ಗಲ್ಫ್ ರಾಷ್ಟ್ರಗಳಲ್ಲಿಂದು ಅನಿವಾಸಿ ಮಿತ್ರರಿಂದ ಬಕ್ರೀದ್ ಆಚರಣೆ

ದುಬೈ.ಆ,11: ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ಒಂದಾದ ಈದುಲ್ ಅದ್’ಹಾ ಅಥವಾ ಬಕ್ರೀದ್ ಹಬ್ಬವನ್ನು ಅನಿವಾಸಿ ಕನ್ನಡಿಗರು ಇಂದು ಸಂಭ್ರಮದಿಂದ ಆಚರಿಸಿದರು.

ಯುಎಇ, ಸೌದಿ, ಬಹ್ರೈನ್, ಖತ್ತಾರ್, ಕುವೈತ್ ಸೇರಿದಂತೆ ಬಹುತೇಕ ಗಲ್ಫ್ ರಾಷ್ಟ್ರಗಳಲ್ಲಿ ಇಂದು ಈದ್ ಹಬ್ಬವನ್ನು ಆಚರಿಸಲಾಯಿತು. ಒಮಾನಿನಲ್ಲಿ ನಾಳೆ ಈದ್ ಆಚರಿಸಲಾಗುತ್ತದೆ.

ಬೆಳಿಗ್ಗೆ ಹೊಸ ಉಡುಪುಗಳನ್ನು ಧರಿಸಿ, ತಕ್ಬೀರ್ ಉಚ್ಚರಿಸುತ್ತಾ ಮಸೀದಿ ಮತ್ತು ಈದ್ಗಾಹ್ ಗಳಿಗೆ ತೆರಳಿ ಈದ್ ನಮಾಜ್ ಮತ್ತು ಖುತುಬಾದಲ್ಲಿ ಪಾಲ್ಗೊಂಡರು. ತಾಯಿನಾಡು ನೆರೆ ಹಾವಳಿಯಿಂದ ತತ್ತರಿಸಿರುವುದರಿಂದ ಸಂಭ್ರಮಿಸುವ ದಿನದಲ್ಲೂ ದುಃಖದ ಛಾಯೆ ತಲೆದೋರುತ್ತಿತ್ತು. ಎಲ್ಲಾ ಅನಿವಾಸಿ ಮಿತ್ರರೂ ಪರಸ್ಪರ ಶುಭಕೋರಿ ನೆರೆ ಸಂತ್ರಸ್ತರಿಗಾಗಿ ಪ್ರತ್ಯೇಕ ಪ್ರಾರ್ಥನೆ ನಡೆಸಿದರು.

ಇಸ್ಲಾಮಿಕ್ ಕ್ಯಾಲೆಂಡರ್‌ನ ಕಡೆಯ ತಿಂಗಳಾದ ದುಲ್ ಹಜ್ ನ ಹತ್ತನೆಯ ದಿನದಂದು ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತದೆ.

ಮುಸ್ಲಿಮರಿಗೆ ಕಡ್ಡಾಯವಾದ ಐದು ಸ್ತಂಭಗಳಲ್ಲಿ ಒಂದಾದ ಪವಿತ್ರ ಹಜ್ (ಸಾಧ್ಯವಿರುವವರು ಜೀವನದಲ್ಲಿ ಕನಿಷ್ಟ ಒಂದು ಬಾರಿಯಾದರು ನಿರ್ವಹಿಸಬೇಕಾದ ಕಡ್ಡಾಯವಿಧಿ) ದುಲ್ ಹಜ್ ಒಂಬತ್ತರಿಂದ ತೊಡಗಿ ಹನ್ನೊಂದರಂದು ಸಂಪನ್ನಗೊಳ್ಳುತ್ತದೆ.

ಬಕ್ರೀದ್ ಹಿನ್ನಲೆ:

