janadhvani

Kannada Online News Paper

ತ್ರಿವಳಿ ತಲಾಖ್ ಮಸೂದೆಯನ್ನು ಆದ್ಯತಾ ಪಟ್ಟಿಯಿಂದ ಕೈಬಿಟ್ಟ ಕೇಂದ್ರ ಸರಕಾರ?

ನವದೆಹಲಿ, ಜು.22: ಮುಸ್ಲಿಮ್ ಸಮುದಾಯದಲ್ಲಿ ಚಾಲ್ತಿಯಲ್ಲಿದ್ದ ತ್ರಿವಳಿ ತಲಾಖ್ ಸಂಪ್ರದಾಯವನ್ನು ಕೆಲವು ಅಲ್ಪಜ್ಞಾನಿಗಳು ದುರುಪಯೋಗ ಪಡಿಸಿರುವುದನ್ನು ಮುಂದಿಟ್ಟು ಆ ಸಂಪ್ರದಾಯವನ್ನು ನಿಷೇಧಿಸಲು ಮುಂದಾಗಿದ್ದ ಕೇಂದ್ರ ಎನ್ಡಿಎ ಸರಕಾರದ ತ್ರಿವಳಿ ತಲಾಕ್ ಮಸೂದೆಗೆ ಬಿಜೆಪಿಯ ಮಿತ್ರ ಪಕ್ಷ ಜೆಡಿಯು ತನ್ನ ವಿರೋಧವನ್ನು ಈಗಾಗಲೇ ಸ್ಪಷ್ಟ ಪಡಿಸಿರುವುದರಿಂದ ಹಾಗೂ ಹಲವು ಇತರ ಮಿತ್ರ ಪಕ್ಷಗಳೂ ಸಂಪೂರ್ಣ ಸಹಮತ ಹೊಂದಿರದೇ ಇರುವುದರಿಂದ ಈ ಮಸೂದೆ ಜಾರಿಯನ್ನು ತನ್ನ ಆದ್ಯತಾ ಪಟ್ಟಿಯಿಂದ ಕೈಬಿಟ್ಟಿರುವ ಸುಳಿವು ದೊರಕಿದೆ.

ಈ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಜೂರುಗೊಳಿಸಲು ಅಗತ್ಯ ಬೆಂಬಲ ಸರಕಾರಕ್ಕೆ ಅಗತ್ಯವಿರುವುದರಿಂದ ಅದು ಸದ್ಯ ಪ್ರಮುಖ ಆದ್ಯತಾ ಪಟ್ಟಿಯಲ್ಲಿಲ್ಲವೆಂದು ಸರಕಾರಿ ಮೂಲಗಳು ತಿಳಿಸಿವೆ.

ಈಗಿನ ಸಂಸತ್ ಅಧಿವೇಶನ ಜುಲೈ 26ರಂದು ಅಂತ್ಯಗೊಳ್ಳಲಿದೆ. ಕಳೆದ ತಿಂಗಳು ವಿಪಕ್ಷಗಳ ವಿರೋಧದ ನಡುವೆ ಮಂಡನೆಯಾದ ಮಸೂದೆಯ ಮೇಲಿನ ಚರ್ಚೆಯನ್ನು ಇನ್ನೂ ಕೈಗೆತ್ತಿಕೊಳ್ಳಲಾಗಿಲ್ಲ. ಸರಕಾರಕ್ಕೆ ಲೋಕಸಭೆಯಲ್ಲಿ ಸಮಸ್ಯೆಯಿಲ್ಲದೇ ಇದ್ದರೂ ರಾಜ್ಯಸಭೆಯಲ್ಲಿ ಬೆಂಬಲದ ಕೊರತೆಯಿದೆ. ಈ ಅಧಿವೇಶನದೊಳಗೆ ಮಸೂದೆ ಎರಡೂ ಸದನಗಳಿಂದ ಅಂಗೀಕಾರಗೊಂಡು ರಾಷ್ಟ್ರಪತಿಗಳ ಅಂಕಿತ ಪಡೆಯದೇ ಇದ್ದಲ್ಲಿ ಈಗ ಜಾರಿಯಲ್ಲಿರುವ ಸುಗ್ರೀವಾಜ್ಞೆಯ ಅವಧಿ ಕೂಡ ಅಷ್ಟರೊಳಗೆ ಅಂತ್ಯವಾಗಲಿದೆ. ಮೇಲ್ಮನೆಯಲ್ಲಿ ಅಂಗೀಕಾರ ಪಡೆಯುವ ಕುರಿತಾದ ಅನಿಶ್ಚಿತತೆ ಮುಂದುವರಿದರೆ ಸುಗ್ರೀವಾಜ್ಞೆಯನ್ನು ಮರು ಹೊರಡಿಸುವ ಸಾಧ್ಯತೆಯಿದೆಯೆನ್ನಲಾಗಿದೆ.