janadhvani

Kannada Online News Paper

ಪ್ರವಾದಿ ಜೀವನ ಚರಿತ್ರೆಯ ಪ್ರದರ್ಶನಕ್ಕಾಗಿ ಮಕ್ಕಾದಲ್ಲಿ ಶಾಶ್ವತ ಎಕ್ಸಿಬಿಷನ್ ಕೇಂದ್ರ

ಮಕ್ಕಾ: ಪ್ರವಾದಿಯವರ ಜೀವನ ಚರಿತ್ರೆ ಮತ್ತು ಇಸ್ಲಾಮಿಕ್ ನಾಗರಿಕತೆಯ ಪ್ರದರ್ಶನ ಮತ್ತು ಪ್ರಸಾರಕ್ಕಾಗಿ ಮಕ್ಕಾದಲ್ಲಿ ಶಾಶ್ವತ ಪ್ರದರ್ಶನ ಕೇಂದ್ರ ಮತ್ತು ಅಂತರ್‌ರಾಷ್ಟ್ರೀಯ ವಸ್ತುಸಂಗ್ರಹಾಲಯವನ್ನು ನಿರ್ಮಿಸಲು ವಿಶ್ವ ಇಸ್ಲಾಮಿಕ್ ಲೀಗ್ (ರಾಬಿತ್ವಾ) ಮತ್ತು ಉಮ್ ಅಲ್-ಖುರಾ ವಿಶ್ವವಿದ್ಯಾನಿಲಯ ಪರಸ್ಪರ ಒಪ್ಪಂದ ಮಾಡಿಕೊಂಡಿವೆ. ಈ ಒಪ್ಪಂದಕ್ಕೆ ಸಹಿ ಹಾಕುವ ವೇಳೆ ಎರಡೂ ಹರಂಗಳ ಸೇವಕ ಸಲ್ಮಾನ್ ರಾಜರ ಪ್ರತಿನಿಧಿ, ಮಕ್ಕಾದ ರಾಜ್ಯಪಾಲ ರಾಜಕುಮಾರ ಅಮೀರ್ ಖಾಲಿದ್ ಫೈಝಲ್ ಸಾಕ್ಷಿಯಾದರು.

ಮ್ಯೂಸಿಯಂ ನಿರ್ಮಿಸಲು ಉಮ್ ಅಲ್-ಖುರಾ ವಿಶ್ವವಿದ್ಯಾಲಯವು ವಾದಿ ಮಕ್ಕಾ ಟೆಕ್ನಾಲಜಿ ಕಂಪನಿಯನ್ನು ಪ್ರತಿನಿಧೀಕರಿಸಿ ಒಪ್ಪಂದಕ್ಕೆ ಸಹಿ ಹಾಕಿದೆ. ಅಲ್‌ಫೈಝಲಿಯಾ ಯೋಜನೆಯ ಭಾಗವಾಗಿ ಮ್ಯೂಸಿಯಂ ಮತ್ತು ಪ್ರದರ್ಶನ ಕೇಂದ್ರವನ್ನು ನಿರ್ಮಿಸಲಾಗುತ್ತಿದೆ. ರಾಬಿತ್ವಾ ವನ್ನು ಪ್ರತಿನಿಧಿಸಿ ಜನರಲ್ ಸೆಕ್ರೆಟರಿ ಶೈಖ್ ಡಾ. ಅಲ್ ಈಸಾ, ವಾದಿ ಮಕ್ಕಾ ಟೆಕ್ನಾಲಜಿ ಕಂಪನಿಯ ನಿರ್ದೇಶಕ ಮತ್ತು ಉಮ್ಮುಲ್ ಖುರಾ ವಿಶ್ವವಿದ್ಯಾನಿಲಯದ ವ್ಯವಸ್ಥಾಪಕ ಡಾ.ಅಬ್ದುಲ್ಲಾ ಬಾಫಿಲ್ ಒಪ್ಪಂದಕ್ಕೆ ಸಹಿ ಹಾಕಿದರು.

ಮಕ್ಕಾದ ಅಬಿದಿಯಾದಲ್ಲಿನ ವಿಶ್ವ ದರ್ಜೆಯ ಶಾಶ್ವತ ಪ್ರದರ್ಶನ ಕೇಂದ್ರ ಮತ್ತು ವಸ್ತುಸಂಗ್ರಹಾಲಯವು ಪ್ರವಾದಿಯವರ ಇತಿಹಾಸವನ್ನು ಹರಡಲು ಮತ್ತು ಇಸ್ಲಾಂ ಧರ್ಮದ ನಿಜವಾದ ಮುಖವನ್ನು ಸ್ಪಷ್ಟಪಡಿಸುವ ಗುರಿಯನ್ನು ಹೊಂದಿದೆ. ಪ್ರದರ್ಶನ ಕೇಂದ್ರ ಮತ್ತು ವಸ್ತುಸಂಗ್ರಹಾಲಯಕ್ಕೆ ‘ಇಂಟರ್ ನ್ಯಾಷನಲ್ ಎಕ್ಸಿಬಿಷನ್ ಆ್ಯಂಡ್ ಮ್ಯೂಸಿಯಂ ಫಾರ್ ಪ್ರೊಫೆಟ್ ಬಯೋಗ್ರಫಿ ಆ್ಯಂಡ್ ಇಸ್ಲಾಮಿಕ್ ಸಿವಿಲೈಸೇಷನ್ (ಪ್ರವಾದಿ ಜೀವನಚರಿತ್ರೆ ಮತ್ತು ಇಸ್ಲಾಮಿಕ್ ನಾಗರಿಕತೆಗಾಗಿ ಅಂತರ್‌ರಾಷ್ಟ್ರೀಯ ಪ್ರದರ್ಶನ ಮತ್ತು ವಸ್ತುಸಂಗ್ರಹಾಲಯ) ಎಂಬ ಹೆಸರಿಡಲಾಗಿದೆ.

ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪ್ರದರ್ಶನ ಕೇಂದ್ರ ಮತ್ತು ವಸ್ತುಸಂಗ್ರಹಾಲಯವು ಆಯಕಟ್ಟಿನ ಮತ್ತು ನವೀನತೆಯಿಂದ ಕಾರ್ಯನಿರ್ವಹಿಸಲಿದೆ. ಒಪ್ಪಂದದ ನಿಯಮಗಳ ಪ್ರಕಾರ, ವಾದಿ ಮಕ್ಕಾ ಟೆಕ್ನಾಲಜಿ ಕಂಪನಿಯು ವಸ್ತುಸಂಗ್ರಹಾಲಯ ಮತ್ತು ಪ್ರದರ್ಶನ ಕೇಂದ್ರಕ್ಕೆ ಪ್ರವೇಶ ಮತ್ತು ನಿರ್ಮಾಣ ಮತ್ತು ತಾತ್ಕಾಲಿಕ ಸ್ಥಳಕ್ಕೆ ಸೂಕ್ತವಾದ ಭೂಮಿಯನ್ನು ಹೊಂದಿರುತ್ತದೆ.

error: Content is protected !! Not allowed copy content from janadhvani.com