ಸಿರಿಯಾ: ಉತ್ತರ ಸಿರಿಯಾದಲ್ಲಿ ಅಮೆರಿಕ ಸೇನಾಪಡೆ ನಡೆಸಿದ ಕ್ಷಿಪ್ರಕಾರ್ಯಾಚರಣೆಯಲ್ಲಿ ಐಸಿಸ್ ಉಗ್ರಸಂಘಟನೆಯ ಮುಖ್ಯಸ್ಥ ಅಬುಬಕರ್ ಅಲ್ ಬಾಗ್ದಾದಿ ತನ್ನನ್ನು ತಾನೇ ಸ್ಫೋಟಿಸಿಕೊಂಡು ಸತ್ತಿದ್ದಾನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದರು. ಆದರೆ ಈ ಬಗ್ಗೆ ರಷ್ಯಾ ಅನುಮಾನ ವ್ಯಕ್ತಪಡಿಸಿದೆ.
ಅಬುಬಕರ್ ಅಲ್ ಬಾಗ್ದಾದಿ ಸಾವಿನ ಬಗ್ಗೆ ಈ ಹಿಂದೆ ಕೂಡ ಹತ್ತುಹಲವು ಬಾರಿ ವರದಿಯಾಗಿದೆ. 2014ರಿಂದಲೂ ಅನೇಕ ಸಲ ಬಾಗ್ದಾದಿ ಮೃತಪಟ್ಟಿದ್ದಾನೆ ಎಂದು ಹೇಳುತ್ತಲೇ ಬರಲಾಗಿತ್ತು. ಆದರೆ ಆ ವರದಿಯನ್ನು ಸುಳ್ಳಾಗಿಸುವಂತೆ ಯಾವಾಗಾದರೊಮ್ಮೆ ಆತ ಮಾತನಾಡಿದ್ದಾನೆ ಎನ್ನಲಾದ ವಿಡಿಯೋ ವೈರಲ್ ಆಗುತ್ತಿತ್ತು. ಈಗಲೂ ಕೂಡ ಅಮೆರಿಕ ಬಾಗ್ದಾದಿ ಹತನಾಗಿದ್ದಾನೆ ಎಂದು ಹೇಳಿದ್ದರೂ ರಷ್ಯಾ ಒಪ್ಪುತ್ತಿಲ್ಲ.
ಸಿರಿಯಾದ ವಾಯವ್ಯ ಭಾಗದ ಇಡ್ಲಿಬ್ ವಲಯದಲ್ಲಿ ಯುಎಸ್ ದಾಳಿ ಸಂದರ್ಭ ಬಾಗ್ದಾದಿ ತನ್ನನ್ನು ತಾನು ಸ್ಫೋಟಿಸಿಕೊಂಡು ಸತ್ತಿದ್ದಾನೆ ಎಂಬ ವರದಿಗೆ ಸಂಬಂಧಪಟ್ಟಂತೆ ನಮ್ಮ ರಕ್ಷಣಾ ಸಚಿವಾಲಯಕ್ಕೆ ಯಾವುದೇ ನಂಬಲಾರ್ಹ ಮೂಲಗಳಿಂದ ಮಾಹಿತಿ ಬಂದಿಲ್ಲ ಎಂದು ರಷ್ಯಾ ರಕ್ಷಣಾ ಇಲಾಖೆ ವಕ್ತಾರ ಸ್ಪಷ್ಟಪಡಿಸಿದ್ದಾರೆ.