ವಿಶ್ವದಾದ್ಯಂತ ದುಲ್ ಹಜ್ ತಿಂಗಳ ಹತ್ತನೆಯ ದಿನ (ಚಂದ್ರದರ್ಶನವಾದ ಹತ್ತನೆಯ ದಿನ) ತ್ಯಾಗ ಮತ್ತು ಬಲಿದಾನದ ಸಂಕೇತವಾಗಿ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತದೆ. ಇದಕ್ಕೆ ಕಾರಣವಾದ ಕಥೆಗೆ ನಾಲ್ಕು ಸಾವಿರ ವರ್ಷ ಹಿಂದಿನ ಇತಿಹಾಸವಿದೆ. ಆ ಸಮಯದಲ್ಲಿ ಮಕ್ಕಾ ನಗರದಲ್ಲಿ ವಾಸವಾಗಿದ್ದ ಪ್ರವಾದಿ ಇಬ್ರಾಹಿಂ(ಸ) ರವರ ಭಕ್ತಿ ಮತ್ತು ನಿಷ್ಠೆಯನ್ನು ಪರೀಕ್ಷಿಸಲು ಅಲ್ಲಾಹನಿಂದ ಅವರ ಓರ್ವನೇ ಮಗನಾದ ಇಸ್ಮಾಯಿಲ್ ರನ್ನು ಬಲಿ ನೀಡಬೇಕೆಂದು ಕನಸಿನಲ್ಲಿ ಆಜ್ಞೆಯಾಯಿತು. ಅಲ್ಲಾಹನಿಗಾಗಿ ತಮ್ಮ ಏಕಮಾತ್ರ ಮತ್ತು ಅತ್ಯಂತ ಪ್ರೀತಿಪಾತ್ರ ಮಗನನ್ನು ಬಲಿಕೊಡಲು ಮುಂದಾದರು. ತಂದೆಯ ವಾಕ್ಯವನ್ನು ಪೂರ್ಣಗೊಳಿಸಲು ಇಸ್ಮಾಯಿಲರೂ ನಗುಮೊಗದಿಂದಲೇ ಬಲಿದಾನಕ್ಕೆ ಸಿದ್ಧರಾದರು. ಆದರೆ ಮಗನ ಕುತ್ತಿಗೆಯನ್ನು ಮುಟ್ಟಲೂ ಕತ್ತಿ ಅಸಮರ್ಥವಾಗುತ್ತದೆ. ಆಗ ಇಸ್ಮಾಯಿಲರು ತಂದೆಯಲ್ಲಿ ಹೀಗೆ ಹೇಳುತ್ತಾರೆ. ನಿಮಗೆ ಪುತ್ರವಾತ್ಸಲ್ಯ ಅಡ್ಡಿಯಾಗುತ್ತಿದೆ, ಆದ್ದರಿಂದ ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳಿ ಎನ್ನುತ್ತಾರೆ. ಅಂತೆಯೇ ಬಟ್ಟೆ ಕಟ್ಟಿಕೊಂಡು ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ. ಆ ವೇಳೆ, ಪ್ರತ್ಯಕ್ಷರಾದ ದೇವದೂತ ಜಿಬ್ರೀಲ್, ಇಸ್ಮಾಯಿಲ್‌ರನ್ನು ಬದಿಗೆ ಸರಿಸಿ ಅವರ ಬದಲಿಗೆ ಒಂದು ಕುರಿಯನ್ನು ಬಲಿಕೊಡುವಂತೆ ಆಜ್ಞಾಪಿಸುತ್ತಾರೆ. ಕುರಿಯ ಕುತ್ತಿಗೆಯ ಮೇಲೆ ಹರಿಸಿದ ಕತ್ತಿ ಸಫಲವಾಗುತ್ತದೆ. ಅಲ್ಲಾಹನಲ್ಲಿ ನಲ್ಲಿ ತಮಗಿರುವ ಸತ್ಯನಿಷ್ಠೆಯ ಸಂಕೇತವಾಗಿ ವಿಶ್ವದಾದ್ಯಂತ ಮುಸ್ಲಿಮರಿಂದ ಬಕ್ರೀದ್ ಹಬ್ಬ ಆಚರಿಸಲ್ಪಡುತ್ತಾ ಬಂದಿದೆ.

ಬಕ್ರೀದ್ ಹಬ್ಬ ಎಂದರೆ ಕೇವಲ ಪ್ರಾಣಿಬಲಿ ಕೊಡುವ ಒಂದು ಕ್ರಿಯೆಯಲ್ಲ, ಇದರಲ್ಲಿ ತ್ಯಾಗ ಬಲಿದಾನಗಳ ಜೊತೆಗೇ ಸಮುದಾಯದೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಪ್ರವಾದಿಗಳು ಆಜ್ಞಾಪಿಸಿದ್ದಾರೆ. ಅಂತೆಯೇ ಹಬ್ಬದ ದಿನದಂದು ಸಾಧ್ಯವಾದಷ್ಟು ಜನರನ್ನು ಭೇಟಿಯಾಗಿ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವುದೂ ಒಂದು ಆಚರಣೆಯಾಗಿದೆ.

