janadhvani

Kannada Online News Paper

ಇಂಜಿನ್ ಆಫ್ ಮಾಡದೆ ನಿಲ್ಲಿಸಿರುವ ವಾಹನಕ್ಕೆ 300 ದಿರ್ಹಂ ದಂಡ

ದುಬೈ: ವಾಹನಗಳ ಇಂಜಿನ್ ಆಫ್ ಮಾಡದೆ ರಸ್ತೆಬದಿ ನಿಲ್ಲಿಸಿದರೆ 300 ದಿರ್ಹಂ ವರೆಗೆ ದಂಡ ವಿಧಿಸಲಾಗುವುದು ಎಂದು ದುಬೈ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಜನರು ತಮ್ಮ ವಾಹನಗಳನ್ನು ಕಿರಾಣಿ ಅಂಗಡಿ, ಎಟಿಎಂ ಅಥವಾ ರೆಸ್ಟೋರೆಂಟ್‌ಗಳಿಂದ ಪಾರ್ಸೆಲ್‌ಗಳನ್ನು ಖರೀದಿಸುವ ಸಲುವಾಗಿ ನಿಲ್ಲಿಸುವುದು ಸಾಮಾನ್ಯವಾಗಿದೆ. ವಿಶೇಷವಾಗಿ ಬೇಸಿಗೆಯಲ್ಲಿ, ಅಧಿಕ ಬಿಸಿಯಾಗುವುದನ್ನು ತಪ್ಪಿಸಲು ಇಂಜಿನ್ ಅನ್ನು ಆನ್ ಮಾಡಿ ಇಡಲಾಗುತ್ತದೆ. ಈ ರೀತಿ ಕಾರನ್ನು ಆಫ್ ಮಾಡದೆ ನಿಲ್ಲಿಸುವುದರಿಂದ ವಾಹನದಿಂದ ಕದಿಯುವುದು ಸುಲಭವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ನಡೆಸಿದ ಅಧ್ಯಯನದ ಪ್ರಕಾರ, ಎಮಿರೇಟ್‌ನಲ್ಲಿ ಆನ್ ಮಾಡಿ ಇಟ್ಟ ವಾಹನಗಳಲ್ಲಿ ಹೆಚ್ಚಿನ ಕಳ್ಳತನಗಳು ಸಂಭವಿಸಿವೆ. ವಾಹನ ಚಾಲಕರು ಇಂಜಿನ್ ಆಫ್ ಮಾಡಿ ವಾಹನವನ್ನು ಲಾಕ್ ಮಾಡಿ ನಿಲ್ಲಿಸಬೇಕು. ರಾತ್ರಿ ಹೊತ್ತು ನಿಮ್ಮ ವಾಹನವನ್ನು ತುಂಬಾ ಕತ್ತಲೆಯಲ್ಲಿ ನಿಲ್ಲಿಸಬೇಡಿ. ಜನರಹಿತ ಪ್ರದೇಶಗಳು ಅಥವಾ ಮರಳು ಪ್ರದೇಶಗಳಲ್ಲಿ ದೀರ್ಘಕಾಲದವರೆಗೆ ವಾಹನ ನಿಲುಗಡೆ ಮಾಡುವುದನ್ನು ತಪ್ಪಿಸಬೇಕು.

ಕಾರುಗಳನ್ನು ಸುರಕ್ಷಿತ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಬೇಕು, ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ಇರುವ ಪ್ರದೇಶದಲ್ಲಿ ನಿಲ್ಲಿಸುವುದು ಉತ್ತಮ. ಇದಲ್ಲದೆ, ವಾಹನಗಳಲ್ಲಿ ಬೆಲೆಬಾಳುವ ವಸ್ತುಗಳನ್ನು ಹೊರಗಿನಿಂದ ಕಾಣುವಂತೆ ಪ್ರದರ್ಶಿಸಬಾರದು ಎಂದು ದುಬೈ ಪೊಲೀಸರು ನಿರ್ದೇಶನ ನೀಡಿದ್ದಾರೆ.