janadhvani

Kannada Online News Paper

ಉತ್ತರ ಕರ್ನಾಟಕ ಜಲಾವೃತ,ಜನ ಜೀವನ ಅಸ್ತವ್ಯಸ್ತ: ರಾಜ್ಯದಲ್ಲಿ ಸಂಪುಟ ರಹಿತ ಸರ್ಕಾರ, ಸಿಎಂ ದೆಹಲಿಯಲ್ಲಿ

ಬೆಂಗಳೂರು (ಆಗಸ್ಟ್.06); ಕಳೆದ ವರ್ಷ ಕೇರಳ ಹಾಗೂ ಕೊಡಗನ್ನು ನಾಮಾವಶೇಷಗೊಳಿಸಿದ್ದ ಭೀಕರ ಮಳೆ ಈ ಬಾರಿ ರಾಜ್ಯದ ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಮಳೆಯ ಆರ್ಭಟಕ್ಕೆ ರಾಯಚೂರು, ಬೆಳಗಾವಿ, ಬಾಗಲಕೋಟೆ ಹಾಗೂ ಚಿಕ್ಕೋಡಿ ಜಿಲ್ಲೆಗಳ ಹಲವು ಭಾಗಗಳು ಜಲಾವೃತವಾಗಿವೆ. ಆದರೆ, ನೆರೆ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಬೇಕಿದ್ದ ರಾಜ್ಯ ಸರ್ಕಾರ ಮಾತ್ರ ಇನ್ನೂ ಸಚಿವ ಸಂಪುಟ ರಚನೆ ಮಾಡದೆ ವಿಳಂಭ ನೀತಿ ಅನುಸರಿಸುತ್ತಿದೆ. ಅಲ್ಲದೆ ಸಂಪುಟ ರಚನೆ ಕುರಿತು ಚರ್ಚಿಸಲು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ದೆಹಲಿ ಪ್ರವಾಸದಲ್ಲಿದ್ದಾರೆ.

ಬಿಎಸ್​ವೈ ಅವರ ಈ ನಡೆ ಇದೀಗ ಕಟು ಟೀಕೆಗೆ ಗುರಿಯಾಗಿದೆ. ಯಡಿಯೂರಪ್ಪ ಅವರ ನಡೆಯನ್ನು ಟ್ವೀಟರ್​ನಲ್ಲಿ ಕಟುವಾಗಿ ಟೀಕಿಸಿರುವ ರಾಜ್ಯ ಜೆಡಿಎಸ್ ಘಟಕ, “ರೋಮ್ ಹೊತ್ತಿ ಉರಿಯುವಾಗ ದೊರೆ ನೀರೊ ಪಿಟೀಲು ಬಾರಿಸುತ್ತಿದ್ದ. ಹಾಗೆಯೇ ಉತ್ತರ ಕರ್ನಾಟಕ ಭಾರೀ ಮಳೆಯಿಂದ ಜರ್ಜರಿತವಾಗಿರುವಾಗ ಯಡಿಯೂರಪ್ಪನವರು ದೆಹಲಿಗೆ ಹೋಗಿ ಕುಳಿತಿದ್ದಾರೆ. ಕರ್ನಾಟಕದಲ್ಲಿ ಸಮಸ್ಯೆ ಹೇಳಿಕೊಳ್ಳೋಕೆ ಮಂತ್ರಿಮಂಡಲವೂ ಇಲ್ಲ. ಇದೇನಾ ನಿಮ್ಮ ಜನಮೆಚ್ಚಿನ ಆಡಳಿತ ಮರ್ಯಾದಾ ಪುರುಷೋತ್ತಮರೇ” ಎಂದು ಯಡಿಯೂರಪ್ಪನವರ ಕಾಲೆಳೆದಿದೆ.

