janadhvani

Kannada Online News Paper

ಕೇಂದ್ರ ಸರಕಾರ ಮುಖ್ಯಮಂತ್ರಿಯನ್ನು ಗೌರವದಿಂದ ಕಾಣಬೇಕು- ಯುಟಿ ಖಾದರ್

ಮಂಗಳೂರು: ಕರ್ನಾಟಕದ ಮುಖ್ಯಮಂತ್ರಿಯನ್ನು ಕೇಂದ್ರ ಸರ್ಕಾರವು ಗೌರವದಿಂದ ಕಾಣಬೇಕು. ರಾಜ್ಯಕ್ಕೆ ಸಿಗುವ ಪಾಲನ್ನು ನ್ಯಾಯಯುತವಾಗಿ ಕೇಂದ್ರ ನೀಡಬೇಕೆಂದು ಮಾಜಿ ಸಚಿವ ಯುಟಿ ಖಾದರ್ ಅವರು ಶನಿವಾರ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯದ ಮುಖ್ಯಮಂತ್ರಿಗೆ ಅವಮಾನ ಆದರೆ ನಮ್ಮೆಲ್ಲರಿಗೂ ಅವಮಾನ ಆದಂತೆ. ಕೇಂದ್ರ ಸರ್ಕಾರದ ಮುಂದೆ ಸಿ.ಎಂ ಮಾತನಾಡುವ ಧೈರ್ಯವನ್ನು ಮಾಡಬೇಕು ಎಂದು ಅವರು ಹೇಳಿದರು.

ದೆಹಲಿಗೆ ಬಿ.ಎಸ್ ಯಡಿಯೂರಪ್ಪ ಅವರು ಹೋದರೆ ಅವರಿಗೆ ಕೇಂದ್ರದ ಜೊತೆ ಮಾತನಾಡಲು ಅವಕಾಶ ಸಿಗಲ್ಲ. ಹಾಗೆ ಅವಮಾನ ಮಾಡುವುದು ನಮಗೆ ಇಷ್ಟ ಇಲ್ಲ. ನಾವೆಲ್ಲರೂ ಮುಖ್ಯಮಂತ್ರಿಗಳ ಜೊತೆ ಇದ್ದೇವೆ ಎಂದು ಯುಟಿ ಖಾದರ್ ಅವರು ತಿಳಿಸಿದರು.

ಕಾಂಗ್ರೆಸ್ ಕಾರ್ಯಕರ್ತರು ಲಾಠಿ ಹಿಡಿದು ಪಥಸಂಚಲ ಅಭ್ಯಾಸ ಮಾಡಿದ್ದು ಟ್ರೋಲ್ ಆದ ವಿಚಾರದ ಬಗ್ಗೆ ಮಾತನಾಡಿದ ಅವರು, ಗಾಂಧಿ ಜಯಂತಿ ಕಾರ್ಯಕ್ರಮಕ್ಕೆ ತಯಾರು ಮಾಡಿದ್ದೇವೆ ಅಷ್ಟೇ, ಒಂದು ಕಡೆ ಫಿಟ್ ಇಂಡಿಯಾ ಎಂದು ಹೇಳ್ತಾರೆ, ಮತ್ತೊಂದು ಕಡೆ ಟ್ರೋಲ್ ಮಾಡ್ತಾರೆ. ಫಿಟ್ ಆಗುವುದಕ್ಕೆ ನಾವು ಪಥಸಂಚಲನ ಮಾಡುದ್ರಲ್ಲಿ ತಪ್ಪು ಏನಿದೆ? ಎಂದು ಅವರು ಬಿಜೆಪಿ ನಾಯಕರನ್ನು ಪ್ರಶ್ನಿಸಿದರು.

ನಾನು ಸೇವಾದಳದ ರಾಷ್ಟ್ರೀಯ ಟ್ರೈನರ್, ಸೇವಾದಳದಲ್ಲಿ ಲಾಠಿ ಹಿಡಿದು ಟ್ರೈನ್ ಮಾಡುತ್ತಾರೆ. ನಾನು ಹಿಂದಿನಿಂದಲೂ ಲಾಠಿ ಹಿಡಿದು ಪಥಸಂಚಲನ ಮಾಡಿದ್ದೇನೆ. ಈಗ ಫಿಟ್ ಇಂಡಿಯಾಕ್ಕೆ ಫಿಟ್ ಆಗುತ್ತಿದ್ದೇವೆ ಅಷ್ಟೇ ಎಂದರು.

error: Content is protected !! Not allowed copy content from janadhvani.com