janadhvani

Kannada Online News Paper

ರಕ್ತದಾನ: ಕೊಡುವವನಿಗೂ ಪಡೆಯುವವನಿಗೂ ಲಾಭದಾಯಕ

ಕೊಡುವವನಿಗೂ ಪಡೆಯುವವನಿಗೂ ಲಾಭದಾಯಕವಾಗಿದೆ ರಕ್ತದಾನ
ರಕ್ತದಾನದ ಮಹತ್ವ ಅರಿಯಿರಿ ಆರೋಗ್ಯಕರ ಜೀವನ ನಿಮ್ಮದಾಗಿಸಿ.

✍ Bathi@razi…Thekkaru
——————————————
ರಕ್ತದಾನದ ಬಗ್ಗೆ ಬಹಳಷ್ಟು ಜನರಿಗೆ ಅನಗತ್ಯ ಭಯ, ತಪ್ಪು ತಿಳಿವಳಿಕೆಗಳೇ ಹೆಚ್ಚು. ಆದರೆ ರಕ್ತದಾನದಿಂದ ರಕ್ತದ ಅವಶ್ಯಕತೆ ಇರುವವರಿಗೆ ಮಾತ್ರ ಲಾಭವಲ್ಲ, ರಕ್ತದಾನಿಗಳೂ ತಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಇದರಿಂದ ರಕ್ತದಾನ ಮಾಡಿದವರಲ್ಲಿ ಹೊಸ ರಕ್ತ ಕಣಗಳ ಉತ್ಪತ್ತಿಗೆ ಪ್ರಚೋದನೆ ಸಿಗುತ್ತದೆ, ಹೃದಯಾಘಾತದ ಸಂಭವ ಕಡಿಮೆಯಾಗುತ್ತದೆ, ರಕ್ತದಲ್ಲಿ ಕೊಲೆಸ್ಟರಾಲ್ ಅಂಶ ಕಡಿಮೆಯಾಗುತ್ತದೆ, ಆತ ಇನ್ನಷ್ಟು ಆರೋಗ್ಯವಂತನಾಗಿರಲು ಸಾಧ್ಯವಾಗುತ್ತದೆ. ಅದಕ್ಕಾಗಿಯೇ ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಕೆಲವು ರೋಗಗಳನ್ನು ತಡೆಗಟ್ಟಬಹುದು ಎಂದು ಆಯುರ್ವೇದದಲ್ಲಿ ಹೇಳಿದ್ದಾರೆ. ಇಂತಹ ರೋಗಗಳಿಗೆ ರಕ್ತಮೋಕ್ಷಣ ಎಂಬ ಪಂಚಕರ್ಮ ಚಿಕಿತ್ಸೆಯನ್ನು ಸುಶ್ರುತರು ವರ್ಣಿಸಿದ್ದಾರೆ. ರಕ್ತಮೋಕ್ಷಣ ಎಂದರೆ ರೋಗಿಯ ಶರೀರದಿಂದ ನಿರ್ದಿಷ್ಟ ಪ್ರಮಾಣದಲ್ಲಿ ಕೆಟ್ಟ ರಕ್ತವನ್ನು ಹೊರಹಾಕುವುದು ಎಂದರ್ಥ. ಒಟ್ಟಾರೆ ರಕ್ತದಾನದಿಂದ ರಕ್ತದಾನಿ ಮತ್ತು ರಕ್ತ ಪಡೆದವರು ಇಬ್ಬರಿಗೂ ಲಾಭವಾಗುವುದು ನಿಶ್ಚಿತ. ಹಾಗಂತ ಎಲ್ಲರೂ ರಕ್ತದಾನ ಮಾಡುವಂತಿಲ್ಲ.

ಯಾರು ರಕ್ತದಾನಕ್ಕೆ ಅರ್ಹರು?
* 18–60 ವರ್ಷದೊಳಗಿನ ಎಲ್ಲ ಆರೋಗ್ಯವಂತ ವ್ಯಕ್ತಿಗಳು
* ತೂಕ 45 ಕಿ.ಜಿ.ಗಿಂತ ಹೆಚ್ಚಿರುವವರು
* ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ 12.5 ಗ್ರಾಂ.ಗಿಂತ ಹೆಚ್ಚಿರುವವರು
* ಆರೋಗ್ಯವಂತ ಪುರುಷರು ಮೂರು ತಿಂಗಳಿಗೊಮ್ಮೆ ಹಾಗೂ ಮಹಿಳೆಯರು ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.