ಇನ್ನು ರಾಜ್ಯ ಸರ್ಕಾರದ ಕಾರ್ಯವೈಖರಿ ಕುರಿತು ಕಿಡಿ ಕಾರಿರುವ ಮಾಜಿ ಸಚಿವ ಕೃಷ್ಣಭೈರೇಗೌಡ, “ರಾಜ್ಯ ಸರ್ಕಾರ ಅಸ್ಥಿತ್ವಕ್ಕೆ ಬಂದು 12 ದಿನಗಳೇ ಕಳೆದಿವೆ. ಆದರೆ, ಇನ್ನೂ ಸಂಪುಟ ರಚನೆಯಾಗಿಲ್ಲ. ಮುಖ್ಯಮಂತ್ರಿಯೂ ದೆಹಲಿಗೆ ಹೋಗಿ ಕುಳಿತಿದ್ದಾರೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಭೀಕರ ಮಳೆಯಿಂದಾಗಿ ನೆರೆ ಸಮಸ್ಯೆ ಬಿಗಡಾಯಿಸಿದೆ. ಆದರೆ, ಸಮಸ್ಯೆಯನ್ನು ಆಲಿಸಲು ರಾಜ್ಯದಲ್ಲಿ ಒಬ್ಬೇ ಒಬ್ಬ ಸಚಿವರೂ ಇಲ್ಲ” ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ.

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿ ಎರಡು ವಾರಗಳೇ ಕಳೆದಿವೆ. ಆದರೆ, ಸಚಿವ ಸಂಪುಟ ಮಾತ್ರ ಈವರೆಗೆ ಕಗ್ಗಂಟಾಗಿಯೇ ಉಳಿದಿದೆ. ಪರಿಣಾಮ ರಾಜ್ಯದಲ್ಲಿ ಸಚಿವರೇ ಇಲ್ಲದೆ ಅಭಿವೃದ್ಧಿ ನಿಂತ ನೀರಾಗಿದೆ. ಈ ಕುರಿತು ಕೆಲ ದಿನಗಳ ಹಿಂದೆಯೇ ಕುಟುಕಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ “ರಾಜ್ಯದಲ್ಲಿ ಏಕವ್ಯಕ್ತಿ ಸಂಪುಟ ಅಧಿಕಾರ ನಡೆಸುತ್ತಿದೆ” ಎಂದು ಕಿಡಿಕಾರಿದ್ದರು.

ನಿರಂತರ ಟೀಕೆಗಳು ಎದುರಾದರೂ ಸಹ ಸಂಪುಟ ಮಾತ್ರ ರಚನೆಯಾಗಿರಲಿಲ್ಲ. ಇದೀಗ ಕಳೆದ ಕೆಲ ದಿನಗಳಿಂದ ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಮಳೆ ಎಡೆಬಿಡದೆ ಸುರಿಯುತ್ತಿದ್ದು ಭಾಗಶಃ ಹಲವಾರು ಪ್ರದೇಶಗಳು ಜಲಾವೃತವಾಗಿವೆ. ನೆರೆಯಿಂದಾಗಿ ಜನ ತತ್ತರಿಸುತ್ತಿದ್ದಾರೆ. ಹೀಗಾಗಿ ಈ ಭಾಗಕ್ಕೆ ಸರ್ಕಾರದ ತುರ್ತು ಸಹಾಯದ ಅವಶ್ಯಕತೆ ಇದೆ. ಆದರೆ, ಸಂಪುಟ ರಚನೆಯಾಗುವುದು ಎಂದು? ಜನರ ಸಮಸ್ಯೆಗಳಿಗೆ ಕಿವಿಯಾಗುವುದು ಎಂದು? ಹಾಗೂ ಸರ್ಕಾರ ನೆರೆ ಪರಿಹಾರಕ್ಕೆ ಮುಂದಾಗುವುದು ಎಂದು? ಎಂಬುದಕ್ಕೆ ಬಿಜೆಪಿ ನಾಯಕರೇ ಉತ್ತರಿಸಬೇಕಿದೆ.

error: Content is protected !! Not allowed copy content from janadhvani.com