ಕೌಲಾಲಂಪುರ್: ಹಿಂದೂಗಳ ವಿರುದ್ಧ ದ್ವೇಷ ಭಾಷಣ ಮಾಡಿರುವ ಹಿನ್ನಲೆಯಲ್ಲಿ ಝಾಕಿರ್ ನಾಯಕ್ ಗೆ ಮಲೇಷ್ಯಾದಲ್ಲಿ ಭಾಷಣಕ್ಕೆ ಕಡಿವಾಣ ಹಾಕಲಾಗಿದೆ. ಮಲೇಷ್ಯಾದಲ್ಲಿ ಎಲ್ಲಿಯೂ ಧಾರ್ಮಿಕ ಭಾಷಣ ಮಾಡಬಾರದು ಎಂದು ಸರ್ಕಾರ ಆದೇಶಿಸಿದೆ. ದೇಶದ ಭದ್ರತೆ, ಕೋಮು ಸೌಹಾರ್ದತೆ ಮತ್ತು ಐಕ್ಯತೆಗೆ ಪ್ರತಿಕೂಲ ಪರಿಣಾಮ ಬೀರುವ ಕಾರಣ ಝಾಕಿರ್ ನಾಯ್ಕ್ ಅವರ ಭಾಷಣಗಳನ್ನು ನಿಷೇಧಿಸಲಾಗಿದೆ ಎಂದು ರಾಯಲ್ ಮಲೇಷಿಯಾದ ಸಂವಹನ ವಿಭಾಗದ ಮುಖ್ಯಸ್ಥ ದತುಕ್ ಅಸ್ಮಾವತಿ ಅಹ್ಮದ್ ಹೇಳಿದ್ದಾರೆ.
ಆದೇಶವನ್ನು ಉಲ್ಲಂಘಿಸಿದರೆ ನಾಯಕ್ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪರ್ಲಿಸ್ ಪೊಲೀಸ್ ಮುಖ್ಯಸ್ಥ ನೂರ್ ಮುಷರ್ ಅಹ್ಮದ್ ಹೇಳಿದ್ದಾರೆ. ಭಾಷಣಕ್ಕೆ ಹತ್ತು ದಿನಗಳ ಮೊದಲು ಝಾಕಿರ್ ನಾಯ್ಕ್ ಪೊಲೀಸರಿಗೆ ಮಾಹಿತಿ ನೀಡುವಂತೆ ಮತ್ತು ಭಾಷಣದಲ್ಲಿ ಉಲ್ಲೇಖಿಸಲಾಗುವ ವಿಷಯಗಳನ್ನು ಅಧಿಕಾರಿಗಳಿಗೆ ತಿಳಿಸುವಂತೆ ಸೂಚಿಸಿದ್ದಾರೆ.
ಈ ಹಿಂದೆ ಮಲೇಷ್ಯಾ ಪೊಲೀಸರು ಝಾಕಿರ್ ನಾಯ್ಕ್ ಅವರನ್ನು 10 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. ಪ್ರಶ್ನಿಸಿದ್ದರು. ದ್ವೇಷ ಭಾಷಣ ಮಾಡಿದ್ದಕ್ಕಾಗಿ ಝಾಕಿರ್ ನಾಯ್ಕ್ ಅವರನ್ನು ಪ್ರಶ್ನಿಸುವುದು ಇದು ಎರಡನೇ ಬಾರಿಯಾಗಿದೆ. ಮಲೇಷ್ಯಾದ ದಂಡ ಸಂಹಿತೆಯ ಸೆಕ್ಷನ್ 504 ರ ಅಡಿಯಲ್ಲಿ ಝಾಕಿರ್ ನಾಯ್ಕ್ ವಿರುದ್ಧ ಉದ್ದೇಶಪೂರ್ವಕ ದ್ವೇಷ ಅಭಿಯಾನ ನಡೆಸಲಾಗಿದೆ ಎಂಬ ಆರೋಪಿಸಲಾಗಿದೆ. ಬುಕಿತ್ ಅಮಾನ್ ಪೊಲೀಸ್ ಪ್ರಧಾನ ಕಚೇರಿಯಲ್ಲಿ ವಿಚಾರಣೆ ವೇಳೆ ಝಾಕಿರ್ ನಾಯ್ಕ್ ಹೇಳಿಕೆಯನ್ನು ದಾಖಲಿಸಲಾಗಿದೆ. ನಾಯ್ಕ್ ವಕೀಲ ಅಕ್ಬರುದ್ದೀನ್ ಅಬ್ದುಲ್ ಖಾದಿರ್ ರೊಂದಿಗೆ ವಿಚಾರಣೆಗೆ ಹಾಜರಾದರು.