ಯಾರು ಅನರ್ಹರು?
* ರಕ್ತದಾನ ಮಾಡಿದವರು ಮುಂದಿನ ಮೂರು ತಿಂಗಳುಗಳವರೆಗೆ
* ಯಕೃತ್, ಮೂತ್ರಪಿಂಡ, ಹೃದಯ ಸಂಬಂಧಿ ಕಾಯಿಲೆ ಮತ್ತು ಕ್ಯಾನ್ಸರ್ ಇರುವವರು
* ಗರ್ಭಿಣಿ, ಋತು ಸ್ರಾವದಲ್ಲಿರುವ ಸ್ತ್ರೀ, ಮಗುವಿಗೆ ಹಾಲುಣಿಸುವ ತಾಯಂದಿರು
* ರಕ್ತಹೀನತೆ ಇರುವವರು
* ರಕ್ತ ವರ್ಗಾವಣೆ ಮಾಡಿಸಿಕೊಂಡವರು, ಮಲೇರಿಯಾ, ಟೈಫಾಯ್ಡ್, ಕಾಮಾಲೆಯಿಂದ ಬಳಲಿದವರು ಮುಂದಿನ 6 ತಿಂಗಳವರೆಗೆ
* ಶಸ್ತ್ರ ಚಿಕಿತ್ಸೆಗೊಳಗಾದವರು
* ಯಾವುದೇ ಸೋಂಕಿನ ವಿರುದ್ಧ ಲಸಿಕೆ ಹಾಕಿಸಿಕೂಂಡವರು ಮುಂದಿನ 3 ತಿಂಗಳಿನವರೆಗೆ

ರಕ್ತಕ್ಕೆ ಪರ್ಯಾಯವಾದ ವಸ್ತು ಮತ್ತೊಂದಿಲ್ಲ. ಒಬ್ಬ ದಾನಿಯಿಂದ ಪಡೆದ ರಕ್ತದಿಂದ ರಕ್ತದ ಘಟಕಗಳನ್ನು ಅವಶ್ಯಕತೆಗೆ ಅನುಗುಣವಾಗಿ ಬಳಸಿ ಅನೇಕ ವ್ಯಕ್ತಿಗಳ ಪ್ರಾಣ ಉಳಿಸಬಹುದು. ಅಲ್ಲದೇ ಒಬ್ಬ ದಾನಿಯಿಂದ ಪಡೆದ ರಕ್ತವನ್ನು ಕೇವಲ 35 ದಿನಗಳ ಒಳಗೆ ಮಾತ್ರ ಉಪಯೋಗಿಸಲು ಸಾಧ್ಯ ಮತ್ತು ಅದನ್ನು ಅದೇ ರಕ್ತ ಗುಂಪಿನ ಮತ್ತೊಬ್ಬ ವ್ಯಕ್ತಿಗೆ ಮಾತ್ರ ಉಪಯೋಗಿಸಬಹುದು. ದಾನ ಮಾಡಿದ ವ್ಯಕ್ತಿಯಲ್ಲಿ ಶುದ್ಧ ರಕ್ತ 3 ತಿಂಗಳಲ್ಲಿ ಪುನಃ ಉತ್ಪತ್ತಿಯಾಗುತ್ತದೆ.

ಒಬ್ಬ ಆರೋಗ್ಯವಂತನ ದೇಹದಲ್ಲಿ ಸುಮಾರು 6 ಲೀಟರ್‌ನಷ್ಟು ರಕ್ತವಿದ್ದು ರಕ್ತದಾನಕ್ಕೆ ಕೇವಲ 350 ಮಿ.ಲೀ. ರಕ್ತವನ್ನು ಮಾತ್ರವೇ ದಾನಿಯಿಂದ ಸ್ವೀಕರಿಸಲಾಗುತ್ತದೆ ಮತ್ತು ಇದರಿಂದ ದಾನಿಗೆ ಯಾವುದೇ ಅಪಾಯವಿಲ್ಲ. ಈ ಸೂಕ್ಷ್ಮ ಅಂಶಗಳ ಅರಿವು ಹೆಚ್ಚಿನ ಜನರಿಗಿಲ್ಲ. ಈ ಕಾರಣದಿಂದಲೇ ಇಂದಿಗೂ ಹೆಚ್ಚಿನ ದೇಶಗಳಲ್ಲಿ ರಕ್ತದ ಬೇಡಿಕೆ ಮತ್ತು ಪೂರೈಕೆಯ ನಡುವೆ ದೊಡ್ಡ ಪ್ರಮಾಣದ ಅಸಮತೋಲನ ಎದ್ದು ಕಾಣುತ್ತಿದೆ.

