥೆಗಳು: 49
ಕಾಂಗ್ರೆಸ್: 23
ಬಿಜೆಪಿ: 6
ಇತರೆ: 20
ಚುನಾವಣೆ ನಡೆದ ಒಟ್ಟು ವಾರ್ಡ್ಗಳು 2,105
ಕಾಂಗ್ರೆಸ್: 961
ಬಿಜೆಪಿ: 737
ಪಕ್ಷೇತರರು: 386
ಇತರೆ: 20
ಜೈಸಲ್ಮೇರ್, ಬಾರ್ಮರ್, ಹನುಮಾನ್ಗಡ್, ಸಿರೋಹಿ ಮತ್ತು ಬನಸವಾರ ಜಿಲ್ಲೆಗಳಲ್ಲಿ ಕಾಂಗ್ರೆಸ್ಗೆ ಹೆಚ್ಚು ಜನರು ಹರಸಿದ್ದಾರೆ. ಬಿಜೆಪಿಗೆ ಶ್ರೀಗಂಗಾನಗರ್, ಆಲ್ವಾರ್ ಮತ್ತು ಪುಷ್ಕರ್ನಲ್ಲಿ ಹೆಚ್ಚು ಜನಬೆಂಬಲ ಸಿಕ್ಕಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜಸ್ಥಾನದ ಎಲ್ಲಾ 25 ಲೋಕಸಭಾ ಕ್ಷೇತ್ರಗಳನ್ನ ಬಿಜೆಪಿ ಗೆದ್ದು ಕ್ಲೀನ್ ಸ್ವೀಪ್ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಬಿಜೆಪಿ ಪಾಲಿಗೆ ತೀರಾ ನಿರಾಸೆ ತಂದಿದೆ. ಲೋಕಸಭೆ ಚುನಾವಣೆಯ ಸೋಲಿನಿಂದ ಒತ್ತಡಕ್ಕೊಳಗಾಗಿದ್ದ ಸಿಎಂ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಸಾಕಷ್ಟು ಸಮಾಧಾನ ತಂದಿದೆ.
“ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶವು ನಿರೀಕ್ಷೆಯಂತೆಯೇ ಬಂದಿದೆ. ಸರ್ಕಾರದ ಸಾಧನೆಯನ್ನು ಪರಿಗಣಿಸಿ ಜನರು ಮತ ಹಾಕಿರುವುದು ಸಂತೋಷ ತಂದಿದೆ. ಜನರು ನಿಶ್ಚಿಂತೆಯಿಂದಿರುವಂತೆ ನಾವು ನಿಷ್ಠೆಯಿಂದ ಕೆಲಸ ಮಾಡುತ್ತೇವೆ” ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.