ಮುಸ್ಲಮಾನರು ಈ ಹಬ್ಬಕ್ಕೆ ಹೊಸ ಉಡುಪುಗಳನ್ನು ತೊಡುವುದು ಕಡ್ಡಾಯವಲ್ಲದಿದ್ರೂ ಉತ್ತಮವಾದ ಕಾರ್ಯವಾಗಿದೆ.ಆದ ಕಾರಣ ತಮಗೆ ಮತ್ತು ಇಡಿಯ ಕುಟುಂಬದವರಿಗೆ ಹೊಸ ಬಟ್ಟೆಗಳನ್ನು ಹೊಲಿಸಿ ಈ ದಿನ ಉಟ್ಟುಕೊಳ್ಳುವುದು ಸಹಾ ಸಂತೋಷವನ್ನು ಹೆಚ್ಚಿಸುವ ಕ್ರಿಯೆಯಾಗಿದೆ. ಸಮಾಜದಲ್ಲಿರುವ ಎಲ್ಲಾ ವರ್ಗದ ಜನರೂ ಹೊಸಬಟ್ಟೆಗಳನ್ನು ತೊಡಲು ಸಾಧ್ಯವಾಗುವಂತೆ ಹಲವಾರು ಸಂಘಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು ಎಷ್ಟೇ ಬಡವರಾಗಿದ್ದರೂ ದಾನರೂಪದಲ್ಲಿ ಸಿಕ್ಕ ಬಟ್ಟೆಗಳನ್ನು ತೊಟ್ಟು ಸಮಾಜದಲ್ಲಿ ಎಲ್ಲರೊಂದಿಗೆ ನಗುಮೊಗದಿಂದ ಬೆರೆತು ಹಬ್ಬದ ಸಂತೋಷವನ್ನು ಅನುಭವಿಸುತ್ತಾರೆ.

ಪ್ರವಾದಿ ಇಬ್ರಾಹಿಮರ ಸತ್ಯನಿಷ್ಠೆಯ ಪರೀಕ್ಷೆಯ ಪ್ರಕಾರ ನಾಲ್ಕು ಕಾಲುಗಳ ಪ್ರಾಣಿಯೊಂದನ್ನು ಈದ್ ನಮಾಜ್ ಬಳಿಕ ಕುರ್ಬಾನಿಯ ರೂಪದಲ್ಲಿ ಬಲಿನೀಡಲಾಗುತ್ತದೆ. ಇದು ಕುರಿ, ಎತ್ತು ಅಥವಾ ಒಂಟೆಯಾಗಿರಬಹುದು. ಆದರೆ ಕುರ್ಬಾನಿಗೆ ಅರ್ಹವಾಗುವ ಪ್ರಾಣಿಯನ್ನು ಆರಿಸಲು ಕೆಲವು ಮಾನದಂಡಗಳಿವೆ. ಪ್ರಾಣಿಯು ಆರೋಗ್ಯವಂತವಾಗಿರಬೇಕು, ಒಂದು ಕಾಲನ್ನು ನೆಲದ ಮೇಲಿಡದೇ ಕುಂಟುತ್ತಿರಬಾರದು, ಅಂಗವಿಕಲವಾಗಿರಬಾರದು, ಗಾಯಗೊಂಡಿರಬಾರದು, ಸಾವಿನ ಅವಸ್ಥೆಯಲ್ಲಿರಬಾರದು ಇತ್ಯಾದಿ.

ಬಕ್ರೀದ್ ಹಬ್ಬದ ಮುಂಜಾನೆ ಇಡಿಯ ಊರಿನ ಜನರೆಲ್ಲರೂ ಈದ್ಗಾ ಮೈದಾನಕ್ಕೆ ತೆರಳುತ್ತಾರೆ. ಈ ವ್ಯವಸ್ಥೆ ಇಲ್ಲದ ಊರಿನಲ್ಲಿ ಪ್ರಮುಖ ಮಸೀದಿಗಳಲ್ಲಿಯೇ ಈದ್ ಪ್ರಾರ್ಥನೆಯನ್ನು ಆಯೋಜಿಸಲಾಗಿರುತ್ತದೆ. ಹೋಗುವ ಮತ್ತು ಹಿಂದಿರುಗುವ ದಾರಿಯಲ್ಲಿ ಅತಿ ಹೆಚ್ಚು ಜನರನ್ನು ಭೇಟಿಯಾಗಲು ಸಾಧ್ಯವಾಗುವಂತೆ ಒಂದು ದಾರಿಯಲ್ಲಿ ತೆರಳಿ ಬೇರೆ ದಾರಿಯಲ್ಲಿ ಹಿಂದಿರುಗುವುದೂ ಬಕ್ರೀದ್ ಹಬ್ಬದ ಇನ್ನೊಂದು ಕ್ರಮವಾಗಿದೆ. ಈದ್ ನಮಾಜ್ ಬಳಿಕ ಪರಸ್ಪರ ಶುಭಾಶಯಗಳನ್ನು ಹಂಚಿಕೊಂಡು ಜನರು ಸಂಭ್ರಮಿಸುತ್ತಾರೆ. ಈ ವರ್ಷದ ಈದ್ ಹಬ್ಬವು ಸರ್ವರ ಬಾಳಿನಲ್ಲಿ ಸುಖ – ಸಮೃದ್ದಿ ಶಾಂತಿಯನ್ನು ತರಲೆಂದು ಹಾರೈಕೆ.

ಜನಧ್ವನಿ ಪತ್ರಿಕಾ ಬಳಗ

Leave a Reply

Your email address will not be published. Required fields are marked *

error: Content is protected !!