ಆಗಸ್ಟ್ 3 ರಂದು ಮಲೇಷ್ಯಾದ ಕೋಟಾ ಬಾರು ಭಾಷಣದಲ್ಲಿ ಅವರು ಹಿಂದೂ ಮತ್ತು ಚೀನಿಯರ ವಿರುದ್ಧ ಹೇಳಿಕೆ ನೀಡಿದ್ದಾರೆ. ಮಲೇಷ್ಯಾದ ಹಿಂದೂಗಳಿಗೆ ದೇಶದ ಪ್ರಧಾನಿಗಿಂತ ಭಾರತದ ಪ್ರಧಾನಿ ಮೋದಿಯೊಂದಿಗೆ ಹೆಚ್ಚಿನ ಸಂಬಂಧವಿದೆ ಎಂದು ಝಾಕಿರ್ ನಾಯ್ಕ್ ದೂರಿದ್ದಾರೆ. ಮಲೇಷ್ಯಾದ ಹಳೆಯ ಚೀನಾದ ಜನರು ದೇಶವನ್ನು ತೊರೆಯಬೇಕು ಮತ್ತು ಮಲೇಷ್ಯಾದ ಹಿಂದೂಗಳು ಭಾರತದಲ್ಲಿ ಮುಸ್ಲಿಮರಿಗಿಂತ ನೂರಾರು ಪಟ್ಟು ಹೆಚ್ಚಿನ ಹಕ್ಕುಗಳನ್ನು ಅನುಭವಿಸುತ್ತಾರೆ ಎಂದು ಅವರು ಉಲ್ಲೇಖಿಸಿದ್ದಾರೆ. ಇದನ್ನು ಮಲೇಷ್ಯಾ ಪ್ರಧಾನಿ ಮಹಾತಿರ್ ಮೊಹಮ್ಮದ್ ಖಂಡಿಸಿದ್ದರು.
ಝಾಕಿರ್ ಅವರಿಗೆ ಧಾರ್ಮಿಕ ಭಾಷಣ ಮಾಡುವ ಹಕ್ಕಿದೆ ಆದರೆ ದ್ವೇಷದ ಭಾಷಣ ಮಾಡಲು ಅಥವಾ ದೇಶದಲ್ಲಿ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಹಕ್ಕು ಅವರಿಗಿಲ್ಲ ಎಂದು ಮಹತೀರ್ ಹೇಳಿದ್ದಾರೆ. ಜನರಲ್ಲಿ ಜನಾಂಗೀಯ ಪ್ರವಚನದ ಮೂಲಕ ರಾಜಕೀಯ ಪ್ರವೇಶಿಸುವ ಝಾಕಿರ್ ನಾಯ್ಕ್ ಅವರ ಪ್ರಯತ್ನವಾಗಿದೆ, ಜನರೆಡೆಯಲ್ಲಿ ಜನಾಂಗೀಯ ದ್ವೇಷವನ್ನು ಹರಡಲು ಪ್ರಯತ್ನಿಸಿದರೆ ಮಲೇಷ್ಯಾದಿಂದ ಗಡೀಪಾರು ಮಾಡಲಾಗುವುದು ಎಂದು ಪ್ರಧಾನಿ ಎಚ್ಚರಿಸಿದರು. ಏತನ್ಮಧ್ಯೆ, ಮಲೇಷ್ಯಾದ ಮಾಜಿ ಪೊಲೀಸ್ ಮುಖ್ಯಸ್ಥ ರಹೀಂ ನೂರ್ ಅವರು ಝಾಕಿರ್ ನಾಯ್ಕ್ ಅವರ ಖಾಯಂ ನಿವಾಸಿ (ಪಿಆರ್) ಸ್ಥಾನಮಾನವನ್ನು ರದ್ದುಗೊಳಿಸಿ ಭಾರತಕ್ಕೆ ಹಿಂದಿರುಗಿಸುವಂತೆ ಸರ್ಕಾರಕ್ಕೆ ಕರೆ ನೀಡಿದ್ದಾರೆ.
ಏತನ್ಮಧ್ಯೆ,ಝಾಕಿರ್ ನಾಯ್ಕ್ ಪೆನಾಂಗ್ ಉಪಮುಖ್ಯಮಂತ್ರಿ ಪಿ.ರಾಮಸಾಮಿ ಮತ್ತು ಕ್ಲಾಂಗ್ ಸಂಸದ ಚಾರ್ಲ್ಸ್ ಸ್ಯಾಂಟಿಯಾಗೊ ಸೇರಿದಂತೆ ನಾಲ್ಕು ಜನರಿಗೆ ಪತ್ರ ಬರೆದಿದ್ದಾರೆ, ತಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದೂ ತಮ್ಮ ವಿರುದ್ಧದ ಆರೋಪಗಳು ಆಧಾರರಹಿತವಾಗಿವೆ ಎಂದು ಅವರು ಹೇಳಿದ್ದಾರೆ.