ವರ್ಷವಿಡೀ ಶಸ್ತ್ರಚಿಕಿತ್ಸೆ, ಅಪಘಾತ, ರಕ್ತಹೀನತೆ ಮುಂತಾದ ಸಂದರ್ಭಗಳಲ್ಲಿ ರಕ್ತ ವರ್ಗಾವಣೆ ಅವಶ್ಯವಿರುತ್ತದೆ. ಆದರೆ ಈ ಬೇಡಿಕೆಯನ್ನು ಸಂಪೂರ್ಣವಾಗಿ ಪೂರೈಸಲು ರಕ್ತನಿಧಿಗಳಿಗೆ ಸಾಧ್ಯವಾಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಸಾರ್ವಜನಿಕರಲ್ಲಿ ರಕ್ತದಾನದ ಬಗ್ಗೆ ಇರುವ ಭಯ, ಆತಂಕ, ಅಪನಂಬಿಕೆಗಳು. ರಕ್ತದಾನದಿಂದ ನಿಮಗೇನಾದರೂ ತೊಂದರೆಯಾಗುವಂತಹ ಸಂದರ್ಭಗಳಲ್ಲಿ ಖಂಡಿತ ನಿಮ್ಮಿಂದ ರಕ್ತ ಪಡೆಯುವುದಿಲ್ಲ. ಅದಕ್ಕಾಗಿಯೇ ಪ್ರತಿಯೊಬ್ಬ ರಕ್ತದಾನಿಯಿಂದ ರಕ್ತವನ್ನು ಪಡೆಯುವ ಮೊದಲು ವೈದ್ಯಾಧಿಕಾರಿಗಳು ವ್ಯಕ್ತಿಯ ವಯಸ್ಸು, ತೂಕ, ರಕ್ತದೊತ್ತಡ, ಹಿಮೋಗ್ಲೋಬಿನ್ ಪ್ರಮಾಣ, ಆರೋಗ್ಯ ಸ್ಥಿತಿ ಹೀಗೆ ಎಲ್ಲವನ್ನೂ ಪರೀಕ್ಷಿಸಿ ಎಲ್ಲವೂ ಸರಿಯಿದ್ದಲ್ಲಿ ಮಾತ್ರ ರಕ್ತ ಪಡೆಯುವ ಕ್ರಿಯೆಗೆ ಮುಂದಾಗುತ್ತಾರೆ. ಹೀಗಾಗಿ ಯಾವುದೇ ಆತಂಕವಿಲ್ಲದೇ ನಿರ್ಭೀತರಾಗಿ ಸ್ವಯಂಪ್ರೇರಿತ ರಕ್ತದಾನಕ್ಕೆ ಮುಂದಾಗಿ.

ಇದೇ ಆಗಸ್ಟ್ 18ಕ್ಕೆ ಮಂಗಳೂರು ಪುರಭವನದಲ್ಲಿ ಏಕ ಕಾಲದಲ್ಲಿ 5 ಆಸ್ಪತೆಗಳ ಸಹಬಾಗಿತ್ವದಲ್ಲಿ.
500 ಮಂದಿ ರಕ್ತದಾನ ಮಾಡುವ ಅತೀ ದೊಡ್ಡ ರಕ್ತದಾನ ಶಿಬಿರ SSF ದ,ಕ ಜಿಲ್ಲಾ ಬ್ಲಡ್ ಸೈಬೋ ವತಿಯಿಂದ ನಡೆಯಲಿದೆ.
ಆದ್ದರಿಂದ ರಕ್ತದಾನದ ಮಹತ್ವವನ್ನು ಅರಿತು ಬ್ಲಡ್ ಸೈಬೋ ಇದರ 100ನೇ ರಕ್ತದಾನ ಶಿಬಿರಕ್ಕೆ ನೇತ್ರ ಸಾಕ್ಷಿಗಳಾಗಿ.ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ.

ಈ ಬ್ಲಡ್ ಸೈಬೋ 2017 ಜುಲೈ 14 ರಿಂದ 2019 ಜುಲೈ 31 ರ ತನಕ ಸುಮಾರು 7103 ಯುನಿಟ್ ರಕ್ತವನ್ನು ಜಾತಿ,ಮತ,ಭೇದವಿಲ್ಲದೆ 2 ದಶಕಗಳಲ್ಲಿ ರಕ್ತದಾನ ನೀಡಿ ಜೀವದಾನ ಮಾಡಿದೆ.

ಬನ್ನಿ ರಕ್ತದಾನ ಮಾಡೋಣ…ಜೀವ ಉಳಿಸೋಣ

🇸🇱SSF D,K Blood Saibo🇸🇱
100th
BLOOD DONATION CAMP
———————————-|on Sunday 18th August 2019 Town Hall, Mangalore
———————————
✍ Bathi@razi…Thekkaru

error: Content is protected !! Not allowed copy content from janadhvani.com